ADVERTISEMENT

ಇಂದಿನಿಂದ ಹೂಡಿಕೆ ಸಮಾವೇಶ: ₹10 ಲಕ್ಷ ಕೋಟಿ ಹೂಡಿಕೆ ನಿರೀಕ್ಷೆ

ಸಜ್ಜುಗೊಂಡ ಅರಮನೆ ಮೈದಾನ;19 ದೇಶಗಳು ಭಾ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2025, 19:37 IST
Last Updated 10 ಫೆಬ್ರುವರಿ 2025, 19:37 IST
ಅರಮನೆ ಮೈದಾನದಲ್ಲಿ ಮಂಗಳವಾರದಿಂದ ಆರಂಭವಾಗುವ ಜಾಗತಿಕ ಹೂಡಿಕೆದಾರರ ಸಮಾವೇಶದ ಸಿದ್ಧತೆಗಳನ್ನು  ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಪರಿಶೀಲಿಸಿದರು. ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಅರಮನೆ ಮೈದಾನದಲ್ಲಿ ಮಂಗಳವಾರದಿಂದ ಆರಂಭವಾಗುವ ಜಾಗತಿಕ ಹೂಡಿಕೆದಾರರ ಸಮಾವೇಶದ ಸಿದ್ಧತೆಗಳನ್ನು  ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಪರಿಶೀಲಿಸಿದರು. ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.   

ಬೆಂಗಳೂರು: ಜಾಗತಿಕ ಬಂಡವಾಳ ಹೂಡಿಕೆಯ ಶಕ್ತಿ ಕೇಂದ್ರವನ್ನಾಗಿ ಕರ್ನಾಟಕವನ್ನು ಅಭಿವೃದ್ಧಿಪಡಿಸಲು ನೆರವಾಗುವ, ನಾವೀನ್ಯ, ಕೈಗಾರಿಕಾ ಪ್ರಗತಿ ಮತ್ತು ಜಾಗತಿಕ ಪಾಲುದಾರಿಕೆಗೆ ರಾಜ್ಯದಲ್ಲಿನ ಸೌಲಭ್ಯಗಳನ್ನು ಇಡೀ ವಿಶ್ವಕ್ಕೆ ಪರಿಚಯಿಸುವ ಆಶಯದ ‘ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ (ಇನ್‌ವೆಸ್ಟ್‌ ಕರ್ನಾಟಕ–2025)’ ಇಂದಿನಿಂದ (ಫೆ.11) ಆರಂಭವಾಗಲಿದೆ.

19 ದೇಶಗಳ ಹೆಸರಾಂತ ಉದ್ಯಮಿಗಳು, ಅವರ ಪ್ರತಿನಿಧಿಗಳು ಭಾಗವಹಿಸುವ ಮೂಲಕ ₹10 ಲಕ್ಷ ಕೋಟಿ ಬಂಡವಾಳ ಹೂಡಿಕೆಯ ನಿರೀಕ್ಷೆ ಮೂಡಿಸಿದೆ. ಉದ್ದಿಮೆ, ನೀತಿ ನಿರೂಪಣೆ ಹಾಗೂ ನಾವೀನ್ಯತೆ ಕ್ಷೇತ್ರದ ದಿಗ್ಗಜರ ಸಮಾಗಮಕ್ಕೆ, ಚಿಂತನ ಮಂಥನಕ್ಕೆ ಸಮಾವೇಶ ವೇದಿಕೆ ಒದಗಿಸಲಿದೆ. ವಿವಿಧ ಕ್ಷೇತ್ರಗಳ ದಿಗ್ಗಜರು ಕರ್ನಾಟಕದಲ್ಲಿನ ಬಂಡವಾಳ ಹೂಡಿಕೆ ಮತ್ತು ಕೈಗಾರಿಕಾ ಪ್ರಗತಿಯ ಭವಿಷ್ಯ ರೂಪಿಸುವ ಒಳನೋಟಗಳನ್ನು ನೀಡಲಿದ್ದಾರೆ. 

‘ಸಮಾವೇಶದಿಂದಾಗಿ ರಾಜ್ಯದಲ್ಲಿ ಉದ್ಯಮದ ಮೇಲಿನ ಸಂಶೋಧನೆ ಹಾಗೂ ಸಹಯೋಗಗಳು ಹೆಚ್ಚಲಿವೆ. ರಾಜ್ಯದಲ್ಲಿ ತಯಾರಿಕಾ ಚಟುವಟಿಕೆಗಳು ಗಮನಾರ್ಹವಾಗಿ ವಿಸ್ತಾರಗೊಳ್ಳಲಿವೆ. ಈ ಸಮಾವೇಶದ ಮುಖ್ಯ ಧ್ಯೇಯವು ‘ಪ್ರಗತಿಯ ಮರುಪರಿಕಲ್ಪನೆ’ಯಾಗಿದೆ. ತಂತ್ರಜ್ಞಾನ ಆಧಾರಿತ, ಪರಿಸರಸ್ನೇಹಿ, ಸುಸ್ಥಿರ ಹಾಗೂ ಸಮತೋಲನದ ಬೆಳವಣಿಗೆ ಉತ್ತೇಜಿಸುವ ರಾಜ್ಯ ಸರ್ಕಾರದ ಬದ್ಧತೆ ಪ್ರತಿಬಿಂಬಿಸಲಿದೆ. ಸಮಾವೇಶದ ನಂತರ ಕರ್ನಾಟಕದ ಭವಿಷ್ಯ ಹೊಸ ದಿಕ್ಕಿನತ್ತ ಸಾಗಲಿದೆ’ ಎಂದು ಸಮಾವೇಶದ ಪ್ರಮುಖ ರೂವಾರಿ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.

ADVERTISEMENT

ಅಂತಿಮ ಸಿದ್ಧತೆಗಳ ಪರಿಶೀಲನೆ:

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೈಗಾರಿಕಾ ಸಚಿವ ಎಂ‌.ಬಿ.ಪಾಟೀಲ ಅವರು ಸಮಾವೇಶ ನಡೆಯುವ ಅರಮನೆ ಮೈದಾನಕ್ಕೆ ಸೋಮವಾರ ಭೇಟಿ ನೀಡಿ, ಅಂತಿಮ ಸುತ್ತಿನ ಸಿದ್ಧತೆಗಳ ಪರಿಶೀಲನೆ ನಡೆಸಿದರು.

ಪ್ರದರ್ಶನ ತಾಣಗಳು, ಗೋಷ್ಠಿಗಳು ನಡೆಯಲಿರುವ ಸ್ಥಳ, ಮಾತುಕತೆ ಮತ್ತು ಒಡಂಬಡಿಕೆ ನಡೆಯುವ ಸಭಾಂಗಣ, ಕಂಟ್ರಿ ಪೆವಿಲಿಯನ್, ಫುಡ್‌ ಕೋರ್ಟ್ ಮತ್ತಿತರ ಜಾಗಗಳನ್ನು ವೀಕ್ಷಿಸಿ, ಅಂತಿಮ ಕ್ಷಣಗಳ ಕೆಲ ಬದಲಾವಣೆಗಳನ್ನು ಸೂಚಿಸಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಹಾಜರಿದ್ದರು.

ಜಾಗತಿಕ ಹೂಡಿಕೆದಾರರ ಸಮಾವೇಶದ ಅಂತಿಮ ಸಿದ್ಧತೆಗಳಲ್ಲಿ ತೊಡಗಿದ ಕಾರ್ಮಿಕರು. ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ಮುಖ್ಯಾಂಶಗಳು

* 2025-30ನೇ ಸಾಲಿನ ನೂತನ ಕೈಗಾರಿಕಾ ನೀತಿ ಬಿಡುಗಡೆ

* ತ್ವರಿತ ಅನುಮೋದನೆಗಾಗಿ ಏಕಗವಾಕ್ಷಿ ಪೋರ್ಟಲ್‌ ಆರಂಭ

*60ಕ್ಕೂ ಹೆಚ್ಚು ಕಂಪನಿಗಳಿಂದ ಅತ್ಯಾಧುನಿಕ ತಂತ್ರಜ್ಞಾನ ಪ್ರದರ್ಶನ 

ಭಾಗವಹಿಸುತ್ತಿರುವ ದೇಶಗಳು ಫ್ರಾನ್ಸ್‌ ನೆದರ್ಲೆಂಡ್ಸ್‌  ಜಪಾನ್ ಥಾಯ್ಲೆಂಡ್‌ ಮಲೇಷ್ಯಾ ದಕ್ಷಿಣ ಕೊರಿಯಾ ಇಸ್ರೇಲ್ ನಾರ್ವೆ ಸ್ವಿಟ್ಜರ್ಲೆಂಡ್‌ ತೈವಾನ್ ಜರ್ಮನಿ ಆಸ್ಟ್ರೇಲಿಯಾ ಡೆನ್ಮಾರ್ಕ್ ಪೋಲಂಡ್ ಇಟಲಿ ಬ್ರಿಟನ್‌ ಸ್ಲೊವೆನಿಯಾ ಬಹರೇನ್‌ ಮತ್ತು ಸಿಂಗಪುರ  

ಹೂಡಿಕೆಯ ಪ್ರಮುಖ ವಲಯಗಳು 

* ವೈಮಾಂತರಿಕ್ಷ ಮತ್ತು ರಕ್ಷಣೆ

* ಎಲೆಕ್ಟ್ರಾನಿಕ್‌ ಬಿಡಿಭಾಗಗಳು

* ವಿದ್ಯುನ್ಮಾನ ವ್ಯವಸ್ಥೆಯ ವಿನ್ಯಾಸ ಹಾಗೂ ತಯಾರಿಕೆ 

* ಉಗ್ರಾಣ ಹಾಗೂ ಸರಕು ಸಾಗಣೆ

* ವಿದ್ಯುತ್ ಚಾಲಿತ ವಾಹನಗಳು 

* ಸೆಮಿಕಂಡಕ್ಟರ್‌ ವಲಯ

* ವೈದ್ಯಕೀಯ ತಂತ್ರಜ್ಞಾನ ಸಂಶೋಧನೆ ಹಾಗೂ ಅಭಿವೃದ್ಧಿ

* ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಸ್‌ಎಂಇ)  

ಸಮಾವೇಶದ ಪ್ರಯೋಜನಗಳು

‘ಪರಿಸರಸ್ನೇಹಿ ವಿದ್ಯುತ್‌ ಚಾಲಿತ ವಾಹನಗಳು ರಕ್ಷಣೆ ಜೈವಿಕ ತಂತ್ರಜ್ಞಾನ ಸಂಶೋಧನೆ ಹಾಗೂ ಅಭಿವೃದ್ಧಿ ಮತ್ತು ಗರಿಷ್ಠ ನಿಖರತೆಯ ಬಿಡಿಭಾಗ ತಯಾರಿಕಾ ವಲಯಗಳಲ್ಲಿನ ಬೆಳವಣಿಗೆಯ ಮೇಲೆ ಆವಿಷ್ಕಾರದ ಭವಿಷ್ಯದ ಮೇಲೆ ಬೆಳಕು ಚೆಲ್ಲಲಿದೆ.  ರಾಜ್ಯದ ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಇ) ಹಾಗೂ ನವೋದ್ಯಮ ಬೆಳವಣಿಗೆಗೆ ವೇಗ ನೀಡಲಿದೆ. ಡಿಜಿಟಲೀಕರಣ ಅಳವಡಿಸಿಕೊಳ್ಳಲು 2000ಕ್ಕೂ ಹೆಚ್ಚು ಎಸ್‌ಎಂಇಗಳಿಗೆ ತರಬೇತಿ ನೀಡಲಾಗಿದೆ. ಡಿಜಿಟಲ್‌ ಪರಿವರ್ತನೆಗಾಗಿ 100 ಎಸ್‌ಎಂಇಗಳಿಗೆ ಅಗತ್ಯ ನೆರವು ದೊರೆಯಲಿದೆ.

ಮೊದಲ ದಿನದ ಕಾರ್ಯಕ್ರಮ ವಿವರ

ಉದ್ಘಾಟನೆ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್ (ಸಂಜೆ 4ಕ್ಕೆ)

ಅಧ್ಯಕ್ಷತೆ: ಮುಖ್ಯಮಂತ್ರಿ ಸಿದ್ದರಾಮಯ್ಯ.

ಉಪಸ್ಥಿತಿ: ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಲ್ಹಾದ ಜೋಶಿ, ಎಚ್‌.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಪೀಯೂಷ್ ಗೋಯಲ್‌, ಅಶ್ವಿನಿ ವೈಷ್ಣವ್‌, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ  

ಕೊಪ್ಪಳದಲ್ಲಿ ಬಲ್ಡೋಟಾ ಉಕ್ಕು ಕಾರ್ಖಾನೆ

ಬೆಂಗಳೂರು: ಕೊಪ್ಪಳ ಜಿಲ್ಲೆಯಲ್ಲಿ  ಬಲ್ದೋಟಾ ಸಮೂಹ ಸಂಸ್ಥೆ ₹54 ಸಾವಿರ ಕೋಟಿ ವೆಚ್ಚದಲ್ಲಿ 1.50 ಕೋಟಿ ಟನ್ ಉತ್ಪಾದನಾ ಸಾಮರ್ಥ್ಯದ ಇ೦ಟಿಗ್ರೇಟೆಡ್‌ ಉಕ್ಕಿನ ಕಾರ್ಖಾನೆ ಸ್ಥಾಪನೆ ಮುಂದಾಗಿದೆ. ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಬಲ್ದೋಟಾ ಸಮೂಹ ಸಂಸ್ಥೆಯು ಒಪ್ಪಂದಕ್ಕೆ ಸಹಿ ಹಾಕಲಿದೆ ಎಂದು ಬಲ್ದೋಟಾ ಸಮೂಹ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಹುಲ್‌ ಕುಮಾರ್‌ ಬಲ್ದೋಟಾ ಹೇಳಿದ್ದಾರೆ. ‘ಬಲ್ಡೋಟಾ ಸ್ಟೀಲ್‌ ಮತ್ತು ಪವರ್ ಲಿಮಿಟೆಡ್ (ಬಿಎಸ್‌ಪಿಎಲ್‌)’ ಹೆಸರಿನಲ್ಲಿ ಸ್ಥಾಪಿಸಲಾಗುತ್ತಿದ್ದು ಇದರಿಂದ ಕರ್ನಾಟಕದಲ್ಲಿ ಉಕ್ಕು ಉತ್ಪಾದನೆ ಹೆಚ್ಚಾಗಲಿದೆ ಮತ್ತು ಉದ್ಯೋಗ ಸೃಷ್ಟಿಯೂ ಆಗಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.