ಬೆಂಗಳೂರು: ‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ನಿರ್ವಹಣೆ, ದುರಸ್ತಿ ಮತ್ತು ನವೀಕರಣ (ಎಂಆರ್‌ಒ) ಕೇಂದ್ರ ಆರಂಭಿಸಲು ಇಂಡಿಗೊ ವಿಮಾನಯಾನ ಸಂಸ್ಥೆಯು ₹1,100 ಕೋಟಿ ಹೂಡಿಕೆ ಮಾಡಲಿದೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.
‘ಎಂಆರ್‌ಒ ಕೇಂದ್ರವಾಗಿ ಬೆಂಗಳೂರನ್ನು ಆಯ್ಕೆ ಮಾಡಿಕೊಂಡ ಇಂಡಿಗೊದ ನಿರ್ಧಾರ ಸ್ವಾಗತಾರ್ಹ. ಕರ್ನಾಟಕವನ್ನು ಎಂಆರ್‌ಒ ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸುವಲ್ಲಿ ಈ ಹೂಡಿಕೆ ಮಹತ್ವದ ಹೆಜ್ಜೆಯಾಗಲಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘31 ಎಕರೆ ಪ್ರದೇಶದಲ್ಲಿ ಈ ಕೇಂದ್ರ ಅಸ್ತಿತ್ವಕ್ಕೆ ಬರಲಿದೆ. ನೇರವಾಗಿ 750 ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಕೇಂದ್ರವು 4 ದೊಡ್ಡ ವಿಮಾನ ಮತ್ತು ಎಂಟು ಚಿಕ್ಕ ವಿಮಾನಗಳ ಸರ್ವಿಸ್‌ಗೆ ಸ್ಥಳಾವಕಾಶ ಇರುವ ಹ್ಯಾಂಗರ್ ಹೊಂದಿರಲಿದೆ’ ಎಂದು ಅವರು ವಿವರಿಸಿದ್ದಾರೆ.
‘ಒಂದು ದೊಡ್ಡ ಮತ್ತು ಎರಡು ಚಿಕ್ಕ ವಿಮಾನಗಳಿಗೆ ಏಕಕಾಲದಲ್ಲಿ ಪೇಂಟಿಂಗ್ ಮಾಡಬಹುದಾದ ಪೇಂಟಿಂಗ್ ಹ್ಯಾಂಗರ್ ಸಹ ಇಲ್ಲಿ ಇರಲಿದೆ. ಇಂಡಿಗೊ ಕಂಪನಿಯು ಎ350 ಮತ್ತು ಎ320/ಎ321ಎಕ್ಸ್‌ಎಲ್‌ಆರ್ ವಿಮಾನಗಳನ್ನು ಖರೀದಿಸುತ್ತಿದ್ದು, ಅವುಗಳ ಸರ್ವಿಸ್‌ಗೂ ಈ ಕೇಂದ್ರ ಬಳಕೆಯಾಗಲಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.