ADVERTISEMENT

ಜಿಕೆವಿಕೆಯಲ್ಲಿ ‘ಕೀಟ ಲೋಕ’

ಗೋಲಿಯಾಥ್‌ ದುಂಬಿಯ ಆಕರ್ಷಣೆ: ಮಾಹಿತಿ ಪಡೆದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 11:22 IST
Last Updated 30 ನವೆಂಬರ್ 2019, 11:22 IST
‘ಕೀಟವಿಸ್ಮಯ’ದಲ್ಲಿ ಪ್ರದರ್ಶಿಸಲಾದ ವಿಭಿನ್ನ ಕೀಟಗಳನ್ನು ಕುತೂಹಲದಿಂದ ವೀಕ್ಷಿಸುತ್ತಿರುವ ವಿದ್ಯಾರ್ಥಿಗಳು ಪ್ರಜಾವಾಣಿ ಚಿತ್ರ
‘ಕೀಟವಿಸ್ಮಯ’ದಲ್ಲಿ ಪ್ರದರ್ಶಿಸಲಾದ ವಿಭಿನ್ನ ಕೀಟಗಳನ್ನು ಕುತೂಹಲದಿಂದ ವೀಕ್ಷಿಸುತ್ತಿರುವ ವಿದ್ಯಾರ್ಥಿಗಳು ಪ್ರಜಾವಾಣಿ ಚಿತ್ರ   

ಯಲಹಂಕ: ಇಲ್ಲಿನ ಜಿಕೆವಿಕೆ ಆವರಣದಲ್ಲಿ ಶುಕ್ರವಾರ ಕೀಟ ಲೋಕ ಅನಾವರಣಗೊಂಡಿದೆ. ಸಂಸ್ಕರಿಸಿದ ಐದು ಸಾವಿರ ಕೀಟಗಳು, ಎರಡು ಸಾವಿರ ಜೀವಂತ ಕೀಟಗಳು, ಕೀಟದ ವರ್ಣಚಿತ್ರಗಳು, ಅದರ ವಾಸಸ್ಥಳ, ಹುಳುಗಳ ಹುತ್ತ, ಕಣಜ, ಗೂಡು ಸೇರಿದಂತೆ ಕೀಟಕ್ಕೆ ಸಂಬಂಧಿಸಿದ ಸಂಪೂರ್ಣ ಚಿತ್ರಣ ನೀಡುವ ‘ಕೀಟ ವಿಸ್ಮಯ’‍ಪ್ರದರ್ಶನ ಮಕ್ಕಳನ್ನು ಆಕರ್ಷಿಸುತ್ತಿದೆ.

ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗದ ವತಿಯಿಂದ ಜಿಕೆವಿಕೆಯ ಡಾ.ಬಾಬು ರಾಜೇಂದ್ರಪ್ರಸಾದ್ ಸಭಾಂಗಣದಲ್ಲಿ ಆಯೋಜಿಸಿರುವ ಮೂರು ದಿನಗಳ ‘ಕೀಟ ವಿಸ್ಮಯ’ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಪ್ರಪಂಚದ ಅತ್ಯಂತ ಭಾರವಾದ ಗೋಲಿಯಾಥ್ ದುಂಬಿ ಮತ್ತು ಅದರ ಮಾದರಿ ಜನರ ಗಮನ ಸೆಳೆಯುತ್ತಿದೆ. ಆಫ್ರಿಕಾ ಮೂಲದ ಈ ಕೀಟವು 42 ಗ್ರಾಂ ಭಾರವಿದ್ದು, 192 ಮಿಲಿ ಮೀಟರ್ ಉದ್ದವಿದೆ. ಇದರ ಜೊತೆಗೆ ಪ್ರಪಂಚದ ಅತಿಚಿಕ್ಕ ಕೀಟ ‘ಫೇರಿ ಫ್ಲೈ’ ಜನರನ್ನು ಆಕರ್ಷಿಸುತ್ತಿದೆ.

ADVERTISEMENT

ತಸಾರ್ ಮತ್ತು ಎರಿ ಜಾತಿಯ ರೇಷ್ಮೆ ಹುಳುಗಳು, ಎಲೆಯನ್ನು ಹೋಲುವ ಕೀಟದ ಭಿತ್ತಿ ಚಿತ್ರ, ಸೊಳ್ಳೆ ಮತ್ತು ನೊಣದಿಂದ ಮನುಷ್ಯನಿಗೆ ಹರಡುವ ರೋಗಗಳ ಕುರಿತ ಪ್ರದರ್ಶನ, ವಲಸೆಗೆ ಪ್ರಸಿದ್ಧವಾಗಿರುವ ಮೊನಾರ್ಕ್‌ ಕೀಟ, ಜೇನು ನೊಣಗಳ ವಿವಿಧ ಪ್ರಭೇದ
ಗಳು ಹಾಗೂ ರಾಜ್ಯದ ಸಹ್ಯಾದ್ರಿಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಚಿಟ್ಟೆಗಳೂ ವಿಶೇಷ ಆಕರ್ಷಣೆಯಾಗಿವೆ.

ವಿದ್ಯಾರ್ಥಿಗಳು, ಶಿಕ್ಷಕರು, ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರು, ಕುತೂಹಲದಿಂದ ಪ್ರದರ್ಶನವನ್ನು ವೀಕ್ಷಿಸುವುದರ ಜೊತೆಗೆ ತಜ್ಞರಿಂದ ಮಾಹಿತಿ ಪಡೆದರು. ಅಲ್ಲದೆ ಮಕ್ಕಳು ಕೀಟಗಳ ಪಕ್ಕದಲ್ಲಿ ನಿಂತು ಛಾಯಾಚಿತ್ರಗಳನ್ನು ತೆಗೆಸಿಕೊಂಡರೆ ಕೆಲವರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.