ADVERTISEMENT

Invest Karnataka 2025: ಜಿಇ ಹೆಲ್ತ್ ಕೇರ್‌ನಿಂದ ₹8 ಸಾವಿರ ಕೋಟಿ ಹೂಡಿಕೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2025, 16:23 IST
Last Updated 12 ಫೆಬ್ರುವರಿ 2025, 16:23 IST
<div class="paragraphs"><p>‘ಮೇಕ್‌ ಇನ್ ಇಂಡಿಯಾ ಫಾರ್‌ ವರ್ಲ್ಡ್‌’ ಗೋಷ್ಠಿಯಲ್ಲಿ ಚೈತನ್ಯ ಸರವಟೆ, ಅರವಿಂದ್ ಮೆಳ್ಳಿಗೇರಿ, ಎನ್. ವೇಣು, ಗುರುಪ್ರಸಾದ್ ಮುದಲಾಪುರ ಮತ್ತು ಸುದೀಪ್ ದಳವಿ ಭಾಗವಹಿಸಿದ್ದರು </p></div>

‘ಮೇಕ್‌ ಇನ್ ಇಂಡಿಯಾ ಫಾರ್‌ ವರ್ಲ್ಡ್‌’ ಗೋಷ್ಠಿಯಲ್ಲಿ ಚೈತನ್ಯ ಸರವಟೆ, ಅರವಿಂದ್ ಮೆಳ್ಳಿಗೇರಿ, ಎನ್. ವೇಣು, ಗುರುಪ್ರಸಾದ್ ಮುದಲಾಪುರ ಮತ್ತು ಸುದೀಪ್ ದಳವಿ ಭಾಗವಹಿಸಿದ್ದರು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಜಿಇ ಹೆಲ್ತ್ ಕೇರ್ ಸಂಸ್ಥೆಯು ಕರ್ನಾಟಕದ ಆರೋಗ್ಯ ಸೇವೆಗಳ ಕ್ಷೇತ್ರದಲ್ಲಿ ಮುಂದಿನ ಐದು ವರ್ಷಗಳಲ್ಲಿ ಇನ್ನೂ ₹8,000 ಕೋಟಿ ಹೂಡಿಕೆ ಮಾಡಲಿದೆ’ ಎಂದು ಸಂಸ್ಥೆಯ ದಕ್ಷಿಣ ಏಷ್ಯಾ ವಿಭಾಗದ ಮುಖ್ಯಸ್ಥ ಚೈತನ್ಯ ಸರವಟೆ ತಿಳಿಸಿದರು.

ADVERTISEMENT

‘ಇನ್ವೆಸ್ಟ್‌ ಕರ್ನಾಟಕ–2025’ದಲ್ಲಿ ‘ಮೇಕ್‌ ಇನ್ ಇಂಡಿಯಾ ಫಾರ್‌ ವರ್ಲ್ಡ್‌’ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎರಡು ದಶಕಗಳಲ್ಲಿ ₹32 ಸಾವಿರ ಕೋಟಿ ವಿನಿಯೋಗಿಸಲಾಗಿದೆ. ವೈಟ್‌ಫೀಲ್ಡ್‌ನಲ್ಲಿ ಜಿಇ ಒಂದು ಕಿಲೋಮೀಟರ್ ಅಂತರದಲ್ಲಿರುವ ನಾಲ್ಕು ಉತ್ಪಾದನಾ ಘಟಕಗಳಿಂದ 30ಕ್ಕೂ ಹೆಚ್ಚು ಔಷಧೋಪಕರಣಗಳನ್ನು ಉತ್ಪಾದಿಸಲಾಗುತ್ತಿದೆ. ವಿದೇಶಗಳಿಗೂ ಈ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ. ಜಾಗತಿಕವಾಗಿ 300 ದಶಲಕ್ಷ ರೋಗಿಗಳಿಗೆ ಸೇವೆಯನ್ನು ಒದಗಿಸಿದೆ’ ಎಂದರು.

ಎಯೀಸ್‌ ಕಂಪನಿ ಸಿಇಒ ಅರವಿಂದ್ ಮೆಳ್ಳಿಗೇರಿ ಮಾತನಾಡಿ, ‘ಬೆಳಗಾವಿಯು ದೇಶದ ವೈಮಾನಿಕ ಕ್ಷೇತ್ರಕ್ಕೆ ಶೇ 70ರಷ್ಟು ಬಿಡಿಭಾಗಗಳನ್ನು ಪೂರೈಸುತ್ತಿದೆ. ವಿದೇಶಗಳಿಗೂ ರಫ್ತು ಮಾಡಲಾಗುತ್ತಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಇನ್ನಷ್ಟು ಗಮನಹರಿಸಿದರೆ, ಇಡೀ ಜಗತ್ತು ಬೆಳಗಾವಿಯತ್ತ ನೋಡುವ ದಿನ ದೂರವಿಲ್ಲ’ ಎಂದರು.

‘ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತಿರುವ ಉತ್ಪನ್ನಗಳಲ್ಲಿ ಶೇ 25ರಷ್ಟನ್ನು ರಫ್ತು ಮಾಡುತ್ತಿದ್ದೇವೆ. ರಾಜ್ಯ ಕೈಗಾರಿಕಾಸ್ನೇಹಿಯಾಗಿದ್ದು, ಪೀಣ್ಯ, ದೊಡ್ಡಬಳ್ಳಾಪುರ ಮತ್ತು ಮೈಸೂರಿನಲ್ಲಿ ನಮ್ಮ ಉತ್ಪಾದನಾ ಘಟಕಗಳಿವೆ. ಬೆಂಗಳೂರಿನಲ್ಲಿರುವ ಸಂಶೋಧನೆ ಘಟಕ ಮತ್ತು ಮೈಸೂರಿನ ಘಟಕದ ವಿಸ್ತರಣೆ ಆಗುತ್ತಿದೆ’ ಎಂದು ಹಿಟಾಚಿ ಎನರ್ಜಿಯ ವ್ಯವಸ್ಥಾಪಕ ನಿರ್ದೇಶಕ ಎನ್. ವೇಣು ಮಾಹಿತಿ ನೀಡಿದರು.

‘ಬಾಷ್‌ ಕಂಪನಿಗೆ ಬೆಂಗಳೂರೇ ಕೇಂದ್ರಸ್ಥಾನ. 72 ವರ್ಷಗಳ ಹಿಂದೆಯೇ ಸ್ಥಳೀಯ ಉತ್ಪಾದನೆ ಆರಂಭಿಸಿದ್ದು, ದೇಶಾದ್ಯಂತ 17 ತಯಾರಿಕಾ ಘಟಕ ಹೊಂದಿದ್ದೇವೆ. ಸಂಸ್ಥೆಯಲ್ಲಿ ಉತ್ಪಾದನೆಯಲ್ಲಿ ಶೇ 90ರಷ್ಟು ಸ್ಥಳೀಯತೆ ಇದೆ’ ಎಂದು ಬಾಷ್‌ ಕಂಪನಿ ಸಿಇಒ ಗುರುಪ್ರಸಾದ್ ಮುದಲಾಪುರ ಹೇಳಿದರು.

‘ದೇಶದ ಒಟ್ಟಾರೆ ಉತ್ಪಾದನಾ ವಲಯದಲ್ಲಿ ಆಟೊಮೊಬೈಲ್‌ ಕ್ಷೇತ್ರ ಶೇ 15ರಷ್ಟು ಕೊಡುಗೆ ನೀಡುತ್ತಿದೆ. ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸುರಕ್ಷತೆಯ ವಿಷಯಕ್ಕೂ ಹೆಚ್ಚು ಒತ್ತು ನೀಡಬೇಕು. ತುರ್ತಾಗಿ ಸಿಎನ್‌ಜಿ, ಎಥನಾಲ್‌, ಎಲೆಕ್ಟ್ರಿಕ್‌ ವಾಹನಗಳನ್ನು ಕಡ್ಡಾಯಗಳಿಸಬೇಕು. ಮುಂದಿನ ಹಂತದಲ್ಲಿ ಸಿಬಿಜಿ, ಹೈಡ್ರೋಜನ್‌, ಮೆಥನಾಲ್‌ ವಾಹನಗಳ ಬಳಕೆಯಾಗಬೇಕು’ ಎಂದು ಟೊಯೋಟಾ ಕಿರ್ಲೋಸ್ಕರ್‌ ಮೋಟರ್‌ನ ಹಿರಿಯ ಉಪಾಧ್ಯಕ್ಷ ಸುದೀಪ್ ದಳವಿ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.