ADVERTISEMENT

ಇಂದಿರಾ ಮೊಮ್ಮಗನೆಂಬ ಮೋಡಿ.. ಗ್ರಾಮೀಣರ ಖುಷಿ

ಬಳ್ಳಾರಿಯತ್ತ ಸಾಗಿದ ಭಾರತ್‌ ಜೋಡೊ ಯಾತ್ರೆ

ಜಿ.ಬಿ.ನಾಗರಾಜ್
Published 13 ಅಕ್ಟೋಬರ್ 2022, 19:05 IST
Last Updated 13 ಅಕ್ಟೋಬರ್ 2022, 19:05 IST
ಮೊಳಕಾಲ್ಮುರು ತಾಲ್ಲೂಕಿನ ಬಿ.ಜಿ.ಕೆರೆಯಿಂದ ಸಾಗುತ್ತಿದ್ದ ಭಾರತ್‌ ಜೋಡೊ ಯಾತ್ರೆಯಲ್ಲಿ ಗುಂಡಿ ಬಿದ್ದ ರಸ್ತೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೆವಾಲಾ ಹೆಜ್ಜೆ ಹಾಕಿದರು.
ಮೊಳಕಾಲ್ಮುರು ತಾಲ್ಲೂಕಿನ ಬಿ.ಜಿ.ಕೆರೆಯಿಂದ ಸಾಗುತ್ತಿದ್ದ ಭಾರತ್‌ ಜೋಡೊ ಯಾತ್ರೆಯಲ್ಲಿ ಗುಂಡಿ ಬಿದ್ದ ರಸ್ತೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೆವಾಲಾ ಹೆಜ್ಜೆ ಹಾಕಿದರು.   

ಮೊಳಕಾಲ್ಮುರು (ಚಿತ್ರದುರ್ಗ): ‘ಭೀಕರ ಬರಗಾಲದಲ್ಲಿ ಕೆಂಪು ಜೋಳ ಕೊಟ್ಟಿದ್ದ ಇಂದಿರಾ ಗಾಂಧಿ ಮೊಮ್ಮಗ ಬಂದಿದ್ದಾರೆ. ಇಂದಿರಮ್ಮನನ್ನು ನೋಡಲು ಆಗಲಿಲ್ಲ, ಮೊಮ್ಮಗನನ್ನಾದರೂ ಕಣ್ತುಂಬಿಕೊಳ್ಳೋಣ...’ ಹೀಗೆ ಹೇಳುತ್ತ ರಸ್ತೆ ಬದಿಯಿಂದ
ಬಾಗಿ ಪಾದಯಾತ್ರೆಯತ್ತ ದೃಷ್ಟಿ ಹರಿಸಿದ ವೃದ್ಧೆ ಸಿದ್ಧಮ್ಮ, ರಾಹುಲ್‌ ಕಂಡೊಡನೆ ಪುಳಕಿತರಾದರು.

ರಾಜ್ಯದ ವಿವಿಧೆಡೆಯಿಂದ ಪಾದಯಾತ್ರೆಗೆ ಹರಿದುಬಂದ ಜನರಲ್ಲಿ ಬಹುತೇಕರಿಗೆ ರಾಹುಲ್‌, ಇಂದಿರಾ ಗಾಂಧಿ ಮೊಮ್ಮಗ ಎಂಬುದೇ ಕುತೂಹಲದ ಕೇಂದ್ರವಾಗಿದೆ. ಇಂದಿರಾ ಗಾಂಧಿ ಕಾಲದಲ್ಲಿ ಭೂಮಿ ಪಡೆದವರು, ಬರಗಾಲದಲ್ಲಿ ಪಡಿತರದ ನೆರವು ದೊರೆತವರು ಅಭಿಮಾನದಿಂದ ಭಾರತ್‌ ಜೋಡೊ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಹಿರಿಯೂರು, ಚಳ್ಳಕೆರೆ ದಾಟಿಯಾತ್ರೆಯು ಮೊಳಕಾಲ್ಮುರು ತಲುಪುತ್ತಿದ್ದಂತೆಯೇ ಈ ಅಭಿಮಾನ ಇಮ್ಮಡಿಗೊಂಡಂತೆ ಕಾಣುತ್ತಿದೆ.

‘ಆಗ ನನಗಿನ್ನೂ 18 ವರ್ಷ. ಭೀಕರ ಬರ ಪರಿಸ್ಥಿತಿ ತಲೆದೋರಿ ಒಪ್ಪೊತ್ತಿನ ಊಟಕ್ಕೂ ತೊಂದರೆ ಆಗಿತ್ತು. ನಮ್ಮಂತಹ ಬಡವರು ಬದುಕುವುದೇ ಕಷ್ಟವಾಗಿತ್ತು. ಕೆಂಪುಜೋಳವನ್ನು ಇಂದಿರಮ್ಮ ಮನೆಗೆ ತಲುಪಿಸಿದ್ದರು. ಅಂದಿನಿಂದ ಇಂದಿರಾ ಗಾಂಧಿ ಬಗ್ಗೆ ಮೂಡಿರುವ ಹೆಮ್ಮೆ ಇನ್ನೂ ಕಡಿಮೆಯಾಗಿಲ್ಲ..’ ಎಂದರು ಸಂಡೂರು ತಾಲ್ಲೂಕಿನ ಬಂಡ್ರಿಯ ನಾಗಪ್ಪ.

ADVERTISEMENT

‘ಉಳುವವನೇ ಭೂಮಿಯ ಒಡೆಯ’ ಕಾನೂನಿನಲ್ಲಿ ನಾಲ್ಕು ಎಕರೆ ಭೂಮಿ ಪಡೆದಿರುವ ಮೊಳಕಾಲ್ಮುರು ತಾಲ್ಲೂಕಿನ ಕೋನಸಾಗರದ ಓಬಳ್ಳಮ್ಮ ಅವರೂ ಇಂದಿರಾ ಗಾಂಧಿ ಮೇಲಿನ ಅಭಿಮಾನದಿಂದಲೇ ಯಾತ್ರೆಗೆ ಬಂದಿದ್ದರು. ಬಿ.ಜಿ. ಕೆರೆಯಿಂದ ಕೋನಸಾಗರದತ್ತ ಪಾದಯಾತ್ರೆ ಸಾಗುತ್ತಿರುವಾಗ ರಸ್ತೆಬದಿಯಲ್ಲಿ ಕಾಯುತ್ತಿದ್ದ ಓಬಳಮ್ಮ ರಾಹುಲ್‌ ಕಂಡೊಡನೆ ಹರ್ಷಚಕಿತರಾದರು.

‘ಇಂದಿರಾ ಗಾಂಧಿ ಕಾಲದಲ್ಲಿ ‍ಪತಿಗೆ ನಾಲ್ಕು ಎಕರೆ ಭೂಮಿ ಸಿಕ್ಕಿತ್ತು. ತುಂಡು ಭೂಮಿ ಇಲ್ಲದೇ ಕೂಲಿ ಮಾಡುವುದೇ ಕಾಯಕವಾಗಿತ್ತು. ಇಂದಿರಮ್ಮನ ಮೊಮ್ಮಗ ಬರುತ್ತಿರುವುದು ಗೊತ್ತಾಗಿ ಯಾತ್ರೆ ನೋಡಲು ಬಂದೆ’ ಎಂದು ಹೇಳುವಾಗ ಓಬಳಮ್ಮ ಮುಖದಲ್ಲಿ ಕೃತಜ್ಞತೆಯ ಭಾವವಿತ್ತು.

ಚಿತ್ರದುರ್ಗ ಜಿಲ್ಲೆಯಲ್ಲಿ ಸಾಗುತ್ತಿರುವ ಭಾರತ್‌ ಜೋಡೊ ಯಾತ್ರೆ ಗುರುವಾರ ಬಿ.ಜಿ. ಕೆರೆಯಿಂದ 21 ಕಿ.ಮೀ. ದೂರದ ಮೊಳಕಾಲ್ಮುರು ತಲುಪಿತು. ಹೆದ್ದಾರಿ ಮಾರ್ಗದಲ್ಲಿ ತೆರಳುತ್ತಿದ್ದ ಭಾರತ್‌ ಜೋಡೊ ಯಾತ್ರೆ ಗುರುವಾರ ಹಳ್ಳಿ ಮಾರ್ಗದಲ್ಲಿ ಸಾಗಿತು. ರೇಷ್ಮೆ, ಶೇಂಗಾ ಜಮೀನುಗಳನ್ನು ನೋಡುತ್ತ ರೈತರೊಂದಿಗೆ ಬೆಳೆ, ವೈಜ್ಞಾನಿಕ ಬೆಲೆ ಬಗ್ಗೆ ರಾಹುಲ್‌ ಚರ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.