ನವದೆಹಲಿ: ಮೈಸೂರಿನಲ್ಲಿ ಕಂಪನಿಯ ಕ್ಯಾಂಪಸ್ ವಿಸ್ತರಣೆಗಾಗಿ ಭೂಸಂತ್ರಸ್ತರಿಗೆ ನಿಗದಿಪಡಿಸಿದ ಹೆಚ್ಚಿನ ಭೂಪರಿಹಾರ ಪ್ರಶ್ನಿಸಿ ಇನ್ಫೊಸಿಸ್ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಹೈಕೋರ್ಟ್‌ನ ವಿಭಾಗೀಯ ಪೀಠವು 2024ರ ಅಕ್ಟೋಬರ್‌ನಲ್ಲಿ ನೀಡಿದ್ದ ತೀರ್ಪು ಪ್ರಶ್ನಿಸಿ ಕಂಪನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದೀಪಾಂಕರ್ ದತ್ತ ಹಾಗೂ ಮನಮೋಹನ್ ಅವರ ಪೀಠವು, ‘ಹೈಕೋರ್ಟ್ ತೀರ್ಪು ನೀಡಿದ 160 ದಿನಗಳಲ್ಲಿ ಮೇಲ್ಮನವಿ ಸಲ್ಲಿಸಬೇಕಿತ್ತು. ಆದರೆ, ಕಂಪನಿ ಮೇಲ್ಮನವಿ ಸಲ್ಲಿಸುವಾಗ ವಿಳಂಬ ಮಾಡಿದೆ. ಹೀಗಾಗಿ, ಅರ್ಜಿ ವಜಾಗೊಳಿಸಲಾಗಿದೆ’ ಎಂದಿತು.
ದಾಖಲೆಗಳನ್ನು ಕನ್ನಡದಿಂದ ಇಂಗ್ಲಿಷ್‌ಗೆ ಭಾಷಾಂತರಿಸಲು ಬಹಳ ಸಮಯ ವ್ಯಯವಾಯಿತು ಎಂದು ಕಂಪನಿ ಪರ ವಕೀಲರು ಪೀಠದ ಗಮನಕ್ಕೆ ತಂದರು. ‘ಅರ್ಜಿ ವಜಾಗೊಳಿಸಬಾರದು. ಮೇಲ್ಮನವಿ ಅರ್ಜಿಗೆ ಪೂರಕವಾಗಿ ಹೊಸದಾಗಿ ಪ್ರಮಾಣಪತ್ರ ಸಲ್ಲಿಕೆಗೆ ಅವಕಾಶ ನೀಡಬೇಕು’ ಎಂದು ಕೋರಿದರು. ಆದಾಗ್ಯೂ, ಈ ವಿನಂತಿಯನ್ನು ಪರಿಗಣಿಸಲು ಪೀಠ ನಿರಾಕರಿಸಿತು.
ಮೈಸೂರಿನಲ್ಲಿ ಕ್ಯಾಂಪಸ್ ವಿಸ್ತರಣೆಗಾಗಿ ಇನ್ಫೊಸಿಸ್ 2005ರಲ್ಲಿ ಹೆಚ್ಚುವರಿಯಾಗಿ 1.05 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿತ್ತು. ಎಕರೆಗೆ ₹4.85 ಲಕ್ಷ ಪರಿಹಾರವನ್ನು ವಿಶೇಷ ಭೂಸ್ವಾಧೀನ ಅಧಿಕಾರಿ ನಿಗದಿಪಡಿಸಿದ್ದರು. ಇದನ್ನು ಒಪ್ಪದ ಭೂಮಾಲೀಕರು, 1894ರ ಭೂಸ್ವಾಧೀನ ಕಾಯ್ದೆಯ ಸೆಕ್ಷನ್ 18ರ ಅಡಿಯಲ್ಲಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದರು. ಇದಕ್ಕೆ ಕಂಪನಿ ಒಪ್ಪಿರಲಿಲ್ಲ. ಬಳಿಕ ಭೂಮಾಲೀಕರು ಮೈಸೂರಿನ ನ್ಯಾಯಾಲಯದ ಮೆಟ್ಟಿಲೇರಿದ್ದರು. ಚದರ ಅಡಿಗೆ ₹220 ಪರಿಹಾರ ಹಾಗೂ ಬಡ್ಡಿ ನೀಡಬೇಕು ಎಂದು ನ್ಯಾಯಾಲಯ 2020ರಲ್ಲಿ ನಿರ್ದೇಶನ ನೀಡಿತ್ತು. ಈ ಆದೇಶ ಪ್ರಶ್ನಿಸಿ ಕಂಪನಿಯು ಹೈಕೋರ್ಟ್ ಮೆಟ್ಟಿಲೇರಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.