ಬೆಂಗಳೂರು: ಜೈವಿಕ ಇಂಧನ ಕ್ಷೇತ್ರದಲ್ಲಿ ಒಂದು ದಶಕದಲ್ಲಿ ಅನುಷ್ಠಾನಗೊಳಿಸಿರುವ ಕಾರ್ಯ ಯೋಜನೆಗಳು ಹಾಗೂ ಮಂಡಳಿ ಮುಂದಿನ ದಿನಗಳಲ್ಲಿ ರೂಪಿಸಲಿರುವ ಜೈವಿಕ ಇಂಧನ ಕಾರ್ಯ ಯೋಜನೆಗಳ ಪ್ರಾತ್ಯಕ್ಷಿಕೆಯನ್ನು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಆಯೋಜಿಸಿತ್ತು.
ಜಾಗತಿಕ ಹೂಡಿಕೆದಾರರ ಸಮಾವೇಶದ ಅಂಗವಾಗಿ ಮಂಡಳಿಯ ಮಳಿಗೆಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು.
ಈ ವೇಳೆ ಮಂಡಳಿ ಅಧ್ಯಕ್ಷ ಎಸ್.ಈ.ಸುಧೀಂದ್ರ ಅವರು ಜೈವಿಕ ಇಂಧನ ಕಾರ್ಯ ಯೋಜನೆಗಳು, ಮುಂದಿನ ದಿನಗಳಲ್ಲಿ ಮಂಡಳಿಯು ಕೈಗೊಳ್ಳಲಿರುವ ವಾಣಿಜ್ಯೀಕರಣ ಕಾರ್ಯಯೋಜನೆಗಳ ಕುರಿತು ಸಚಿವರಾದ ಶಿವಕುಮಾರ್, ಎಂ.ಬಿ.ಪಾಟೀಲ ಅವರಿಗೆ ಮನವರಿಕೆ ಮಾಡಿಕೊಟ್ಟರು.
ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದಲ್ಲಿ ಒಂದು ಬಿಲಿಯನ್ ಡಾಲರ್‌ಗೂ ಹೆಚ್ಚಿನ ಹೂಡಿಕೆಗೆ ಅವಕಾಶಗಳಿರುವ ಸಾಧ್ಯತೆಗಳ ಕುರಿತು ಅಂಕಿ, ಅಂಶಗಳೊಂದಿಗೆ ವಿವರಿಸಿದರು. ಬಯೊ ಡೀಸೆಲ್, ಬಯೊ ಬ್ರೇಕೇಟ್, ಕಂಪ್ರೆಸ್ಡ್ ಬಯೊ ಗ್ಯಾಸ್ ಮೊದಲಾದ ಜೈವಿಕ ಇಂಧನ ಕಾರ್ಯ ಪ್ರಯೋಜನಗಳ ಕುರಿತು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಬಜೆಟ್‌ನಲ್ಲಿ ಮಂಡಳಿಗೆ ಹೆಚ್ಚಿನ ಅನುದಾನ ನೀಡಬೇಕೆಂಬ ಅಧ್ಯಕ್ಷರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಜೈವಿಕ ಇಂಧನ ಕ್ಷೇತ್ರದಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.