ADVERTISEMENT

ಹುಬ್ಬಳ್ಳಿಗೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ?: ಸಚಿವ ಎಂ.ಬಿ.ಪಾಟೀಲ

ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಸಚಿವ ಎಂ.ಬಿ.ಪಾಟೀಲ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 15:59 IST
Last Updated 8 ಏಪ್ರಿಲ್ 2025, 15:59 IST
ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳ ಜತೆಗೆ ಸಚಿವ ಎಂ.ಬಿ.ಪಾಟೀಲ ಮತ್ತು ಸಚಿವ ಪ್ರಿಯಾಂಕ್‌ ಖರ್ಗೆ ಚರ್ಚಿಸಿದರು
ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳ ಜತೆಗೆ ಸಚಿವ ಎಂ.ಬಿ.ಪಾಟೀಲ ಮತ್ತು ಸಚಿವ ಪ್ರಿಯಾಂಕ್‌ ಖರ್ಗೆ ಚರ್ಚಿಸಿದರು   

ಬೆಂಗಳೂರು: ‘ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೆ ಏರಿಸಬೇಕು. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಿರಿ’ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರು, ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದಲ್ಲಿ ವಿಮಾನಯಾನ ಸೌಕರ್ಯ ಹೆಚ್ಚಿಸುವ ಸಂಬಂಧ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳ ಜತೆಗೆ ಅವರು ಮಂಗಳವಾರ ಸಭೆ ನಡೆಸಿದರು. ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಸಭೆಯಲ್ಲಿದ್ದರು.

‘ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹಲವೆಡೆಗೆ ವಿಮಾನಯಾನ ಸಂಪರ್ಕವಿದೆ. ಅಲ್ಲಿ ಪ್ರಯಾಣಿಕರ ದಟ್ಟಣೆಯೂ ಹೆಚ್ಚಾಗಿದೆ. ಅದನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಅಭಿವೃದ್ಧಿಪಡಿಸುವ ಹಲವು ಅವಕಾಶಗಳಿವೆ. ಈ ಸಂಬಂಧ ವಿಸ್ತೃತ ವರದಿಯನ್ನು ಸಿದ್ಧಪಡಿಸಿ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕು. ಈ ಕೆಲಸವನ್ನು ತ್ವರಿತಗತಿಯಲ್ಲಿ ಮಾಡಿ’ ಎಂದು ಸಚಿವ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ವಿಮಾನ ನಿಲ್ದಾಣಗಳ ಬಳಕೆಗೆ ಆಹ್ವಾನ: ‘ಕಲಬುರ್ಗಿ, ಮೈಸೂರು, ಬೀದರ್, ಹುಬ್ಬಳ್ಳಿ, ಬೆಳಗಾವಿ, ವಿದ್ಯಾನಗರ ವಿಮಾನ ನಿಲ್ದಾಣಗಳಿಂದ ಇತರ ರಾಜ್ಯಗಳ ನಗರಗಳಿಗೆ ವಿಮಾನಯಾನ ಸೇವೆ ಒದಗಿಸಿ’ ಎಂದು ಸಚಿವ ಎಂ.ಬಿ.ಪಾಟೀಲ ಅವರು ವಿಮಾನಯಾನ ಸಂಸ್ಥೆಗಳಿಗೆ ಮನವಿ ಮಾಡಿದರು.

ಇಂಡಿಗೊ, ಸ್ಪೈಸ್‌ಜೆಟ್‌, ಸ್ಟಾರ್ ಏರ್, ಏರ್ ಇಂಡಿಯಾ, ಆಕಾಸಾ ಏರ್, ಅಲೈಯನ್ಸ್ ಏರ್‌ವೇಸ್, ಸ್ಪೈಸ್ ಜೆಟ್ ಕಂಪನಿಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ‘ವಿಜಯಪುರ ವಿಮಾನ ನಿಲ್ದಾಣವು ಸಿದ್ಧವಾಗಿದ್ದು, ಇನ್ನಷ್ಟೇ ಉದ್ಘಾಟನೆಯಾಗಬೇಕಿದೆ. ವಿಮಾನ ಸಂಪರ್ಕ ಕಲ್ಪಿಸುವ ಸಂದರ್ಭದಲ್ಲಿ ಈ ವಿಮಾನ ನಿಲ್ದಾಣವನ್ನೂ ಪರಿಗಣಿಸಬೇಕು’ ಎಂದು ಸಚಿವ ಕೋರಿದರು.

ಎಲ್ಲ ಸವಲತ್ತು ನೀಡಲು ಸಿದ್ಧ: ಪ್ರಿಯಾಂಕ್‌

‘ಕಲಬುರ್ಗಿ ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವೆ ಒದಗಿಸಲು ಅಗತ್ಯವಿರುವ ಎಲ್ಲ ಸವಲತ್ತುಗಳನ್ನ ನೀಡುತ್ತೇವೆ’ ಎಂದು ಪ್ರಿಯಾಂಕ್‌ ಖರ್ಗೆ ಭರವಸೆ ನೀಡಿದರು. ‘ಕಲಬುರ್ಗಿ ವಿಮಾನ ನಿಲ್ದಾಣವನ್ನು ವಿಮಾನಯಾನ ಸಂಸ್ಥೆಗಳು ನಿರ್ವಹಣೆ ಮತ್ತು ರಿಪೇರಿ ಕೇಂದ್ರವಾಗಿಯೂ ಬಳಸಿಕೊಳ್ಳಬಹುದು. ಅದಕ್ಕೆ ಅಗತ್ಯವಿರುವ ಎಲ್ಲ ಸಹಕಾರವನ್ನು ಒದಗಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.