ADVERTISEMENT

ನ್ಯಾಯಾಂಗದಲ್ಲಿ ಆದರ್ಶ ತುತ್ತತುದಿಯಲ್ಲಿದೆಯೇ? ಕಾಗೇರಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 19:25 IST
Last Updated 12 ಅಕ್ಟೋಬರ್ 2022, 19:25 IST
ಕೋಲಾರದಲ್ಲಿ ಬುಧವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿಧಾನಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು
ಕೋಲಾರದಲ್ಲಿ ಬುಧವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿಧಾನಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು   

ಕೋಲಾರ: ‘ಆದರ್ಶ, ಮೌಲ್ಯ ಕುಸಿದಿರು ವುದು ಶಾಸಕಾಂಗದಲ್ಲಿ ಮಾತ್ರವೇ? ನ್ಯಾಯಾಂಗ ವ್ಯವಸ್ಥೆಯಲ್ಲಿ ಏನು ಆದರ್ಶ ತುತ್ತತುದಿಯಲ್ಲಿದೆಯೇ? ಭ್ರಷ್ಟಾಚಾರ, ವಿಳಂಬ ಇಲ್ಲವೇ?’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಬುಧವಾರ ಆಯೋಜಿಸಿದ್ದ ‘ಚುನಾವಣೆ ವ್ಯವಸ್ಥೆ ಯಲ್ಲಿ ಸುಧಾರಣೆ ಅಗತ್ಯ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾರ್ಯಾಂಗ ವ್ಯವಸ್ಥೆಗೆ ಜಡತ್ವ ಹಿಡಿದಿದೆ. ಅಧಿಕಾರಿಗಳು ಒಂದು ಕಡತಕ್ಕೆ ಕೊಕ್ಕೆ ಹಾಕಿ ಕಳುಹಿಸಿದರೆ ಅದು ಯಾವ ರೀತಿ ತಿರುಗಿ ಬರುತ್ತದೆ ಎಂಬುದು ನಮಗೇನೂಗೊತ್ತಿಲ್ಲವೇ? ಜನಜೀವನದ ಕಷ್ಟ ಸುಖಕ್ಕೆ ಸ್ಪಂದಿಸುವ ಮಾನವೀಯತೆ, ಭಾವನೆ ಇಲ್ಲದೆ ಕೇವಲ ಸರ್ಕಾರದ ಸುತ್ತೋಲೆ ಪಾಲಿಸುವವರನ್ನು ನಾವು ನೋಡಿಲ್ಲವೇ’ ಎಂದು ಕೇಳಿದರು.

ADVERTISEMENT

ಅದಾದ ನಂತರ ಅವರ ಮಾತು ಮಾಧ್ಯಮಗಳತ್ತ ಹೊರಳಿತು. ‘ಇನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾ ರಂಗ ಹೇಗಿದೆ? ಯಾವ ಪತ್ರಿಕೆಯಲ್ಲಿ ಯಾವ ಸುದ್ದಿ ಬಂದಿದೆ ಎಂಬುದನ್ನು ನನಗೆ ತೋರಿಸಿ. ಅದು ಏಕೆ ಬಂದಿದೆ ಎಂಬುದನ್ನು ನಾನು ಹೇಳುತ್ತೇನೆ. ಯಾವ ಸುದ್ದಿ ಬಂದಿಲ್ಲ ವೆಂದು ಹೇಳಿ, ಏಕೆ ಪ್ರಕಟಿಸಿಲ್ಲ ಎಂಬು ದನ್ನೂ ಹೇಳುತ್ತೇನೆ’ ಎಂದಾಗ ಸಭೆಯಲ್ಲಿದ್ದವರಿಗೆ ನಗು ತಡೆಯಲಾಗಲಿಲ್ಲ.

‘ರಾಜಕೀಯ ವ್ಯಕ್ತಿಗಳು ಸರಿ ಯಾದರೆ ಎಲ್ಲವೂ ಸರಿ ಹೋಗಲಿದೆ ಎಂಬುದಾಗಿ ನೀವು ನಮ್ಮತ್ತ ಬೊಟ್ಟು ಮಾಡಿ ತೋರಿಸುತ್ತೀರಿ. ಜವಾಬ್ದಾರಿ, ಮಹತ್ವ ನಮ್ಮ ಮೇಲೆ ಹೆಚ್ಚು ಇರುವುದು ನಿಜ. ಅದರ ಅರಿವೂ ನಮಗಿದ್ದು, ಸರಿ ಮಾಡಿಕೊಳ್ಳಲು ಪ್ರಯತ್ನ ನಡೆಯುತ್ತಿದೆ. ನಾವು ಮಾತ್ರ ಸರಿ ಹೋದರೆ ವ್ಯವಸ್ಥೆ ಸಂಪೂರ್ಣ ಸರಿ ಹೋಗುವುದಿಲ್ಲ’ ಎಂದು ಪ್ರತಿಪಾದಿಸಿದರು.

‘ಸಹಕಾರ ಸಂಘದಿಂದ ಹಿಡಿದು ಸಂಸತ್ತಿನವರೆಗೆ ಎಲ್ಲಾ ಚುನಾವಣೆಗಳಲ್ಲಿ ಹಣ, ಹೆಂಡ, ಜಾತಿ, ತೋಳ್ಬಲ
ಪ್ರಧಾನ್ಯ ಪಡೆದು ನ್ಯಾಯಸಮ್ಮತ ಚುನಾವಣಾ ವ್ಯವಸ್ಥೆ ದೂರವಾಗುವ ಆತಂಕ ಕಾಡುತ್ತಿದೆ. ಯುವಜನತೆ ‘ನನ್ನ ಮತ ಮಾರಾಟಕ್ಕಿಲ್ಲ’ ಎಂಬ ಆಂದೋಲನ ರೂಪಿಸಬೇಕಿದೆ’ ಎಂದು ಅವರು ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.