
ಬೆಂಗಳೂರು: ಒಳ ಮೀಸಲಾತಿ ಅನುಷ್ಠಾನ ವಿಳಂಬ ಮಾಡಲು ರಾಜ್ಯ ಸರ್ಕಾರ ಕಾಯ್ದೆ ರೂಪಿಸುವ ನಾಟಕ ಮಾಡುತ್ತಿದೆ. ಇಂತಹ ನಡೆಯ ಹಿಂದೆ ಒಳಮೀಸಲಾತಿ ಆದೇಶ ರದ್ದು ಮಾಡುವ ದುರುದ್ದೇಶವಿದೆ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಡಿ.8ಕ್ಕೆ ಬೆಳಗಾವಿ ಅಧಿವೇಶನ ಆರಂಭವಾಗುತ್ತದೆ. ಅಷ್ಟರೊಳಗೆ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ಗಳಲ್ಲಿ ಒಳಮೀಸಲಾತಿ ವಿರುದ್ಧ ಪ್ರಕರಣಗಳು ದಾಖಲಾಗುತ್ತವೆ. ಸರ್ಕಾರದ ಆದೇಶ ರದ್ದಾಗುತ್ತದೆ ಎಂಬ ದುರಾಲೋಚನೆ ರಾಜ್ಯ ಸರ್ಕಾರಕ್ಕೆ ಇದೆ. ಆರ್ಥಿಕ ಸಂಕಷ್ಟದ ಕಾರಣ ನೇಮಕಾತಿ ಮುಂದೆ ಹೋಗಲಿ ಎಂಬ ಉದ್ದೇಶವೂ ವಿಳಂಬಕ್ಕೆ ಕಾರಣ ಇರಬಹುದು’ ಎಂದರು.
‘ಪರಿಶಿಷ್ಟ ಸಮುದಾಯದಲ್ಲಿ ಒಳ ಮೀಸಲಾತಿ ಜಾರಿಯಾಗಬೇಕು ಎಂದು 30 ವರ್ಷಗಳಿಂದ ಹೋರಾಟ ನಡೆಸಿದ್ದಾರೆ. 101 ಜಾತಿಗಳಿಗೆ ಸಾಮಾಜಿಕ ನ್ಯಾಯ ಸಿಗಬೇಕು ಎಂಬ ಆಶಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುತುವರ್ಜಿ ವಹಿಸಿ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ಬಂದು 1 ವರ್ಷ 3 ತಿಂಗಳಾಗಿದೆ. ಆದರೂ, ಒಳಮೀಸಲಾತಿಯ ಸಮರ್ಪಕ ಅನುಷ್ಠಾನಕ್ಕೆ ಅಗತ್ಯ ಕ್ರಮಕೈಗೊಂಡಿಲ್ಲ’ ಎಂದು ದೂರಿದರು.
‘ಒಳ ಮೀಸಲಾತಿ ಕುರಿತು ರಾಜ್ಯ ಸರ್ಕಾರ ದೋಷಪೂರಿತ ಆದೇಶಗಳನ್ನು ಮಾಡುತ್ತಿದೆ. ಆದೇಶವನ್ನು ಪ್ರಶ್ನಿಸಿ ಈಚೆಗೆ ಹೈಕೋರ್ಟ್‌ನಲ್ಲಿ ಪ್ರಕರಣ ಬಂದಾಗ ರಾಜ್ಯ ಸರ್ಕಾರದ ಪರವಾಗಿ ಯಾರೂ ಹಾಜರಾಗಿಲ್ಲ. ಹಾಗಾಗಿ, ಆದೇಶಕ್ಕೆ ಭಾಗಶಃ ತಡೆಯಾಗಿದೆ’ ಎಂದು ಹೇಳಿದರು.
ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ‘ಒಳ ಮೀಸಲಾತಿ ವಿಚಾರದಲ್ಲಿ ಗೊಂದಲಗಳಿವೆ. ಸಂವಿಧಾನಬದ್ಧವಾಗಿ ಯೋಚಿಸದೆ ರಾಜಕೀಯ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅಲೆಮಾರಿ ಸಮುದಾಯವು ಪ್ರತ್ಯೇಕ ಮೀಸಲಾತಿ ಕೇಳುತ್ತಿದೆ. ಅವರಿಗೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.