ಬೆಂಗಳೂರು: ‘ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಇತ್ಯರ್ಥವಾಗುವ ತನಕ ತಮ್ಮನ್ನು ಕರ್ತವ್ಯಕ್ಕೆ ಮರು ನೇಮಕ ಮಾಡಿ ಎಂದು ಒತ್ತಾಯಿಸಬಾರದು’ ಎಂದು ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ವಿಕಾಸ್ ಅವರಿಗೆ ಹೈಕೋರ್ಟ್ ಮೌಖಿಕವಾಗಿ ಆದೇಶಿಸಿದೆ.
ವಿಕಾಸ್ ಕುಮಾರ್ ವಿಕಾಸ್ ಅವರ ಅಮಾನತು ಆದೇಶ ರದ್ದುಪಡಿಸಿರುವ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ, ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಅವರು, ‘ಅಮಾನತು ಆದೇಶವನ್ನು ಸಮರ್ಥನೆ ಮಾಡಿಕೊಳ್ಳುವ ದಾಖಲೆಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಲಾಗುವುದು. ಹೀಗಾಗಿ, ಸಿಎಟಿ ಆದೇಶಕ್ಕೆ ತಡೆ ನೀಡಬೇಕು’ ಎಂದು ಮನವಿ ಮಾಡಿದರು.
ವಿಕಾಸ್ ಪರ ಹಾಜರಿದ್ದ ಪದಾಂಕಿತ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ, ‘ನಾವು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಿಲ್ಲ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಅಮಾನತು ಆದೇಶ ರದ್ದಾಗಿದೆ. ಸರ್ಕಾರ ಪುನರ್ ನೇಮಕದ ಆದೇಶ ಹೊರಡಿಸಬೇಕಾಗಿದೆ. ಹಾಗಾಗಿ, ಈ ಮೇಲ್ಮನವಿ ವಿಲೇವಾರಿ ಆಗುವ ತನಕ ಪುನರ್ ನೇಮಕಕ್ಕೆ ಒತ್ತಾಯ ಮಾಡಬಾರದು’ ಎಂದು ಸೂಚಿಸಿ ವಿಚಾರಣೆಯನ್ನು ಇದೇ 9ಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.