ADVERTISEMENT

ಒಳಮೀಸಲಾತಿ ಜಾರಿಗೆ ಕಾಲಹರಣ: ಛಲವಾದಿ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 15:49 IST
Last Updated 11 ಫೆಬ್ರುವರಿ 2026, 15:49 IST
ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ   

ಬೆಂಗಳೂರು: ‘ರಾಜ್ಯ ಸರ್ಕಾರ ಒಳ ಮೀಸಲಾತಿ ವಿಚಾರದಲ್ಲಿ ಕಾಲಹರಣ ಮಾಡುತ್ತಿದೆ. ಒಂದು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ನಿಮಗಿರುವ ಅಡ್ಡಿಯಾದರೂ ಏನು’ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

ತಕ್ಷಣವೇ ಒಳಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

‘ದಾವಣಗೆರೆಯ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ತಾವು ನೀಡಿದ ಭಾಷಣ ಕೇವಲ ರಾಜಕೀಯ ಪ್ರೇರಿತವಾಗಿದೆ. ಅದರಲ್ಲಿ ದಲಿತ ಮತ್ತು ಹಿಂದುಳಿದ ವರ್ಗಗಳ ಹಿತಾಸಕ್ತಿ ಎಳ್ಳಷ್ಟೂ ಕಾಣುತ್ತಿಲ್ಲ. ಜನರ ಕಣ್ಣಿಗೆ ಮಣ್ಣೆರಚುವ ಭಾಷಣಗಳಿಂದ ಸಮುದಾಯದ ಏಳಿಗೆ ಅಸಾಧ್ಯ’ ಎಂದು ಅವರು ಟೀಕಿಸಿದ್ದಾರೆ.

ADVERTISEMENT

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಕ್ರಮವಾಗಿ ಶೇ 15ರಿಂದ ಶೇ 17ಕ್ಕೆ ಅಂದರೆ ಎಸ್‌ಸಿಗೆ ಶೇ 3 ಮತ್ತು ಎಸ್‌ಟಿಗೆ ಶೇ 7ಕ್ಕೆ ಹೆಚ್ಚಿಸುವ ನಿರ್ಧಾರ ತೆಗೆದುಕೊಂಡಿದ್ದು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ. ಅಂದು ಆ ನಿರ್ಧಾರವನ್ನು ಚುನಾವಣಾ ಗಿಮಿಕ್‌ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದರು. ಈಗ ಅದೇ ಅಂಕಿ–ಅಂಶಗಳನ್ನು ಬಳಸಿಕೊಂಡು ವೇದಿಕೆಗಳ ಮೇಲೆ ಹಕ್ಕು ಸಾಧಿಸುತ್ತಿರುವುದು ನಿಮ್ಮ ನೈತಿಕ ಅಧಃಪತನಕ್ಕೆ ಸಾಕ್ಷಿ’ ಎಂದು ಹೇಳಿದ್ದಾರೆ.

‘ನೇಮಕಾತಿಯಲ್ಲಿ ಶೆಡ್ಯೂಲ್‌ 9ರ ಬದಲಾವಣೆಗಳನ್ನು ನಂತರದ ಹಂತದಲ್ಲಿ ಅಳವಡಿಸಿಕೊಳ್ಳಲು ಅವಕಾಶವಿದೆ. ತಡ ಮಾಡದೇ 2.84 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.