ADVERTISEMENT

ಐಎಸ್‌ ನಂಟು: ರಾಜ್ಯದಲ್ಲೂ ಶೋಧ, ಇಬ್ಬರು ಯುವಕರ ವಿಚಾರಣೆ ನಡೆಸಿದ ಎನ್ಐಎ

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 20:01 IST
Last Updated 31 ಜುಲೈ 2022, 20:01 IST
   

ಬೆಂಗಳೂರು/ತುಮಕೂರು/ಭಟ್ಕಳ: ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರಗಾಮಿ ಸಂಘಟನೆ ಜತೆ ನಂಟು ಹೊಂದಿರುವ ಆರೋಪದ ಮೇಲೆ ರಾಜ್ಯದಲ್ಲೂ ಭಾನುವಾರ ಶೋಧ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ತುಮಕೂರು ಮತ್ತು ಭಟ್ಕಳದಲ್ಲಿ ಇಬ್ಬರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.

ತುಮಕೂರಿನ ಖಾಸಗಿ ವೈದ್ಯಕೀಯ ಕಾಲೇಜು ಒಂದರಲ್ಲಿ ಯುನಾನಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಮಖ್ರಾನ್‌ ಸಾಜಿದ್‌ ಇಸ್ಮಾಯಿಲ್‌ ಮತ್ತು ಭಟ್ಕಳದಲ್ಲಿ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುವ ಅಬ್ದುಲ್‌ ಮುಕ್ತದೀರ್‌ ಎಂಬ ಯುವಕರನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಕೆಲಕಾಲ ವಿಚಾರಣೆ ನಡೆಸಿದ ಬಳಿಕ, ಹೆಚ್ಚಿನ ವಿಚಾರಣೆಗಾಗಿ ದೆಹಲಿ ಎನ್‌ಐಎ ಕಚೇರಿಗೆ ಹಾಜರಾಗುವಂತೆ ನೋಟಿಸ್‌ ನೀಡಿ ಇಬ್ಬರನ್ನೂ ಬಿಡುಗಡೆ ಮಾಡಲಾಗಿದೆ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.

ಐಎಸ್‌ ಉಗ್ರಗಾಮಿ ಸಂಘಟನೆಗೆ ಯುವಕರನ್ನು ಸೆಳೆಯುವ ಪ್ರಯತ್ನದಲ್ಲಿ ತೊಡಗಿರುವವರ ವಿರುದ್ಧ ಎನ್‌ಐಎ ದೆಹಲಿ ಘಟಕ ದಾಖಲಿಸಿರುವ ಪ್ರಕರಣದ ತನಿಖೆಯ ಭಾಗವಾಗಿ ಭಾನು
ವಾರ ಹಲವು ರಾಜ್ಯಗಳಲ್ಲಿ ಶೋಧ ನಡೆಸಲಾಗಿದೆ. ತುಮಕೂರಿನ ಸದಾಶಿವನಗರದಲ್ಲಿ ಮಖ್ರಾನ್‌ ನೆಲೆಸಿದ್ದ ಮನೆ ಹಾಗೂ ಭಟ್ಕಳದ ಚಿನ್ನದ ಪಳ್ಳಿ(ಮಸೀದಿ) ಸಮೀಪದಲ್ಲಿ ಮುಕ್ತದೀರ್‌ ಕುಟುಂಬ ವಾಸವಿದ್ದ ಮನೆಗಳ ಮೇಲೆ ಭಾನುವಾರ ಬೆಳಿಗ್ಗೆಯೇ ದಾಳಿಮಾಡಿದ ಎನ್‌ಐಎ ಅಧಿಕಾರಿಗಳು, ಹಲವು ಗಂಟೆಗಳ ಕಾಲ ಶೋಧ ನಡೆಸಿದರು.

ADVERTISEMENT

‘ಐಎಸ್‌ ಸಂಘಟನೆಯು ಅರೇಬಿಕ್‌ ಭಾಷೆಯಲ್ಲಿ ರವಾನಿಸುತ್ತಿದ್ದ ಪ್ರಚೋದನಕಾರಿ ಸಂದೇಶಗಳಲ್ಲಿ ಆರೋಪಿಗಳು ಮರಾಠಿ ಸೇರಿದಂತೆ ಭಾರತೀಯ ಭಾಷೆಗಳಿಗೆ ಅನುವಾದಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಯುವಕರನ್ನು ಐಎಸ್‌ನತ್ತ ಸೆಳೆಯುವ ಭಾಗವಾಗಿ ಇಬ್ಬರೂ ಕೆಲಸ ಮಾಡುತ್ತಿರುವ ಶಂಕೆಯ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಆರೋಪಿಗಳು ವಾಸವಿದ್ದ ಮನೆಯಲ್ಲಿ ಕಾಗದ ಪತ್ರಗಳು, ಪುಸ್ತಕಗಳು, ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಆರೋಪಿಗಳ ಮೊಬೈಲ್‌ಗಳನ್ನು ತನಿಖಾ ತಂಡಗಳು ಪರಿಶೀಲನೆ ನಡೆಸಿವೆ. ಕೆಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮಹಾರಾಷ್ಟ್ರ ಗಡಿಯಲ್ಲಿ ಇಬ್ಬರು ವಶಕ್ಕೆ

ಬೆಳಗಾವಿ: ರಾಜ್ಯದ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಹುಪರಿಯಲ್ಲಿ ಇಬ್ಬರು ಯುವಕರನ್ನು ಎನ್‌ಐಎ ವಶಕ್ಕೆ ಪಡೆದಿದೆ.

ಐಎಸ್‌ ಜಾಲದ ಜತೆ ನಂಟು ಹೊಂದಿರುವ ಆರೋಪದ ಮೇಲೆ ಹಫೀಜ್‌ ಇರ್ಷಾದ್‌ ಶೌಕತ್‌ ಶೇಖ್‌ ಹಾಗೂ ಅಲ್ತಾಫ್‌ ಶೌಕತ್‌ ಶೇಖ್‌ ಎಂಬುವವರು ವಾಸವಾಗಿರುವ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲ್ಲೂಕಿನ ಹುಪರಿ ಗ್ರಾಮದಲ್ಲಿ ಇವರು ವಾಸವಿದ್ದ ಮನೆಯ ಮೇಲೆ ಭಾನುವಾರ ದಾಳಿ ಮಾಡಿದ ತನಿಖಾ ತಂಡ, ಬಳಿಕ ವಿಚಾರಣೆಗಾಗಿ ವಶಕ್ಕೆ ಪಡೆದಿದೆ ಎಂಬ ಮಾಹಿತಿ ಲಭಿಸಿದೆ.

ಹುಪರಿ ಸಮೀಪದ ರೆಂಧಾಳದಲ್ಲಿ ಇವರಿಬ್ಬರೂ ನಡೆಸುತ್ತಿದ್ದ ಲಬ್ಬೈಕ್‌ ಇಮ್ದಾದ್‌ ಫೌಂಡೇಷನ್‌ ಕಚೇರಿ ಮೇಲೆ ಜನರು ಕಲ್ಲು ತೂರಾಟ ನಡೆಸಿ, ಪರಿಕರಗಳನ್ನು ಧ್ವಂಸಗೊಳಿಸಿದ್ದಾರೆ.

ಆರು ರಾಜ್ಯಗಳ 13 ಸ್ಥಳಗಳಲ್ಲಿ ಶೋಧ

ನವದೆಹಲಿ (ಪಿಟಿಐ): ಐಎಸ್‌ ಉಗ್ರ ಸಂಘಟನೆಯ ಚಟುವಟಿಕೆಗಳಿಗೆ ಸಂಬಂಧಿಸಿ
ದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಾನುವಾರ ಕರ್ನಾಟಕ ಸೇರಿದಂತೆ ಆರು ರಾಜ್ಯಗಳಲ್ಲಿ ಶೋಧ ನಡೆಸಿದೆ.

ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ಗುಜರಾತ್‌ರಾಜ್ಯಗಳಲ್ಲಿ ಶಂಕಿತರ 13 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ಎನ್‌ಐಎ ಹೇಳಿಕೆಯಲ್ಲಿ ತಿಳಿಸಿದೆ.ಬಿಹಾರದ ಅರಾರಿಯಾ, ಉತ್ತರ ಪ್ರದೇಶದ ದೇವಬಂದ್,ಮಧ್ಯಪ್ರದೇಶದಭೋಪಾಲ್, ರೈಸನ್ ಜಿಲ್ಲೆ ಮತ್ತುಮಹಾರಾಷ್ಟ್ರದ ನಾಂದೇಡ್ ಮತ್ತು ಕೊಲ್ಲಾಪುರ ಜಿಲ್ಲೆಗಳಲ್ಲಿ ಶೋಧ ನಡೆಸಿ, ದಾಖಲೆಗಳನ್ನು ವಶಪಡಿಸಿಕೊಂಡಿದೆ. ‘ಗುಜರಾತ್‌ನಭರೂಚ್, ಸೂರತ್, ನವಸಾರಿ ಮತ್ತು ಅಹಮದಾಬಾದ್ ಜಿಲ್ಲೆಗಳಲ್ಲಿ ಶೋಧ ನಡೆಸಿ, ಮೂವರ ವಿಚಾರಣೆ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.