ADVERTISEMENT

ಹೊಸ ವರ್ಷದಿಂದ ಪಡಿತರ ಚೀಟಿಗೆ ‘ಇಂದಿರಾ’ ಕಿಟ್‌: ರಾಜ್ಯ ಸರ್ಕಾರ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 15:41 IST
Last Updated 18 ನವೆಂಬರ್ 2025, 15:41 IST
   

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ ನೀಡುತ್ತಿರುವ ಐದು ಕಿಲೋ ಅಕ್ಕಿಯ ಬದಲು ಪ್ರತಿ ಪಡಿತರ ಚೀಟಿಗೆ ‘ಇಂದಿರಾ’ ಆಹಾರ ಕಿಟ್ ವಿತರಣೆ ಯೋಜನೆಯನ್ನು ಜಾರಿಗೊಳಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ಜನವರಿ ತಿಂಗಳಿನಿಂದ ಈ ಕಿಟ್‌‌ ಫಲಾನುಭವಿಗಳ ಕೈ ಸೇರುವ ಸಾಧ್ಯತೆಯಿದೆ.

ಈ ಆಹಾರ ಕಿಟ್‌ಗೆ ‘ಇಂದಿರಾ’ (ಐಎನ್‌ಡಿಐಆರ್‌ಎ – ಇಂಟೆಗ್ರೇಟೆಡ್‌ ನ್ಯೂಟ್ರಿಷಿಯನ್‌ ಆ್ಯಂಡ್ ಡಯೆಟರಿ ಇನಿಷಿಯೇಟಿವ್ ಫಾರ್ ರಿವೈಟಲೈಷಿಂಗ್ ಅನ್ನಭಾಗ್ಯ ಬೆನಿಫಿಷರೀಶ್– ಅನ್ನಭಾಗ್ಯ ಫಲಾನುಭವಿಗಳನ್ನು ಪುನರುಜ್ಜೀವನಗೊಳಿಸುವ ಸಮಗ್ರ ಪೋಷಣೆ ಮತ್ತು ಆಹಾರ ಉಪಕ್ರಮ) ಎಂದು ಹೆಸರಿಡಲಾಗಿದೆ.

ಪಡಿತರ ಚೀಟಿದಾರರ ಸಂಖ್ಯೆಗೆ ಅನುಗುಣವಾಗಿ ಮೂರು ವಿಭಾಗಗಳಾಗಿ ವಿಂಗಡಿಸಿ ಈ ಕಿಟ್‌ನಲ್ಲಿ ಆಹಾರ ಪದಾರ್ಥಗಳನ್ನು ವಿತರಿಸಲಾಗುವುದು. ಒಬ್ಬರು ಅಥವಾ ಇಬ್ಬರು ಸದಸ್ಯರಿದ್ದರೆ ಕಿಟ್‌ನಲ್ಲಿ 750 ಗ್ರಾಂ ತೊಗರಿ ಬೇಳೆ, ಅರ್ಧ ಲೀಟರ್‌ ಅಡುಗೆ ಎಣ್ಣೆ, ತಲಾ ಅರ್ಧ ಕಿಲೋ ಸಕ್ಕರೆ ಮತ್ತು ಉಪ್ಪು, ಮೂವರು ಅಥವಾ ನಾಲ್ವರು ಸದಸ್ಯರಿದ್ದರೆ ಒಂದೂವರೆ ಕಿಲೋ ಗ್ರಾಂ ತೊಗರಿ ಬೇಳೆ, ಒಂದು ಲೀಟರ್‌ ಅಡುಗೆ ಎಣ್ಣೆ, ತಲಾ ಒಂದು ಕಿಲೋ ಸಕ್ಕರೆ ಮತ್ತು ಉಪ್ಪು, ಐವರು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿದ್ದರೆ 2,250 ಗ್ರಾಂ ತೊಗರಿ ಬೇಳೆ, ಒಂದೂವರೆ ಲೀಟರ್‌ ಅಡುಗೆ ಎಣ್ಣೆ, ತಲಾ ಒಂದೂವರೆ ಕಿಲೋ ಸಕ್ಕರೆ ಮತ್ತು ಉಪ್ಪು ನೀಡಲಾಗುವುದು ಎಂದೂ ಆದೇಶದಲ್ಲಿ ವಿವರಿಸಲಾಗಿದೆ.

ADVERTISEMENT

ಕಿಟ್‌ಗೆ ಅಗತ್ಯವಾದ ಆಹಾರ ಪದಾರ್ಥಗಳನ್ನು ಆಹಾರ ಇಲಾಖೆಯ ಆಯುಕ್ತರು ಟೆಂಡರ್‌ ಆಹ್ವಾನಿಸಿ ಖರೀದಿಸಬೇಕು. ಈ ಪದಾರ್ಥಗಳ ಪ್ರಮಾಣ ಮತ್ತು ಗುಣಮಟ್ಟವನ್ನೂ ಆಯುಕ್ತರು ಖಚಿತಪಡಿಸಿಕೊಳ್ಳಬೇಕು. ಪ್ರತಿ ಕಿಟ್‌ಗೆ ಜಿಎಸ್‌ಟಿ, ಪ್ಯಾಕೇಜಿಂಗ್, ಸಗಟು ಸಾಗಣೆ ವೆಚ್ಚ, ಸಹಾಯಧನ, ಚಿಲ್ಲರೆ ಲಾಭಾಂಶ, ಲೋಡಿಂಗ್, ಅನ್‌ಲೋಡಿಂಗ್‌, ಮೂರನೇ ವ್ಯಕ್ತಿಯಿಂದ ಗುಣಮಟ್ಟ ತಪಾಸಣೆ ವೆಚ್ಚ ಸೇರಿ ಗರಿಷ್ಠ ಒಟ್ಟು ಮಿತಿ ₹ 422.88 ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.