ADVERTISEMENT

ಅಂಬೇಡ್ಕರ್ ಪುತ್ಥಳಿಗೆ ಅಪಮಾನ; ಕಲಬುರಗಿಯ ಹಲವೆಡೆ ರಸ್ತೆ ತಡೆ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2024, 7:27 IST
Last Updated 23 ಜನವರಿ 2024, 7:27 IST
<div class="paragraphs"><p>ಕಲಬುರಗಿಯಲ್ಲಿ ಮಂಗಳವಾರ ರಾಮ ಮಂದಿರ ವೃತ್ತದಲ್ಲಿ ನಡೆದ ಪ್ರತಿಭಟನೆ</p></div>

ಕಲಬುರಗಿಯಲ್ಲಿ ಮಂಗಳವಾರ ರಾಮ ಮಂದಿರ ವೃತ್ತದಲ್ಲಿ ನಡೆದ ಪ್ರತಿಭಟನೆ

   

ಕಲಬುರಗಿ: ಇಲ್ಲಿನ ಕೋಟನೂರ (ಡಿ) ಪ್ರದೇಶದ ಲುಂಬಿಣಿ ಉದ್ಯಾನದಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಮಾಡಿದ್ದನ್ನು ಖಂಡಿಸಿ ರಾಮ ಮಂದಿರ ವೃತ್ತ, ನಾಗನಹಳ್ಳಿ ರಿಂಗ್ ರೋಡ್, ಲುಂಬಿಣಿ ಉದ್ಯಾನದ ಸೇರಿದಂತೆ ನಗರದ ಹಲವೆಡೆ ಮಂಗಳವಾರ ಅಂಬೇಡ್ಕರ್ ಅಭಿಮಾನಿಗಳು, ಪರಿಶಿಷ್ಟ ಜಾತಿಯ ಮುಖಂಡರು ಪ್ರತಿಭಟನೆ ನಡೆಸಿದರು.

ಸೋಮವಾರ ತಡರಾತ್ರಿ ಉದ್ಯಾನದಲ್ಲಿನ ಅಂಬೇಡ್ಕರ್ ಪುತ್ಥಳಿಗೆ ಕಿಡಿಗೇಡಿಗಳು ಅಪಮಾನ ಮಾಡಿದರು. ಬೆಳಿಗ್ಗೆ ಈ ಕೃತ್ಯ ತಿಳಿಯುತ್ತಿದ್ದಂತೆ ವಿಜಯಪುರ- ಕಲಬುರಗಿ ರಸ್ತೆಯಲ್ಲಿ ಹಾಗೂ ರಾಮ ಮಂದಿರ ವೃತ್ತದಲ್ಲಿ ಸಾವಿರಾರು ಅಂಬೇಡ್ಕರ್ ಅಭಿಮಾನಿಗಳು, ಮಹಿಳೆಯರು, ಯುವಕರು, ಮುಖಂಡರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದರು.

ADVERTISEMENT

ಮಹಾನ್ ನಾಯಕನಿಗೆ ಅಪಮಾನ ಮಾಡಿ ಹಲವು ಗಂಟೆಗಳಾಗಿವೆ. ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ. ಮಕ್ಕಳು ಶಾಲೆ ಬಿಟ್ಟು, ಕೂಲಿಕಾರರು ಕೆಲಸ ಬಿಟ್ಟ ನಡು ರಸ್ತೆಯಲ್ಲಿ ಕುಳಿತಿದ್ದಾರೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ನಮ್ಮ ಮನವಿ ಕೇಳಲು ವಿಳಂಬ ಮಾಡಿದ್ದಾರೆ. ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಸೋಮವಾರ ತಡರಾತ್ರಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಕಿಡಿಗೇಡಿಗಳ ರಾತ್ರಿ ಪಟಾಕಿ ಸಿಡಿಸಿದ್ದಾರೆ. ಅವರು ಯಾರು ಎಂಬುದನ್ನು ‌ಪತ್ತೆ ಹಚ್ಚಿ‌ ಎನ್‌ಕೌಂಟರ್ ಮಾಡಿ. ಇಲ್ಲವೇ ಅವರನ್ನು ನಮಗೆ ಒಪ್ಪಿಸಿ ನಾವು ಶಿಕ್ಷೆ ಕೊಡುತ್ತೇವೆ' ಎಂದು ಪ್ರತಿಭಟನಾ ನಿರತರು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರು ಪ್ರತಿಭಟನಾ ನಿರತರ ಸ್ಥಳಕ್ಕೆ ಬಂದ ಮಾತನಾಡಿ, 'ಡಾ.ಬಿ.ಆರ್.ಅಂಬೇಡ್ಕರ್ ಅವರು ನಮ್ಮೆಲ್ಲರಿಗೂ ನಾಯಕ. ಅವರಿಗೆ ಅಪಮಾನ ಮಾಡಿದವರನ್ನು ಪತ್ತೆಹಚ್ಚುವ ಕಾರ್ಯಾಚರಣೆಯಲ್ಲಿ ಪೊಲೀಸರು ಈಗಾಗಲೇ ಕಾರ್ಯಪ್ರವೃತರಾಗಿದ್ದಾರೆ.‌ ಶೀಘ್ರದಲ್ಲೇ ಪತ್ತೆಹಚ್ಚಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು' ಎಂದು‌ ಭರವಸೆ ನೀಡಿದರು.

ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಪ್ರತಿಭಟನಾಕಾರರ ಮನವಿ ಆಲಿಸಿದರು. ಬಳಿಕ ಅಂಬೇಡ್ಕರ್ ಪುತ್ಥಳಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ, 'ದೂರು ದಾಖಲಿಸಿಕೊಂಡು ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು. ಪ್ರಕರಣದ ತನಿಖೆ ಮುಗಿದ ಬಳಿಕ ನಿಮ್ಮ ಬೇಡಿಕೆಯಾಗಿರುವ ಹೊಸ ಪುತ್ಥಳಿಯನ್ನು ಜಿಲ್ಲಾಡಳಿತದ ವತಿಯಿಂದ ನಿರ್ಮಿಸಿಕೊಡಲಾಗುವುದು' ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಹಿಂಪಡೆದರು.

ಪ್ರತಿಭಟನೆ ನಡೆದ ರಸ್ತೆಗಳಲ್ಲಿ ಗಂಟೆಗಳ ಕಾಲ ಬಸ್, ಕಾರು, ಸರಕು ವಾಹನಗಳು ನಿಂತವು.‌ ಪ್ರಯಾಣಿಕರು ಪರದಾಡಿದರು. ರಾಮ ಮಂದಿರ ವೃತ್ತದಲ್ಲಿ ಟೈಯರ್‌ಗೆ ಬೆಂಕಿ ಹಚ್ಚಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.