ಎಂ.ಬಿ.ಪಾಟೀಲ
ಬೆಂಗಳೂರು: ‘2025ರ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಒಟ್ಟು ₹10.27 ಲಕ್ಷ ಕೋಟಿ ಹೂಡಿಕೆ ಘೋಷಣೆಯಾಗಿತ್ತು. ಅದರಲ್ಲಿ ಈಗಾಗಲೇ ₹3.35 ಲಕ್ಷ ಕೋಟಿ ಮೊತ್ತದ ಪ್ರಸ್ತಾವಗಳಿಗೆ ಎಲ್ಲ ರೀತಿಯ ಅನುಮೋದನೆಗಳು ಸಿಕ್ಕಿವೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
‘ಸಮಾವೇಶದಲ್ಲಿ ₹6.23 ಲಕ್ಷ ಕೋಟಿ ಹೂಡಿಕೆ ಸಂಬಂಧ 98 ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಜತೆಗೆ ಇನ್ನೂ ₹4.03 ಲಕ್ಷ ಕೋಟಿ ಮೊತ್ತದ ಹೂಡಿಕೆಗೆ ಕಂಪನಿಗಳು ಆಸಕ್ತಿ ತೋರಿಸಿದ್ದವು. ಇವುಗಳಲ್ಲಿ ಈಗಾಗಲೇ ₹4.26 ಲಕ್ಷ ಕೋಟಿ ಹೂಡಿಕೆಗಾಗಿ ಕಂಪನಿಗಳು ಏಕಗವಾಕ್ಷಿ ವ್ಯವಸ್ಥೆಯಲ್ಲಿ ಪ್ರಸ್ತಾವಗಳನ್ನು ಸಲ್ಲಿಸಿವೆ’ ಎಂದಿದ್ದಾರೆ.
‘₹4.26 ಲಕ್ಷ ಕೋಟಿ ಮೊತ್ತದ ಪ್ರಸ್ತಾವಗಳಲ್ಲಿ ₹3.35 ಲಕ್ಷ ಕೋಟಿ ಮೊತ್ತದ ಪ್ರಸ್ತಾವಗಳಿಗೆ ಎಲ್ಲ ರೀತಿಯ ಅನುಮತಿ ಮತ್ತು ಅನುಮೋದನೆ ದೊರೆತಿದೆ. ಇನ್ನೂ ₹90,779 ಕೋಟಿ ಮೊತ್ತದ ಪ್ರಸ್ತಾವಗಳು ಅನುಮೋದನೆಯ ವಿವಿಧ ಹಂತಗಳಲ್ಲಿ ಇವೆ. ₹12,236 ಕೋಟಿಯ ಹೂಡಿಕೆಗಳಿಗೆ ಅಂತಿಮ ಅನುಮೋದನೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.ಸ
‘ಫೆಬ್ರುವರಿಯಲ್ಲಿ ನಡೆದ ‘ಇನ್ವೆಸ್ಟ್ ಕರ್ನಾಟಕ–2025’ ಜಾಗತಿಕ ಹೂಡಿಕೆದಾರರ ಸಮಾವೇಶದ ನಂತರ ಎಮ್ವೀ ಎನರ್ಜಿ ಲಿಮಿಟೆಡ್ ₹5,000 ಕೋಟಿ, ದಾಲ್ಮಿಯಾ ಸಿಮೆಂಟ್ ₹3,000 ಕೋಟಿ, ಶ್ರೀ ಸಿಮೆಂಟ್ ₹2,500 ಕೋಟಿ, ಜಾನ್ ಡಿಸ್ಟಿಲರೀಸ್ ₹500 ಕೋಟಿ, ಕಾರ್ಲ್ಸ್‌ಬರ್ಗ್ ₹350 ಕೋಟಿ, ಸಂವರ್ಧನ ಮದರ್‌ಸನ್ ₹490 ಕೋಟಿ ಹೂಡಿಕೆಗೆ ಅನುಮೋದನೆ ದೊರೆತಿದೆ’ ಎಂದು ಇಲಾಖೆ ತಿಳಿಸಿದೆ.
‘ಕರ್ನಾಟಕದಲ್ಲಿ ಹೂಡಿಕೆಗೆ ಆಸಕ್ತಿ ಹೆಚ್ಚಾಗಿದೆ’
‘ಇನ್ವೆಸ್ಟ್ ಕರ್ನಾಟಕ–2025 ನಂತರ ಕರ್ನಾಟಕದಲ್ಲಿ ಹೂಡಿಕೆಗೆ ಉದ್ಯಮಿಗಳು ಹೆಚ್ಚು ಆಸಕ್ತಿ
ತೋರಿಸುತ್ತಿದ್ದಾರೆ. ಕರ್ನಾಟಕವನ್ನು ದೇಶದ ಪ್ರಮುಖ ತಯಾರಿಕಾ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಭೂಸ್ವಾಧೀನ, ಕೈಗಾರಿಕಾ ನಿವೇಶನ ಹಂಚಿಕೆ, ಹಣಕಾಸು ನೆರವು–ರಿಯಾಯಿತಿ ಮತ್ತು ಎಲ್ಲ ಅನುಮತಿಗಳನ್ನು ತ್ವರಿತಗತಿಯಲ್ಲಿ ದೊರಕಿಸಿಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಎಂ.ಬಿ.ಪಾಟೀಲ ಅವರು ಹೇಳಿದ್ದಾರೆ.
‘ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಹೂಡಿಕೆದಾರರ ಸಮಾವೇಶಲ್ಲಿ ಆಗಿದ್ದ
ಘೋಷಣೆಗಳಲ್ಲಿ, ₹4.09 ಲಕ್ಷ ಕೋಟಿ ಮೊತ್ತದ ಹೂಡಿಕೆ ಪ್ರಸ್ತಾವಗಳಿಗೆ ಈಗ ಅನುಮತಿ ದೊರೆತಿದೆ. ಬಹುತೇಕ ಪ್ರಕ್ರಿಯೆಗಳು ನಮ್ಮ ಸರ್ಕಾರದ ಅವಧಿಯಲ್ಲಿ ಆಗಿವೆ. ಈ ಎಲ್ಲ ಪ್ರಕ್ರಿಯೆಗಳನ್ನು ರಾಜ್ಯ ಸರ್ಕಾರದ ಏಕಗವಾಕ್ಷಿ ವ್ಯವಸ್ಥೆ ಮೂಲಕವೇ ಪೂರ್ಣಗೊಳಿಸಲಾಗಿದೆ. ಅನುಮತಿ ದೊರೆತಿರುವ ₹4.09 ಲಕ್ಷ ಕೋಟಿ ಪ್ರಸ್ತಾವಗಳಲ್ಲಿ, ಸುಮಾರು ₹1.87 ಲಕ್ಷ ಕೋಟಿ ಮೊತ್ತದ ಹೂಡಿಕೆಗಳ ಕೆಲಸಗಳು ಆರಂಭವಾಗಿವೆ’ ಎಂದು ಸಚಿವ ಪಾಟೀಲ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.