
ಬೆಂಗಳೂರು: ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ (ಡಿಜಿ ಮತ್ತು ಐಜಿಪಿ) ಓಂ ಪ್ರಕಾಶ್ (68) ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಅವರ ಪತ್ನಿ ಪಲ್ಲವಿ ಅವರು ‘ಮಾನಸಿಕವಾಗಿ ಸದೃಢರಾಗಿದ್ದಾರೆ’ ಎಂದು ನಿಮ್ಹಾನ್ಸ್ ವೈದ್ಯರು ವರದಿ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.
ಏಪ್ರಿಲ್ 20ರಂದು ಓಂ ಪ್ರಕಾಶ್ ಅವರ ಕೊಲೆ ನಡೆದಿತ್ತು. ಕೊಲೆ ಪ್ರಕರಣದ ಆರೋಪದಡಿ ಪಲ್ಲವಿ (ಮೊದಲ ಆರೋಪಿ) ಹಾಗೂ ಅವರ ಪುತ್ರಿ ಕೃತಿಕಾ (ಎರಡನೇ ಆರೋಪಿ) ವಿರುದ್ಧ ಎಚ್‌ಎಸ್‌ಆರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಏಪ್ರಿಲ್ 21ರಂದು ಪಲ್ಲವಿ ಅವರನ್ನು ಪೊಲೀಸರು ಬಂಧಿಸಿದ್ದರು. ಓಂ ಪ್ರಕಾಶ್ ಅವರ ಪುತ್ರ ಕಾರ್ತಿಕೇಶ್ ಅವರು ದೂರು ನೀಡಿದ್ದರು.
ಕೊಲೆ ಪ್ರಕರಣದ ತನಿಖೆ ಪೂರ್ಣಗೊಳಿಸಿದ್ದ ಸಿಸಿಬಿ ಪೊಲೀಸರು ಕಳೆದ ಆಗಸ್ಟ್‌ನಲ್ಲಿ ಪಲ್ಲವಿ ಅವರ ವಿರುದ್ಧ ನ್ಯಾಯಾಲಯಕ್ಕೆ 1,150 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಕೃತ್ಯ ನಡೆದ ಬಳಿಕ ಪಲ್ಲವಿ ಅವರನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಆಗ, ಪಲ್ಲವಿ ಅವರು ರಾದ್ದಾಂತ ನಡೆಸಿದ್ದರು. ಮಾನಸಿಕ ಅಸ್ವಸ್ಥರಂತೆ ವರ್ತಿಸಿದ್ದರು. ಬಂಧನದ ಬಳಿಕ ಅವರನ್ನು ನಿಮ್ಹಾನ್ಸ್‌ಗೆ ದಾಖಲಿಸಿ ಆಪ್ತ ಸಮಾಲೋಚನೆಗೆ ಒಳಪಡಿಸಲಾಗಿತ್ತು. ಆ ವರದಿಯು ಪೊಲೀಸರ ಕೈಸೇರಿದೆ. ‘ಪಲ್ಲವಿ ಆರೋಗ್ಯವಾಗಿದ್ದಾರೆ. ಅವರಿಗೆ ಯಾವುದೇ ಮಾನಸಿಕ ಕಾಯಿಲೆಗಳು ಇಲ್ಲವೆಂದು’ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
1981ರ ಬ್ಯಾಚ್ ಐಪಿಎಸ್ ಅಧಿಕಾರಿ ಹಾಗೂ ಡಿಜಿಪಿಯಾಗಿ ನಿವೃತ್ತರಾಗಿದ್ದ ಓಂಪ್ರಕಾಶ್ ಅವರನ್ನು ಎಚ್ಎಸ್ಆರ್ ಲೇಔಟ್‌ನಲ್ಲಿರುವ ಅವರ ಮನೆಯಲ್ಲಿ ಹಲವು ಬಾರಿ ಇರಿದು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಸಮಗ್ರ ತನಿಖೆಗಾಗಿ ಸಿಸಿಬಿಗೆ ಪ್ರಕರಣವನ್ನು ವರ್ಗಾವಣೆ ಮಾಡಲಾಗಿತ್ತು.
ಪಲ್ಲವಿ ಅವರಿಗೆ 15 ದಿನ ಆಪ್ತ ಸಮಾಲೋಚನೆ ನಡೆಸಿದ ವೈದ್ಯರು, ಆಕೆಯ ವೈಯಕ್ತಿಕ ವಿಚಾರಣೆ, ಸಿ.ಸಿ.ಟಿ.ವಿ ಕ್ಯಾಮೆರಾ ಕಣ್ಗಾವಲು, ಐಕ್ಯೂ ಪರೀಕ್ಷೆ ಹಾಗೂ ಪ್ರಶ್ನೋತ್ತರ, ಬುದ್ಧಿಮಟ್ಟ ಪರೀಕ್ಷೆ ಸೇರಿ ವಿವಿಧ ಪರೀಕ್ಷೆಗೆ ಒಳಪಡಿಸಲಾಗಿತ್ತು. ‘ಅವರು ಮಾನಸಿಕವಾಗಿ ಸಡೃಢವಾಗಿರುವುದು ಖಚಿತವಾಗಿದೆ. ಜತೆಗೆ, ಅವರು ಆರೋಗ್ಯವಾಗಿಯೂ ಇದ್ದಾರೆ’ ಎಂದು ನಿಮ್ಹಾನ್ಸ್ ಆಸ್ಪತ್ರೆ ವೈದ್ಯರು ವರದಿ ಸಲ್ಲಿಸಿದ್ದಾರೆ.
ಪತಿ ಹತ್ಯೆ ಬಳಿಕ ಪಲ್ಲವಿ ಅವರು ತಮ್ಮ ಸ್ನೇಹಿತರ ವಾಟ್ಸ್‌ಆ್ಯಪ್ ಗ್ರೂಪ್‌ಗೆ ವಾಯ್ಸ್ ನೋಟ್ ಕಳುಹಿಸಿದ್ದರು. ಈ ವಾಯ್ಸ್ ನೋಟ್ ಸಂಗ್ರಹಸಿ ವಿಧಿ ವಿಜ್ಞಾನ ಪ್ರಯೋಗಾಲಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿತ್ತು. ವರದಿಯಲ್ಲಿ ವಾಯ್ಸ್ ನೋಟ್‌ನಲ್ಲಿ ಇರುವ ಧ್ವನಿ ಹಾಗೂ ಪಲ್ಲವಿ ಧ್ವನಿ ತಾಳೆ ಆಗಿರುವುದು ದೃಢಪಟ್ಟಿದೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.