ADVERTISEMENT

ಮೈಸೂರು ಸ್ಯಾಂಡಲ್ ಸೋಪ್ ‘ಬ್ರ್ಯಾಂಡ್ ಮೌಲ್ಯ’ ಹೆಚ್ಚಿಸಲು ಸಲಹೆ ಆಹ್ವಾನ: ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 4 ಜುಲೈ 2023, 14:18 IST
Last Updated 4 ಜುಲೈ 2023, 14:18 IST
ಸಚಿವ ಎಂ.ಬಿ ಪಾಟೀಲ
ಸಚಿವ ಎಂ.ಬಿ ಪಾಟೀಲ   

ಬೆಂಗಳೂರು: ‘ಮೈಸೂರು ಸ್ಯಾಂಡಲ್‌ ಸೋಪ್‌ನ ಬ್ರ್ಯಾಂಡ್ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಉದ್ಯಮ ಪರಿಣತರಿಂದ ಸಲಹೆಗಳನ್ನು ಮುಕ್ತವಾಗಿ ಆಹ್ವಾನಿಸಲಾಗಿದೆ. ಆಸಕ್ತರು karnatakavision2030@gmail.comಗೆ ತಮ್ಮ ಸಲಹೆಗಳನ್ನು ಕಳಿಸಬಹುದು’ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಮೈಸೂರು ಸ್ಯಾಂಡಲ್‌ ಸೋಪ್‌ ಉತ್ಪನ್ನ ಆರಂಭಿಸಿದ್ದರು. ಅದು ರಾಜ್ಯದ ಮಕುಟಮಣಿಯ ಅನರ್ಘ್ಯ ರತ್ನವಾಗಿದೆ. ಅವರ ಆಶಯಕ್ಕೆ ತಕ್ಕಂತೆ ಈ ಹೆಜ್ಜೆ ಇಡಲು ತೀರ್ಮಾನಿಸಲಾಗಿದೆ. ಉದ್ಯಮಿಗಳು ಈ ನಿಟ್ಟಿನಲ್ಲಿ ಸೂಕ್ತ ಸಲಹೆಗಳನ್ನು ಕೊಟ್ಟು, ಸರ್ಕಾರದ ಪ್ರಯತ್ನಕ್ಕೆ ಕೈಜೋಡಿಸಬೇಕು’ ಎಂದಿದ್ದಾರೆ.

‘ಮೈಸೂರು ಸ್ಯಾಂಡಲ್‌ ಸೋಪ್‌ ರಾಜ್ಯದ ಸಾಬೂನು ಮಾರುಕಟ್ಟೆಯಲ್ಲೂ ಸಿಂಹಪಾಲು ಹೊಂದಿಲ್ಲ. ಅಲ್ಲದೆ, ಈ ಬ್ರ್ಯಾಂಡ್‌ ಉತ್ಪನ್ನವು ದಕ್ಷಿಣ ಭಾರತಕ್ಕಷ್ಟೇ ಸೀಮಿತವಾಗಿದೆ. ಮಾರುಕಟ್ಟೆಯಲ್ಲಿ ಉಳಿದ ಹೆಸರಿನ ಸಾಬೂನುಗಳು ಅತ್ಯಧಿಕ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಜೊತೆಗೆ ಒಟ್ಟು ವಹಿವಾಟಿನಲ್ಲಿ ಶೇ 3ರಷ್ಟು ಮಾತ್ರ ರಫ್ತು ವಹಿವಾಟಿನ ಮೂಲಕ ಬರುತ್ತಿದೆ. ಇದು ನಿಜಕ್ಕೂ ಬೇಸರದ ಸಂಗತಿ’ ಎಂದಿದ್ದಾರೆ.

ADVERTISEMENT

‘ಇದು ಸ್ಪರ್ಧಾತ್ಮಕ ಮಾರುಕಟ್ಟೆಯ ಯುಗ. ನಮ್ಮ ಬಳಿ ಮೈಸೂರು ಸ್ಯಾಂಡಲ್‌ ಸೋಪ್‌ನಂಥ ಉತ್ಕೃಷ್ಟ ಉತ್ಪನ್ನವಿದ್ದೂ ನಾವು ಅವಕಾಶವನ್ನು ಬಳಸಿಕೊಳ್ಳುವಲ್ಲಿ ಸೋತಿದ್ದೇವೆ. ಈ ನಿರಾಶಾದಾಯಕ ಪರಿಸ್ಥಿತಿಯನ್ನು ನಿವಾರಿಸಲು ಸರ್ಕಾರ ಉತ್ಸುಕವಾಗಿದೆ. ಒಟ್ಟಿನಲ್ಲಿ ರಾಜ್ಯದ ಈ ಹೆಮ್ಮೆಯ ಉತ್ಪನ್ನಕ್ಕೆ ಮರುಜೀವ ತುಂಬಿ, ಮಾರುಕಟ್ಟೆಯನ್ನು ಸೃಷ್ಟಿಸಲು ಹಲವು ಉಪಕ್ರಮಗಳನ್ನು ಸದ್ಯದಲ್ಲೇ ಆರಂಭಿಸಲಾಗುವುದು’ ಎಂದೂ ಸಚಿವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.