ADVERTISEMENT

ಉದ್ಯಮ ತ್ವರಿತ ಸ್ಥಾಪನೆಗೆ ಕಾಯ್ದೆ: ಸುಗ್ರೀವಾಜ್ಞೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 10:34 IST
Last Updated 3 ಜುಲೈ 2020, 10:34 IST
   

ಬೆಂಗಳೂರು: ರಾಜ್ಯದಲ್ಲಿ ತ್ವರಿತಗತಿಯಲ್ಲಿ ಕೈಗಾರಿಕೆಗಳನ್ನು ಆರಂಭಿಸಲು ಇದ್ದ ಅಡ್ಡಿಗಳನ್ನು ತೆಗೆದು ಹಾಕುವ ಉದ್ದೇಶದಿಂದ ‘ಕರ್ನಾಟಕ ಕೈಗಾರಿಕಾ ಸೌಲಭ್ಯಗಳ ಕಾಯ್ದೆ–2002’ಕ್ಕೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಲಾಗಿದೆ.

ಸುಗ್ರೀವಾಜ್ಞೆಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದು, ಈ ಸಂಬಂಧ ರಾಜ್ಯಪತ್ರವನ್ನೂ ಹೊರಡಿಸಲಾಗಿದೆ. ಇದರಿಂದ ಕೈಗಾರಿಕಾ ಘಟಕಗಳ ಸ್ಥಾಪನೆಗೆ ತಕ್ಷಣವೇ ಅನುಮತಿ ಸಿಗಲಿದೆ. ಕಳೆದ ವಾರ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ತೀರ್ಮಾನ ತೆಗೆದುಕೊಳ್ಳಲಾಗಿತ್ತು.

ಎನ್ಒಸಿ, ಬಿಲ್ಡಿಂಗ್‌ ಪ್ಲಾನ್‌, ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಮಾಣಪತ್ರ, ಏಕಗವಾಕ್ಷಿ ಅನುಮತಿ, ಭೂಪರಿವರ್ತನೆ ಇತ್ಯಾದಿಗಳನ್ನು ಶೀಘ್ರವೇ ಮಾಡಿಕೊಡಲಾಗುವುದು.

ADVERTISEMENT

ಕರ್ನಾಟಕ ಉದ್ಯೋಗ ಮಿತ್ರದಡಿ ಅರ್ಜಿ ಸಲ್ಲಿಸಿದ ತಕ್ಷಣ ಜಿಲ್ಲಾ ಸಮಿತಿ ಮತ್ತು ರಾಜ್ಯಮಟ್ಟದ ಉನ್ನತಾಧಿಕಾರ ಸಮಿತಿಗಳು ಒಪ್ಪಿಗೆ ನೀಡಿ ದೃಢೀಕರಿಸಲಿವೆ. ಲ್ಯಾಂಡ್‌ ಆಡಿಟ್‌ ಸಮಿತಿಯು ಕೈಗಾರಿಕೆ ಸ್ಥಾಪನೆಗಾಗಿ ಅರ್ಜಿದಾರ ನಮೂದಿಸಿದ ಜಮೀನಿನ ಮಾಹಿತಿ ತರಿಸಿಕೊಂಡು ಪರಿಶೀಲಿಸುತ್ತದೆ. ಇವೆಲ್ಲದರ ಪರಿಶೀಲನೆ ಮುಗಿಸಿ ಒಪ್ಪಿಗೆ ನೀಡಿದ ತಕ್ಷಣವೇ ಉದ್ಯಮಿ ಕೈಗಾರಿಕೆ ಸ್ಥಾಪನೆ ಕಾರ್ಯಕ್ಕೆ ಚಾಲನೆ ನೀಡಬಹುದು.

ಮುಖ್ಯವಾಗಿ, ಕೈಗಾರಿಕಾ ಘಟಕದ ಕಟ್ಟಡ ನಿರ್ಮಾಣ, ಯಂತ್ರೋಪಕರಣ ಸ್ಥಾಪನೆ ಇತ್ಯಾದಿ ಕೆಲಸಗಳನ್ನು ಮುಗಿಸಿಕೊಳ್ಳಬಹುದು. ಕೈಗಾರಿಕೆ ಸ್ಥಾಪನೆಗೆ ಮೊದಲೇ ಪಡೆಯಬೇಕಾಗಿದ್ದ ಪರಿಸರ ಅನುಮತಿಯೂ ಸೇರಿದಂತೆ ವಿವಿಧ ಬಗೆಯ ‍ಪ್ರಮಾಣಪತ್ರಗಳು ಸಿಗುವ ತನಕ ಕಾಯಬೇಕಿಲ್ಲ. ಕಾರ್ಖಾನೆ ಸ್ಥಾಪನೆಗೆ ಚಾಲನೆ ನೀಡಿದ ಮೂರು ವರ್ಷದೊಳಗೆ ಅಥವಾ ವಾಣಿಜ್ಯ ಕಾರ್ಯಾಚರಣೆ ಆರಂಭಿಸುವ ದಿನಾಂಕದೊಳಗೆ ಪಡೆದರೆ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.