ಮೀಸಲಾತಿ(ಸಾಂಕೇತಿಕ ಚಿತ್ರ)
ಬೆಂಗಳೂರು: ನಾಗಮೋಹನದಾಸ್ ಆಯೋಗದ ವರದಿಯಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಜನಸಂಖ್ಯೆಯನ್ನು ವ್ಯವಸ್ಥಿತವಾಗಿ ಮತ್ತು ಉದ್ದೇಶಪೂರ್ವಕವಾಗಿ ಕಡಿಮೆ ತೋರಿಸುವ ಮೂಲಕ ಒಳ ಮೀಸಲಾತಿ ಪ್ರಮಾಣವನ್ನು ಕಡಿಮೆಗೊಳಿಸಲಾಗಿದೆ. ಇದರಿಂದ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಛಲವಾದಿ ಮೀಸಲಾತಿ ರಕ್ಷಣಾ ವೇದಿಕೆ ಆರೋಪಿಸಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಸಂಚಾಲಕ ಪಟಾಪಟ್ ಶ್ರೀನಿವಾಸ್, ‘ನಾಗಮೋಹನದಾಸ್ ಆಯೋಗದ ವರದಿಯಲ್ಲಿ ಹೊಲೆಯ ಸಂಬಂಧಿತ ಬಲಗೈ ಜಾತಿಗಳಿಗೆ ಶೇಕಡ 5ರಷ್ಟು ಒಳ ಮೀಸಲಾತಿ ಪ್ರಮಾಣ ಹಂಚಿಕೆ ಮಾಡಿರುವುದು ಖಂಡನೀಯ. ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಪ್ರಮಾಣವನ್ನು ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು.
ಆದಿ ಆಂಧ್ರ, ಆದಿ ಕರ್ನಾಟಕ ಹಾಗೂ ಆದಿ ದ್ರಾವಿಡ ಜಾತಿಗಳೇ ಅಲ್ಲವೆಂದು ನಾಗಮೋಹನದಾಸ್ ಆಯೋಗವೇ ಹೇಳಿದೆ. ಆದಿ ಆಂಧ್ರ, ಆದಿ ಕರ್ನಾಟಕ ಹಾಗೂ ಆದಿ ದ್ರಾವಿಡ ಗುಂಪುಗಳಿಗೆ ಶೇ 1ರಷ್ಟು ಒಳ ಮೀಸಲಾತಿ ಹಂಚಿಕೆ ಮಾಡುವ ಮೂಲಕ ಬಲಗೈ ಜಾತಿಗಳಿಗೆ ಅನ್ಯಾಯ ಮಾಡಿದೆ. ನಾಗಮೋಹನದಾಸ್ ಅವರು ಬಲಗೈ ಜಾತಿಗಳ ಬಗ್ಗೆ ಪೂರ್ವಗ್ರಹಪೀಡಿತರಾಗಿದ್ದಾರೆ. ವ್ಯವಸ್ಥಿತವಾಗಿ ಪ್ರಜ್ಞಾಪೂರ್ವಕವಾಗಿಯೇ ನಮ್ಮ ಸಮುದಾಯದ ಜನಸಂಖ್ಯೆಯನ್ನು ಕಡಿಮೆ ಮಾಡಿದ್ದಾರೆ’ ಎಂದು ದೂರಿದರು.
ಒಳ ಮೀಸಲಾತಿ ಜಾಗೃತಿ ಸಮಿತಿಯ ಸಂಚಾಲಕ ನವೀನ್ ಮನಿಯ ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.