ಬೆಂಗಳೂರಿನ ನಾಗರಭಾವಿ ಸಮೀಪದ ಬಡಾವಣೆಯಲ್ಲಿ ಶಿಕ್ಷಕರೊಬ್ಬರು ಒಳಮೀಸಲು ಸಮೀಕ್ಷೆಗಾಗಿ ಮಂಗಳವಾರ ಮಾಹಿತಿ ಕಲೆ ಹಾಕಿದರು ಚಿತ್ರ:ರಂಜು ಪಿ.
ಬೆಂಗಳೂರು: ‘ಮೇಡಂ, ನಾವು ಮಾದಿಗ ಜಾತಿಯವರು. ನೀವು ನಮ್ಮ ಮನೆಗೆ ಬಂದಿದ್ದಿರಿ. ನಾವು ಮಾದಿಗರು ಎಂಬುದು ಮನೆ ಮಾಲೀಕರಿಗೆ ಗೊತ್ತಿಲ್ಲ. ಹೀಗಾಗಿ ನಾವು ಪರಿಶಿಷ್ಟ ಜಾತಿಯವರಲ್ಲ ಎಂದು ಹೇಳಿದೆವು. ಈಗ ನಮ್ಮ ನೈಜ ವಿವರ ತೆಗೆದುಕೊಳ್ಳಿ...’
ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ನಡೆಸುತ್ತಿರುವ ಸಮೀಕ್ಷೆಗಾಗಿ ನಗರದ ಬಸವನಗುಡಿಯ ವಸತಿ ಪ್ರದೇಶದಲ್ಲಿ ಮಾಹಿತಿ ಕಲೆ ಹಾಕುತ್ತಿದ್ದ ಶಿಕ್ಷಕರ ಜತೆ ಸಮೀಕ್ಷೆ ಪ್ರಕ್ರಿಯೆ ವೀಕ್ಷಿಸಲು ‘ಪ್ರಜಾವಾಣಿ’ ತೆರಳಿದ ಸಂದರ್ಭದಲ್ಲೇ ಬಂದ ಸಾರ್ವಜ ನಿಕರೊಬ್ಬರು ಹೇಳಿದ ಮಾತಿದು.
‘ನಾನು ಬ್ಯಾಂಕ್ ನೌಕರ. ಮಗುವಿನ ಶಾಲೆಗೆ ಹತ್ತಿರವೆಂದು ಬಸವನಗುಡಿ ಯಲ್ಲೇ ಮನೆ ಮಾಡಿದ್ದೇವೆ. ನಾವು ಮಾದಿಗರು ಎಂದು ಹೇಳಿದ ಕಾರಣಕ್ಕೆ, ಇಲ್ಲಿ ಮನೆಯೇ ಸಿಗಲಿಲ್ಲ. ಕಡೆಗೆ, ಪ್ರಭಾವಿ ಜಾತಿಯೊಂದರ ಹೆಸರು ಹೇಳಿ ಮಧ್ಯವರ್ತಿ ಮೂಲಕ ಮನೆ ಪಡೆದು ಕೊಂಡಿದ್ದೇವೆ. ಈಗ ನಾವು ಮಾದಿಗರು ಎಂದು ಗೊತ್ತಾದರೆ ಮಾಲೀಕರು ಮನೆ ಖಾಲಿ ಮಾಡಿಸಬಹುದು. ಮತ್ತೆ ಮನೆ ಹುಡುಕುವುದು ಕಷ್ಟವಾಗುತ್ತದೆ. ಹೀಗಾಗಿ ನಿಮಗೆ ಸುಳ್ಳು ಹೇಳಿದೆವು’ ಎಂದು ಹೇಳಿದರು.
ಸಮೀಕ್ಷೆ ನಡೆಸುತ್ತಿದ್ದ ಶಿಕ್ಷಕಿ ಆ ವ್ಯಕ್ತಿಯ ಕುಟುಂಬದ ವಿವರವನ್ನು ನಮೂದಿಸಿಕೊಂಡು ಮುಂದುವರೆದರು. ನಗರದ ಜಯನಗರ, ವಿಜಯನಗರ, ಬಸವೇಶ್ವರ ನಗರ, ಬ್ಯಾಟರಾಯನಪುರ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸುತ್ತಿದ್ದ ಶಿಕ್ಷಕರ ಜತೆಗೆ ಮತ್ತು ಅದರ ಪರಿಶೀಲನೆಗೆ ತೆರಳಿದ್ದ ಮೇಲ್ವಿಚಾರಕರ ಜತೆಗೆ ತೆರಳಿದ್ದಾಗಲೂ ಇಂತಹ ಹಲವು ಪ್ರಕರಣಗಳು ಎದುರಾದವು.
ಜಯನಗರ ವ್ಯಾಪ್ತಿಯಲ್ಲಿನ ಬ್ಯಾಂಕ್ ನೌಕರರ ಬಡಾವಣೆ ಒಂದರಲ್ಲಿ ಸಮೀಕ್ಷೆ ನಡೆಸುವಾಗ ಮನೆ ಮಾಲೀಕರೇ ಹೊರಬಂದು, ‘ಇಲ್ಲಿ ಯಾರೂ ಎಸ್ಸಿಗಳಿಲ್ಲ’ ಎಂದು ಹೇಳಿದರು. ಆ ಬಡಾವಣೆಯಲ್ಲಿದ್ದ ಕೆಲವು ಅಪಾರ್ಟ್‌ಮೆಂಟ್‌ಗಳ ಆವರಣ ಪ್ರವೇಶಿಸಲು ಭದ್ರತಾ ಸಿಬ್ಬಂದಿ ಬಿಡಲೇ ಇಲ್ಲ. ‘ಇಲ್ಲಿ ಯಾರೂ ಎಸ್ಸಿಗಳಿಲ್ಲ. ಯಾರೂ ಮಾಹಿತಿ ಕೊಡುವುದಿಲ್ಲ’ ಎಂದು ಹೇಳಿದರು. ಪರಿಶಿಷ್ಟ ಜಾತಿಯೇತರರ ಮಾಹಿತಿಯನ್ನೂ ಕಲೆ ಹಾಕಬೇಕು ಎಂದು ತಿಳಿಸಿದಾಗಲೂ ಪ್ರವೇಶ ನಿರಾಕರಿಸಿದರು.
ಆದರೆ, ಬಡಾವಣೆಯಿಂದ ಹೊರಬಂದು ಸಮೀಕ್ಷೆ ಮುಂದುವರೆಸುವಾಗ ಮಹಿಳೆಯೊಬ್ಬರು ಸ್ಕೂಟರ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ಮಾಹಿತಿ ನೀಡಿದರು. ‘ಬ್ಯಾಂಕಿಂಗ್ ವ್ಯವಹಾರದಲ್ಲಿ ಪ್ರಬಲವಾಗಿರುವ ಸಮುದಾಯ ಒಂದರ ಜನರು ಕಟ್ಟಿಕೊಂಡಿರುವ ಬಡಾವಣೆ ಇದು. ಇಲ್ಲಿ ಪರಿಶಿಷ್ಟ ಜಾತಿಯವರಿಗೆ ಮನೆ ನೀಡುವುದೇ ಇಲ್ಲ. ನಾವು ಸುಳ್ಳು ಹೇಳಿ ಮನೆ ಭೋಗ್ಯಕ್ಕೆ ಹಾಕಿಕೊಂಡಿದ್ದೇವೆ. ನಮ್ಮಂತೆಯೇ ಹಲವು ಕುಟುಂಬಗಳು ಇಲ್ಲಿವೆ. ನಾವು ಸಮೀಕ್ಷೆಗೆ ಮಾಹಿತಿ ನೀಡಬೇಕು ಅಂದರೆ ಏನು ಮಾಡಬೇಕು’ ಎಂದು ಪ್ರಶ್ನಿಸಿದರು.
ಸಮೀಕ್ಷೆ ನಡೆಸುತ್ತಿದ್ದ ಶಿಕ್ಷಕರು ತಮ್ಮ ಮೇಲ್ವಿಚಾರಕರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡರು. ಆ ಮಹಿಳೆಯ ಕುಟುಂಬದ ವಿವರವನ್ನು ಅಪ್ಲಿಕೇಷನ್‌ನಲ್ಲಿ ನಮೂದಿಸಿದರು. ಜತೆಗೆ ಇನ್ನೂ ಹೆಚ್ಚಿನ ಕುಟುಂಬಗಳು ಇದ್ದರೆ, ಮೇಲ್ವಿಚಾರಕರಿಗೆ ಕರೆ ಮಾಡಿ ಎಂದು ಸಂಪರ್ಕ ಸಂಖ್ಯೆ ನೀಡಿದರು. ಮೇಲ್ವಿಚಾರಕರಿಗೆ ಕರೆ ಮಾಡಿ, ಅವರು ಮಾರ್ಗದರ್ಶನ ನೀಡುತ್ತಾರೆ ಎಂದು ಸೂಚಿಸಿದರು.
‘ಸಮೀಕ್ಷೆ ಅಡಿಯಲ್ಲಿ ರಾಜ್ಯದಾದ್ಯಂತ ಈವರೆಗೆ, ಪರಿಶಿಷ್ಟ ಜಾತಿಗಳ 24,25,000ಕ್ಕೂ ಹೆಚ್ಚು ಕುಟುಂಬಗಳ ವಿವರವನ್ನು ಕಲೆ ಹಾಕಲಾಗಿದೆ. ಈವರೆಗೆ ಶೇ 90ರಷ್ಟು ಪ್ರಗತಿ ಸಾಧಿಸಲಾಗಿದೆ. ಸಮೀಕ್ಷೆ ಮುಗಿಯುವ ವೇಳೆಗೆ ಎಲ್ಲ ಕುಟುಂಬಗಳ ವಿವರ ಕಲೆ ಹಾಕುತ್ತೇವೆ ಎಂಬ ನಿರೀಕ್ಷೆ ಇದೆ’ ಎಂದು ಮೂಲಗಳು ಮಾಹಿತಿ ನೀಡಿವೆ.
ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್
‘ತಪ್ಪು ಮಾಹಿತಿ ನೀಡಿದವರೂ ಮಾನ್ಯತೆ ಇರುವ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಸರಿಯಾದ ಮಾಹಿತಿಯನ್ನು ನಮೂದಿಸಲು ಅನುಕೂಲವಾಗುವಂತೆ ಆನ್‌ಲೈನ್ ಪೋರ್ಟಲ್ ಅನ್ನು ರೂಪಿಸಲಾಗಿದೆ. ತಮ್ಮ ವಿವರ ಸಮೀಕ್ಷೆಯಲ್ಲಿ ಸೇರಲಿಲ್ಲ ಎಂದು ಯಾರೂ ಕೊರಗುವ ಅವಶ್ಯಕತೆ ಇಲ್ಲ. ಗೌಪ್ಯತೆಯನ್ನು ಕಾಪಾಡಿಕೊಂಡೇ ಆನ್‌ಲೈನ್‌ನಲ್ಲಿ ವಿವರ ನಮೂದಿಸಿ ಎಂದು ಜನರಿಗೆ ತಿಳಿಸಬೇಕಾಗಿದೆ’ ಎಂದರು. ‘ಆನ್‌ಲೈನ್‌ನಲ್ಲಿ ಮಾಹಿತಿ ನಮೂದಿಸಲು ಮೊದಲು ಕೆಲ ತಾಂತ್ರಿಕ ಸಮಸ್ಯೆಗಳು ಇದ್ದವು. ಈಗ ಅದನ್ನು ಸರಿಪಡಿಸಿದ್ದೇವೆ. ಈಗಾಗಲೇ 1500ಕ್ಕೂ ಹೆಚ್ಚು ಕುಟುಂಬಗಳು ಆನ್‌ಲೈನ್‌ನಲ್ಲಿ ಮಾಹಿತಿ ನಮೂದಿಸಿವೆ. ಜೂನ್ 1ರವರೆಗೂ ಆನ್‌ಲೈನ್‌ನಲ್ಲಿ ವಿವರ ನಮೂದಿಸಬಹುದು. ಮೇ 30 ರಿಂದ ಜೂನ್ 1ರವರೆಗೆ ಮೂರು ದಿನ ನಡೆಯುವ ಶಿಬಿರಗಳಲ್ಲೂ ವಿವರ ನೀಡಬಹುದು’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.