ಬೆಂಗಳೂರು: ‘ರಾಜಭವನವನ್ನು ಬಿಜೆಪಿ ಕಚೇರಿ ಎನ್ನುವುದಾದರೆ, ವಿಧಾನಸೌಧ ಕಾಂಗ್ರೆಸ್ ಕಚೇರಿಯೇ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಪ್ರಶ್ನಿಸಿದರು.
ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ರಾಜ್ಯಪಾಲರಿಗೆ ಸಂವಿಧಾನದತ್ತ ಅಧಿಕಾರವಿದೆ. ರಾಜಭವನ ಯಾವುದೇ ಪಕ್ಷದ ಕಚೇರಿಯಲ್ಲ. ವಿಧಾನಸೌಧವನ್ನು ಕಾಂಗ್ರೆಸ್ ಕಚೇರಿ ಮಾಡಿಕೊಂಡು ಅಧಿಕಾರ ನಡೆಸುತ್ತಿರುವವರು ರಾಜಕೀಯ ಕಾರಣಗಳಿಗಾಗಿ ಟೀಕಿಸುತ್ತಿದ್ದಾರೆ’ ಎಂದು ದೂರಿದರು.
‘ಆಡಳಿತಾರೂಢ ಸರ್ಕಾರವೇ ಪ್ರತಿಭಟನೆಗೆ ನಡೆಸುತ್ತಿದೆ. ಇಂತಹ ನಡೆ ಸರ್ಕಾರದ ವೈಫಲ್ಯದ ಪ್ರತೀಕ. ಕಾಂಗ್ರೆಸ್ ಸರ್ಕಾರ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ. ಎಲ್ಲ ಸಚಿವರೂ ರಾಜೀನಾಮೆ ನೀಡಿದ ನಂತರ ಪ್ರತಿಭಟನೆ ನಡೆಸಲಿ’ ಎಂದು ಒತ್ತಾಯಿಸಿದರು.
‘ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವುದು ಇತಿಹಾಸದಲ್ಲಿ ಇದೇ ಮೊದಲು ಎನ್ನುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ತಿಸುತ್ತಿದ್ದಾರೆ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ, ಜನಾರ್ದನ ರೆಡ್ಡಿ ಅವರ ವಿರುದ್ಧದ ತನಿಖೆಗೂ ಆಗಿನ ರಾಜ್ಯಪಾಲರು ಅನುಮತಿ ನೀಡಿರಲಿಲ್ಲವೇ? ಆಗ ರಾಜಭವನ ಕಾಂಗ್ರೆಸ್ ಕಚೇರಿಯಾಗಿತ್ತೇ’ ಎಂದು ಪ್ರಶ್ನಿಸಿದರು.
‘ಸಿದ್ದರಾಮಯ್ಯ ಅವರ ಹಿಂದೆ ನಿಂತಿರುವ ‘ಬಂಡೆ’ಯನ್ನು ತಳ್ಳುವ ಶಕ್ತಿ ನಮಗಿಲ್ಲ. 136 ಶಾಸಕರಿದ್ದಾರೆ ಎಂಬ ಅಹಂಕಾರ ಕಾಂಗ್ರೆಸ್ ನಾಯಕರಲ್ಲಿದೆ. ಬಿಜೆಪಿ ಸರ್ಕಾರ ಬೀಳಿಸಲು ಪ್ರಯತ್ನಿಸುತ್ತಿದೆ ಎನ್ನುವ ಮೂಲಕ ತಮ್ಮ ಶಾಸಕರ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.