ಗೋಷ್ಠಿಯಲ್ಲಿ ಭಾಗಿಯಾದ ತಜ್ಞರು
ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ಬೆಂಗಳೂರು: ‘ಹೈದರಾಬಾದ್, ಪುಣೆ, ಮುಂಬೈಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಹೂಡಿಕೆಗೆ ಮುಕ್ತ ಅವಕಾಶವಿದೆ. ಮಾರುಕಟ್ಟೆಯೂ ಸದೃಢವಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿದ ಜಿಸಿಸಿ ನೀತಿ (ಜಾಗತಿಕ ಸಾಮರ್ಥ್ಯ ಕೇಂದ್ರ) ಜಾಗತಿಕ ಸ್ಪರ್ಧಾತ್ಮಕತೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ’ ಎಂದು ಇಂಡೊ–ಆಸ್ಟ್ರೇಲಿಯಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಗ್ಯಾವೆನ್ ಸ್ಟಾಂಡನ್ ಶ್ಲಾಘಿಸಿದರು.
ಇನ್‌ವೆಸ್ಟ್ ಕರ್ನಾಟಕದ ಅಂಗವಾಗಿ ಗುರುವಾರ ನಡೆದ ‘ಆಸ್ಟ್ರೇಲಿಯಾ–ಕರ್ನಾಟಕ: ನಾವೀಗ ಎಲ್ಲಿದ್ದೇವೆ; ಅವಕಾಶ ಎಷ್ಟಿವೆ’ ಎಂಬ ವಿಷಯ ಕುರಿತು ಹಮ್ಮಿಕೊಂಡಿದ್ದ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ದಿನ ಬೆಳಗಾಗುವುದರೊಳಗೆ ಯಾವುದೇ ಹೂಡಿಕೆಯು ಫಲ ನೀಡುವುದಿಲ್ಲ. ಇದಕ್ಕೆ ಹಲವು ವರ್ಷಗಳೇ ಬೇಕು. ಹೂಡಿಕೆ ಸ್ನೇಹಿ ವಾತಾವರಣವಿದ್ದರೆ ಉದ್ದಿಮೆಗಳು ವೇಗವಾಗಿ ಬೆಳೆಯುತ್ತವೆ. ಇದಕ್ಕೆ ಕರ್ನಾಟಕ ಮಾದರಿಯಾಗಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿರುವ ಆಸ್ಟ್ರೇಲಿಯಾದ ಕಾನ್ಸುಲ್ ಜನರಲ್ ಹಿಲರಿ ಮೆಕ್‌ಗೆಚಿ, ಆಸ್ಟ್ರೇಲಿಯಾ ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ ಲಿಮಿಟೆಡ್‌ನ ಅಧ್ಯಕ್ಷ ಇರ್ಫಾನ್ ಮಲ್ಲಿಕ್, ಗ್ಲೋಬಲ್ ವಿಕ್ಟೋರಿಯಾದ ದಕ್ಷಿಣ ಏಷ್ಯಾ ವಿಭಾಗದ ಕಮಿಷನರ್ ಮಿಚೆಲ್ ವೇಡ್ ಇದ್ದರು.
ಹೂಡಿಕೆಗೆ ಆಹ್ವಾನಿಸಿದ ಇಟಲಿ
ಇಟಲಿಯು ಪ್ರವಾಸಿಗರ ಆಕರ್ಷಣೆಯಾಗಿಯಷ್ಟೇ ಉಳಿದಿಲ್ಲ. ಹೂಡಿಕೆ ಸ್ನೇಹಿ ವಾತಾವರಣ ಹೊಂದಿದೆ. ಭಾರತದ ಹೂಡಿಕೆದಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಇಟಲಿ ಪ್ರತಿನಿಧಿಗಳು ಆಹ್ವಾನ ನೀಡಿದ್ದಾರೆ. ಇನ್‌ವೆಸ್ಟ್ ಕರ್ನಾಟಕದಲ್ಲಿ ‘ಯೂರೋಪ್‌ನಲ್ಲಿ ಇಟಲಿಯು ಹೂಡಿಕೆಯ ಪ್ರಶಸ್ತ ತಾಣ’ ಎಂಬ ವಿಷಯ ಕುರಿತು ನಡೆದ ಗೋಷ್ಠಿಯಲ್ಲಿ ಬಂಡವಾಳ ಹೂಡಿಕೆಗೆ ಅಲ್ಲಿರುವ ಅವಕಾಶಗಳ ಬಗ್ಗೆ ಬೆಳಕು ಚೆಲ್ಲಿದರು.
ಗೋಷ್ಠಿಯಲ್ಲಿ ದಕ್ಷಿಣ ಏಷ್ಯಾ ವಿಭಾಗದ ವ್ಯಾಪಾರ ಮತ್ತು ಹೂಡಿಕೆ ಕಮಿಷನರ್ ವಿಕ್ ಸಿಂಗ್, ಆಸ್ಟ್ರೇಲಿಯಾದ ಕಾನ್ಸುಲ್ ಜನರಲ್ ಹಿಲರಿ ಮೆಕ್‌ಗೀಚಿ, ಗ್ಲೋಬಲ್ ವಿಕ್ಟೋರಿಯಾದ ದಕ್ಷಿಣ ಏಷ್ಯಾ ವಿಭಾಗದ ಕಮಿಷನರ್ ಮಿಚೆಲ್ ವೇಡ್, ಆಸ್ಟ್ರೇಲಿಯಾ ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ ಲಿಮಿಟೆಡ್‌ನ ಅಧ್ಯಕ್ಷ ಇರ್ಫಾನ್ ಮಲ್ಲಿಕ್, ಇಂಡೊ– ಆಸ್ಟ್ರೇಲಿಯಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಗ್ಯಾವೆನ್ ಸ್ಟಾಂಡನ್ ಪಾಲ್ಗೊಂಡಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.