ಅರಮನೆ ಮೈದಾನದಲ್ಲಿ ಆಯೋಜಿಸಿರುವ ಜಾಗತಿಕ ಹೂಡಿಕೆದಾರರ ಸಮಾವೇಶ "ಇನ್ವೆಸ್ಟ್ ಕರ್ನಾಟಕ 2025" ಕಾರ್ಯಕ್ರಮಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದರು. ಸಚಿವರಾದ ಎಂ. ಬಿ ಪಾಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತರಿದ್ದರು.
ಬೆಂಗಳೂರು: ಭವಿಷ್ಯದಲ್ಲಿ ನಾಡಿನ ಅಭಿವೃದ್ಧಿಯ ದಿಕ್ಕನ್ನೇ ಬದಲಾಯಿಸುವ ಸರ್ಕಾರದ ಇಚ್ಛಾಶಕ್ತಿಗೆ ಜಾಗತಿಕ ಹೂಡಿಕೆದಾರರ ಸಮಾವೇಶ (ಇನ್ವೆಸ್ಟ್ ಕರ್ನಾಟಕ–2025) ಮತ್ತಷ್ಟು ಬಲ ಕೊಟ್ಟಿತು. ಅಂದಾಜು ₹3.14 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ಹೆಸರಾಂತ ಕಂಪನಿಗಳು ಮೊದಲ ದಿನವೇ ಒಪ್ಪಂದಕ್ಕೆ ಸಹಿ ಹಾಕಿದವು.
ದೇಶ–ವಿದೇಶಗಳ ಉದ್ಯಮಿಗಳು, ಸಚಿವರ ಸಮ್ಮುಖದಲ್ಲಿ ಮಂಗಳವಾರ ಇಲ್ಲಿ ಆರಂಭಗೊಂಡ ಸಮಾವೇಶಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಚಾಲನೆ ನೀಡುವ ಮೂಲಕ ಬಂಡವಾಳದ ಹರಿವಿನ ದಾರಿಯ ಭಾಗ್ಯದ ಬಾಗಿಲನ್ನು ತೆರೆದರು. ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಸೇರಿದಂತೆ ಸಚಿವರು, 5,000ಕ್ಕೂ ಹೆಚ್ಚು ಉದ್ಯಮ ಪ್ರತಿನಿಧಿಗಳು, 16 ದೇಶಗಳ ರಾಯಭಾರಿಗಳು ಹೂಡಿಕೆಯ ಒಪ್ಪಂದಗಳಿಗೆ ಸಾಕ್ಷಿಯಾದರು.
ಉದ್ಯಮಿಗಳಾದ ಆನಂದ್ ಮಹೀಂದ್ರ, ಸಜ್ಜನ್ ಜಿಂದಾಲ್, ಕಿರಣ್ ಮಜುಂದಾರ್ ಷಾ, ಗೀತಾಂಜಲಿ ಕಿರ್ಲೋಸ್ಕರ್, ರಾಹುಲ್ ಬಜಾಜ್, ಶೇಷ ವರದರಾಜನ್, ಪ್ರಶಾಂತ್ ಪ್ರಕಾಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.
ಹೂಡಿಕೆಯ ವಿಚಾರದಲ್ಲಿ ನೆರೆ ರಾಜ್ಯಗಳಿಂದ ಸ್ಪರ್ಧೆ ಇದೆ. ವಿವಿಧ ಪ್ರಕ್ರಿಯೆಗಳು ಸುಲಭವೂ, ತ್ವರಿತವೂ ಆಗಿರಬೇಕು. ಇಲ್ಲದಿದ್ದರೆ, ಅವಕಾಶಗಳು ಬೇರೆಯವರ ಪಾಲಾಗುತ್ತವೆಎಂ.ಬಿ. ಪಾಟೀಲ, ಬೃಹತ್ ಕೈಗಾರಿಕಾ ಸಚಿವ
ಕರ್ನಾಟಕ ಹೂಡಿಕೆದಾರರ ಸ್ವರ್ಗವಾಗಿದೆ. ಕಾನೂನು ಸುವ್ಯವಸ್ಥೆ ಪಾಲನೆಯನ್ನೂ ಒಳಗೊಂಡು ಸುಭದ್ರವಾದ ಉದ್ಯಮ ಸ್ನೇಹಿ ವಾತಾವರಣ ಕಲ್ಪಿಸಲು ಸರ್ಕಾರ ಬದ್ಧವಾಗಿದೆಸಿದ್ದರಾಮಯ್ಯ, ಮುಖ್ಯಮಂತ್ರಿ
ಭಾರತದ ಭವಿಷ್ಯಕ್ಕೆ ಬೆಂಗಳೂರೇ ಕನ್ನಡಿ: ರಾಜನಾಥ್ ಸಿಂಗ್
ಭಾರತದ ಭವಿಷ್ಯದ ಬಗ್ಗೆ ಅನುಮಾನ ಇರುವವರು ಬೆಂಗಳೂರಿಗೆ ಬಂದು ಒಮ್ಮೆ ನೋಡಬೇಕು. ಅವರ ಸಂಶಯ ನಿವಾರಣೆಯಾಗುತ್ತವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಶ್ವ ದರ್ಜೆಯ ಮೂಲಸೌಕರ್ಯ, ಪರಿಸರ ಹೊಂದಿರುವ ಕರ್ನಾಟಕವು ಬಂಡವಾಳ ಹೂಡಿಕೆಗೆ ಪ್ರಶಸ್ತ ತಾಣವಾಗಿದೆ. ದೇಶದಲ್ಲಿನ ರಾಜಕೀಯ ಏನೇ ಇರಲಿ, ಕರ್ನಾಟಕದಲ್ಲಿ ಹೂಡಿಕೆ ಮಾಡುವವರ ಬೆನ್ನಿಗೆ ಇಡೀ ದೇಶವೇ ನಿಲ್ಲಲಿದೆ ಎಂದು ಹೂಡಿಕೆದಾರರಿಗೆ ಭರವಸೆ ತುಂಬಿದರು.
‘ರಾಜ್ಯದ ಮಹತ್ವಾಕಾಂಕ್ಷೆ ಮತ್ತು ನಿರ್ಣಾಯಕ ಕೆಲಸಗಳು ದೇಶವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತಿವೆ. ಸದ್ಯದಲ್ಲೇ ಕೃತಕ ಬುದ್ಧಿಮತ್ತೆ ಕ್ಷೇತ್ರದ ಪ್ರಥಮ ಮಾದರಿ ಕೂಡ ಹೊರಬರಲಿದೆ. ಇದಕ್ಕೆಲ್ಲ ಇಲ್ಲಿರುವ ಮಾನವ ಸಂಪನ್ಮೂಲ ಮತ್ತು ಸನ್ನದ್ಧವಾಗಿರುವ ಪ್ರತಿಭೆ ಕಾರಣ’ ಎಂದು ಕರ್ನಾಟಕವನ್ನು ಹಾಡಿಹೊಗಳಿದರು.
ಬೆಂಗಳೂರಿನ ಮಾಹಿತಿ ತಂತ್ರಜ್ಞಾನ, ನವೋದ್ಯಮ
ಮತ್ತು ಇನ್ನಿತರ ಕ್ರಾಂತಿಕಾರಕ ಸಂಶೋಧನೆಗಳನ್ನು ನೋಡಿದ ನಂತರ ಭಾರತದ ಬಗೆಗಿನ ಅಭಿಪ್ರಾಯ ಖಂಡಿತ ಬದಲಾಗುತ್ತದೆ ಎಂದರು.
2025–30ರ ಕೈಗಾರಿಕಾ ನೀತಿ ಮುಖ್ಯಾಂಶ
* ₹7.50 ಲಕ್ಷ ಕೋಟಿ ಬಂಡವಾಳ ಹೂಡಿಕೆ
* 5 ವರ್ಷದಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ
* ಕೈಗಾರಿಕಾ ಬೆಳವಣಿಗೆಗೆ 3 ವಲಯಗಳ ಸೃಷ್ಟಿ
* ಸನ್‌ರೈಸ್ ವಲಯ, ಸ್ಥಳೀಯ ತಯಾರಿಕೆಗೆ ಆದ್ಯತೆ
* ಖಾಸಗಿ ಕೈಗಾರಿಕಾ ಪಾರ್ಕ್ ಅಭಿವೃದ್ಧಿಗೆ ಅವಕಾಶ
* ಮಧ್ಯಮ, ಸಣ್ಣ, ಸೂಕ್ಷ್ಮ ಕೈಗಾರಿಕೆಗೆ ಶೇ 30ರಷ್ಟು ಜಾಗ
* ಹಿಂದುಳಿದ ತಾಲ್ಲೂಕುಗಳಲ್ಲಿ ಕೈಗಾರಿಕಾ ವಲಯ ಸ್ಥಾಪನೆ
* ಸಂಶೋಧನಾ ವಲಯಕ್ಕೆ ವಿಶೇಷ ಹೂಡಿಕೆ
* ಉತ್ಪಾದನೆ ಆಧರಿತ ಪ್ರೋತ್ಸಾಹ ಭತ್ಯೆ, ಶೇ 30 ಸಬ್ಸಿಡಿ
l ಖಾಸಗಿ ಕೈಗಾರಿಕಾ ಪ್ರದೇಶಗಳಿಗೂ ಅವಕಾಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.