ADVERTISEMENT

ಮೌಲ್ಯ ಮರೆತರೆ ಅರಾಜಕತೆ: ಕಾಗೇರಿ ಆತಂಕ

ಬೆಂಗಳೂರಿನಲ್ಲಿ ಬುಧವಾರ ನಡೆದ ಸಂಸದೀಯ ಮೌಲ್ಯಗಳ ಕುಸಿತ ತಡೆಗಟ್ಟಲು ಆತ್ಮಾವಲೋಕನ ಸಭೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 21:45 IST
Last Updated 24 ಫೆಬ್ರುವರಿ 2021, 21:45 IST
ಸಂಸದೀಯ ಮೌಲ್ಯಗಳ ಕುಸಿತ ತಡೆಗಟ್ಟುವ ಕುರಿತ ಆತ್ಮಾವಲೋಕನ ಸಭೆಯಲ್ಲಿ ಬಿ.ಎಸ್‌. ಯಡಿಯೂರಪ್ಪ, ವಿಶ್ವೇಶ್ವರ ಹೆಗಡೆ ಕಾಗೇರಿ, ಬಸವರಾಜ ಹೊರಟ್ಟಿ, ಸಿದ್ದರಾಮಯ್ಯ, ಎಸ್.ಆರ್ ಪಾಟೀಲ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ
ಸಂಸದೀಯ ಮೌಲ್ಯಗಳ ಕುಸಿತ ತಡೆಗಟ್ಟುವ ಕುರಿತ ಆತ್ಮಾವಲೋಕನ ಸಭೆಯಲ್ಲಿ ಬಿ.ಎಸ್‌. ಯಡಿಯೂರಪ್ಪ, ವಿಶ್ವೇಶ್ವರ ಹೆಗಡೆ ಕಾಗೇರಿ, ಬಸವರಾಜ ಹೊರಟ್ಟಿ, ಸಿದ್ದರಾಮಯ್ಯ, ಎಸ್.ಆರ್ ಪಾಟೀಲ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: 'ಮೌಲ್ಯಗಳನ್ನು ಮರೆತರೆ ಮುಂದೊಂದು ದಿನ ಅರಾಜಕತೆ ಎದುರಾಗಬಹುದು. ಅಂಥ ಪರಿಸ್ಥಿತಿ ಬರುವುದನ್ನು ತಡೆಯಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಕರ್ನಾಟಕ ಶಾಖೆಯ ವತಿಯಿಂದ ‘ಸಂಸದೀಯ ಮೌಲ್ಯಗಳ ಕುಸಿತ ತಡೆಗಟ್ಟಲು ಒಂದು ಆತ್ಮಾವಲೋಕನ’ ಕುರಿತು ಬುಧವಾರ ಇಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

‘ಮೌಲ್ಯಗಳನ್ನು ಉಳಿಸಿಕೊಳ್ಳುವ ಬಗ್ಗೆ ವಿಶ್ವಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಹೀಗಾಗಿ, ಸಂಸದೀಯ ವ್ಯವಸ್ಥೆ ಹೇಗಿರಬೇಕು ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಈ ಸಭೆ ಆಯೋಜಿಸಲಾಗಿದೆ’
ಎಂದರು.

ADVERTISEMENT

’ಜನಪ್ರತಿನಿಧಿಗಳು ಜನರ ಧ್ವನಿಯಾಗಬೇಕು. ವ್ಯವಸ್ಥೆಯ ಸುಳಿ ಆಗಬಾರದು. ಸಂವಿಧಾನದ ಚೌಕಟ್ಟಿನಲ್ಲಿ ಆಡಳಿತ ನಡೆಸುವ ವಿಚಾರದಲ್ಲಿ ರಾಜ್ಯ ಮೇಲ್ಪಂಕ್ತಿ ಆಗಬೇಕು’ ಎಂದೂ ಅವರು ಹೇಳಿದರು.

ಚಿಂತಕ ಗುರುರಾಜ ಕರಜಗಿ ಮಾತನಾಡಿ, ‘ಇವತ್ತಿನ ಮೌಲ್ಯಗಳ ಬಗ್ಗೆ ನಮಗೆ ಬೇಸರವಿದೆ. ಜನಪ್ರತಿನಿಧಿಗಳು ಜನರಿಗೆ ಮಾದರಿಯಾಗಬೇಕು. ಆದರೆ, ಇವತ್ತಿನ ಸನ್ನಿವೇಶ ಹಾಗಿಲ್ಲ. ಜನರನ್ನು ಯಾವಾಗಲೂ ಹಿಡಿದಿಡಲು ಸಾಧ್ಯವಿಲ್ಲ. ಅವರ ಆಕ್ರೋಶದ ಕಟ್ಟೆ ಯಾವಾಗ ಬೇಕಾದರೂ ಒಡೆಯಬಹುದು. ಇದನ್ನು ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು’ ಎಂದರು.

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌. ಆರ್‌. ಪಾಟೀಲ, ಸಚಿವರಾದ ಜಗದೀಶ ಶೆಟ್ಟರ್, ಅರವಿಂದ ಲಿಂಬಾವಳಿ, ಮಾಜಿ ಸಭಾಪತಿ ಡಿಎಚ್‌. ಶಂಕರಮೂರ್ತಿ, ಶಾಸಕರಾದ ಡಿ.ಕೆ. ಶಿವಕುಮಾರ್, ಎಚ್‌.ಕೆ. ಪಾಟೀಲ, ಕೃಷ್ಣ ಬೈರೇಗೌಡ, ದಿನೇಶ್‌ ಗುಂಡೂರಾವ್‌, ಕೆ.ಆರ್‌. ರಮೇಶ್ ಕುಮಾರ್, ಬೋಪಯ್ಯ, ಎಚ್‌. ವಿಶ್ವನಾಥ್, ಸಂಸದ ಶಿವಕುಮಾರ್ ಉದಾಸಿ ಹೀಗೆ ಸಂಸದರು, ಶಾಸಕರು, ವಿವಿಧ ಕ್ಷೇತ್ರಗಳ‌ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.