ಮೀಸಲಾತಿ(ಸಾಂಕೇತಿಕ ಚಿತ್ರ)
ನವದೆಹಲಿ: ಕರ್ನಾಟಕದಲ್ಲಿ ಅಲೆಮಾರಿಗಳಿಗೆ ಶೇ 1ರಷ್ಟು ಒಳಮೀಸಲಾತಿ ಕೊಡಿಸುವುದಾಗಿ ಕಾಂಗ್ರೆಸ್ ನಾಯಕರು ಭರವಸೆ ನೀಡಿದ ಕಾರಣ ಎಐಸಿಸಿ ಕಚೇರಿ ಆವರಣದಲ್ಲಿ ನಡೆಸುತ್ತಿದ್ದ ಧರಣಿಯನ್ನು ಕರ್ನಾಟಕ ಅಸ್ಪ್ರಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ ಬುಧವಾರ ಅಂತ್ಯಗೊಳಿಸಿತು.
‘ಪರಿಶಿಷ್ಟರ ಒಳಮೀಸಲಾತಿಯಲ್ಲಿ ನ್ಯಾ.ನಾಗಮೋಹನ್‌ದಾಸ್ ನೇತೃತ್ವದ ವರದಿಯಂತೆ ಅಲೆಮಾರಿ ಸಮುದಾಯಕ್ಕೆ ಶೇ 1ರಷ್ಟು ಮೀಸಲಾತಿ ನೀಡಲು ಮತ್ತು ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ವಿಶೇಷ ಆರ್ಥಿಕ ಪ್ಯಾಕೇಜ್‌ಗೆ ರಾಜ್ಯ ಸರ್ಕಾರದಿಂದ ತಾತ್ವಿಕ ಒಪ್ಪಿಗೆ ದೊರಕಿದೆ‘ ಎಂದು ಒಕ್ಕೂಟವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸಮುದಾಯದ ಮುಖಂಡರ ಜತೆಗೆ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತುಕತೆ ನಡೆಸಿದರು. ‘ಸಮುದಾಯದ ಬೇಡಿಕೆ ಈಡೇರಿಸಲು ಸರ್ಕಾರ ಸಿದ್ಧವಿದೆ. ದೀಪಾವಳಿ ಮುಗಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಲಾಗುತ್ತದೆ. ಒಂದು ವೇಳೆ, ಸಮಸ್ಯೆ ಬಗೆಹರಿಯದಿದ್ದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜತೆಗೆ ಸಭೆ ನಿಗದಿ ಮಾಡಿಸುವೆ‘ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಜತೆಗೆ ದೂರವಾಣಿಯಲ್ಲಿ ಚರ್ಚಿಸಿದರು. ‘ದಯವಿಟ್ಟು ರಾಜ್ಯಕ್ಕೆ ವಾಪಸ್ ಬನ್ನಿ. ಅಲೆಮಾರಿ ಸಮುದಾಯಗಳ ಸಮಸ್ಯೆ ಬಗೆಹರಿಸುತ್ತೇವೆ‘ ಎಂದು ಮಹದೇವಪ್ಪ ಅವರು ಹೋರಾಟಗಾರರಿಗೆ ಮನವಿ ಮಾಡಿದರು.
ಮಾತುಕತೆ ಸಂದರ್ಭದಲ್ಲಿ ಅಲೆಮಾರಿ ಸಮುದಾಯ ಮುಖಂಡರಾದ ಎ.ಎಸ್.ಪ್ರಭಾಕರ್, ಮಂಜುನಾಥ್ ದಾಯತ್ಕರ್, ಬಸವರಾಜ್ ನಾರಯಣಕರ್, ಚಾವಡಿ ಲೋಕೇಶ್, ಮಂಡ್ಯ ರಾಜಣ್ಣ, ಸಂದೀಪ್ ಕುಮಾರ್ ದಾಸರ್, ಶರಣಪ್ಪ ಚನ್ನದಾಸರ್, ಸಿಂದೋಳು ಸಮುದಾಯದ ಹನುಮಂತು, ಒಳ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಕರಿಯಪ್ಪ ಗುಡಿಮನಿ, ಕರ್ನಾಟಕ ಜನಶಕ್ತಿಯ ಅಧ್ಯಕ್ಷ ನೂರ್ ಶ್ರೀಧರ್ ಹಾಗೂ ‘ಎದ್ದೇಳು ಕರ್ನಾಟಕ’ದ ತಾರಾ ರಾವ್ ಹಾಜರಿದ್ದರು.
‘ಧರಣಿ ಅಂತ್ಯಗೊಳಿಸಿ ರಾಜ್ಯಕ್ಕೆ ಮರಳಲು ಒಕ್ಕೂಟ ತೀರ್ಮಾನಿಸಿದೆ. ಕೊಟ್ಟ ಮಾತಿನಂತೆ ರಾಜ್ಯ ಸರ್ಕಾರ ಹಾಗೂ ಎಐಸಿಸಿ ಮುಖಂಡರು ನಡೆದುಕೊಳ್ಳುತ್ತಾರೆಂಬ ವಿಶ್ವಾಸವಿದೆ. ಒಂದು ವೇಳೆ ನಮ್ಮ ನಿರೀಕ್ಷೆ ಹುಸಿಯಾದರೆ, ಮತ್ತೆ ನವದೆಹಲಿಗೆ ಬರುವುದು ಖಚಿತ’ ಎಂದು ಸಮುದಾಯದ ಮುಖಂಡರು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.