ADVERTISEMENT

ಜಮೀನು ಮಾರುವ ರೈತರಿಗೆ ಅನುಕೂಲ: ಈರಣ್ಣ ಕಡಾಡಿ

ಭೂಸುಧಾರಣೆ ತಿದ್ದುಪಡಿ ಕಾಯ್ದೆ ವಿಶ್ಲೇಷಣೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 8:19 IST
Last Updated 9 ಸೆಪ್ಟೆಂಬರ್ 2020, 8:19 IST
ಈರಣ್ಣ ಕಡಾಡಿ
ಈರಣ್ಣ ಕಡಾಡಿ   

ಚಿತ್ರದುರ್ಗ: ಭೂಸುಧಾರಣಾ ತಿದ್ದುಪಡಿ ಕಾಯ್ದೆ ಜಾರಿಗೆ ತರುವುದರಿಂದ ಕೃಷಿ ಜಮೀನಿಗೆ ಸ್ಪರ್ಧಾತ್ಮಕ ಬೆಲೆ ಸಿಗಲಿದೆ. ಭೂಮಿ ಮಾರಾಟ ಮಾಡಲು ಇಚ್ಛಿಸುವ ರೈತರಿಗೆ ಇದರಿಂದ ಅನುಕೂಲವಾಗಲಿದೆ ಎಂದು ರಾಜ್ಯ ಸಭಾ ಸದಸ್ಯರೂ ಆಗಿರುವ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಅಭಿಪ್ರಾಯಪಟ್ಟರು.

‘ಭೂಮಿ ಹೊಂದಿದವರು ಮಾತ್ರ ಜಮೀನು ಖರೀದಿಗೆ ಅವಕಾಶವಿತ್ತು. ಆದರೂ, ಕಳ್ಳದಾರಿಯಲ್ಲಿ ವ್ಯವಹಾರ ನಡೆಯುತ್ತಿತ್ತು. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಕಾಯ್ದೆ ಬಗ್ಗೆ ರೈತರ ಅಭಿಪ್ರಾಯ ಪಡೆಯಲು ಸರ್ಕಾರ ತಯಾರಿದೆ. ಮಾರಕವಾದ ಅಂಶಗಳನ್ನು ಕೈಬಿಟ್ಟು ಕಾಯ್ದೆ ಮಾರ್ಪಡಿಸಲು ಸಿದ್ಧವಿದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಲಾಕ್‌ಡೌನ್‌ ಸಂದರ್ಭದಲ್ಲಿ ಹಲವು ಉದ್ಯಮ ನೆಲಕಚ್ಚಿದರೂ ಕೃಷಿಗೆ ಮಾತ್ರ ತೊಂದರೆ ಉಂಟಾಗಲಿಲ್ಲ. ಉದ್ಯಮಿ ಹಾಗೂ ಉದ್ಯೋಗಸ್ಥರು ಕೃಷಿಯತ್ತ ಆಕರ್ಷಿತರಾಗುತ್ತಿದ್ದಾರೆ. ಇದರಿಂದ ಕೃಷಿ ಉತ್ಪನ್ನ ಹೆಚ್ಚಳವಾಗುವ ಸಾಧ್ಯತೆ ಇದೆ. ಸರ್ಕಾರದ ನಿರೀಕ್ಷೆಯಂತೆ ರೈತರ ಆದಾಯ ದ್ವಿಗುಣಗೊಂಡರೆ ರೈತರು ಕೃಷಿ ಭೂಮಿ ಮಾರಾಟ ಮಾಡಲು ಮುಂದೆ ಬರುವುದಿಲ್ಲ. ಅನಿವಾರ್ಯ ಕಾರಣದಿಂದ ಭೂಮಿ ಮಾರಾಟ ಮಾಡುವವರಿಗೆ ಮಾತ್ರ ಕಾಯ್ದೆ ಅನುಕೂಲವಾಗಲಿದೆ’ ಎಂದು ಹೇಳಿದರು.

ADVERTISEMENT

‘ವ್ಯಾಪಾರಸ್ಥರು ರೈತರಿಗೆ ಮಾಡುತ್ತಿದ್ದ ವಂಚನೆಗೆ ಕಡಿವಾಣ ಹಾಕುವ ಉದ್ದೇಶದಿಂದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಎಪಿಎಂಸಿ ಆವರಣದ ಹೊರಗೂ ಕೃಷಿ ಉತ್ಪನ್ನ ಖರೀದಿಗೆ ಅವಕಾಶ ಸಿಕ್ಕಿದೆ. ಇದರಿಂದ ರೈತರು ಬೆಳೆದ ಬೆಳೆಗೆ ಸ್ಪರ್ಧಾತ್ಮಕ ಬೆಲೆ ಸಿಗಲಿದೆ. ಎಪಿಎಂಸಿ ತಿದ್ದುಪಡಿ ಕಾಯ್ದೆ ರೈತರಿಗೆ ವರದಾನವಾಗಲಿದೆ’ ಎಂದು ಸಮರ್ಥಿಸಿಕೊಂಡರು.

‘ಪ್ರಸಕ್ತ ವರ್ಷ ಕೃಷಿ ಭೂಮಿಯ ಉಳುಮೆ ಹಾಗೂ ಬಿತ್ತನೆ ಪ್ರಮಾಣ ಏರಿಕೆಯಾಗಿದೆ. ಎರಡು ವರ್ಷಗಳಿಂದ ಉತ್ತಮ ಮಳೆ ಬೀಳುತ್ತಿರುವುದರಿಂದ ರೈತರು ರಸಗೊಬ್ಬರದ ಮೊರೆ ಹೋಗುತ್ತಿದ್ದಾರೆ. ನಿಗದಿಗಿಂತ ಹೆಚ್ಚು ಪ್ರಮಾಣದಲ್ಲಿ ಯೂರಿಯಾ ರಸಗೊಬ್ಬರ ಬಳಕೆಯಾಗುತ್ತಿದೆ ಹೊರತು ಅಭಾವ ಸೃಷ್ಟಿಯಾಗಿಲ್ಲ’ ಎಂದರು.

‘ಲಾಕ್‌ಡೌನ್ ಕಾರಣಕ್ಕೆ ರೈಲು ಸಂಚಾರದಲ್ಲಿ ಕೊಂಚ ವ್ಯತ್ಯಯ ಉಂಟಾಗಿದೆ. ಹೀಗಾಗಿ, ರಸಗೊಬ್ಬರ ಪೂರೈಕೆಯಲ್ಲಿ ಸಮಸ್ಯೆ ಸೃಷ್ಟಿಯಾಗಿದೆ. ಕೇಂದ್ರ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಅವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗಿದೆ. ರೈತರು ಮತ್ತು ಸರ್ಕಾರದ ನಡುವಿನ ಕೊಂಡಿ ಅಥವಾ ರಾಯಭಾರಿಯಾಗಿ ಬಿಜೆಪಿ ರೈತ ಮೋರ್ಚಾ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.

‘ದೇಶದಲ್ಲಿ 10 ಸಾವಿರ ರೈತರ ಉತ್ಪಾದನಾ ಸಂಸ್ಥೆಗಳನ್ನು (ಎಫ್‌ಪಿಒ) ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ನಿರೀಕ್ಷೆಯಂತೆ ಎಫ್‌ಪಿಒ ರಚನೆ ಆಗುತ್ತಿಲ್ಲ. ಈ ಸಂಸ್ಥೆ ರಚನೆ ಮಾಡಿಕೊಳ್ಳುವುದಿರಂದ ರೈತರಿಗೆ ಸರ್ಕಾರದ ಸಬ್ಸಿಡಿ ಸಿಗಲಿದೆ. ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನು ರೈತ ಮೋರ್ಚಾ ಮಾಡಲಿದೆ. ಬೆಳೆ ಪರಿಹಾರ ಮಂಜೂರಾತಿಯಲ್ಲಿ ಉಂಟಾಗಿರುವ ಲೋಪಗಳನ್ನು ಸರಿಪಡಿಸಿಕೊಳ್ಳುವಂತೆ ಸರ್ಕಾರದ ಗಮನ ಸೆಳೆಯಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್‌.ನವೀನ್‌, ವಿಭಾಗೀಯ ಪ್ರಭಾರಿ ಜಿ.ಎಂ.ಸುರೇಶ್‌, ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ, ಮುಖಂಡರಾದ ಶಿವಪ್ರಸಾದ್‌, ಗುರುಲಿಂಗ, ಲೋಕೇಶ್‌, ಸಿದ್ದೇಶ್‌ ಯಾದವ್‌, ರಮೇಶ್‌, ನಾಗರಾಜ ಬೇದ್ರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.