ADVERTISEMENT

ಮಾಝ್‌ ವಾಸವಿದ್ದ ಮಂಗಳೂರಿನ ಮನೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 20:32 IST
Last Updated 21 ಸೆಪ್ಟೆಂಬರ್ 2022, 20:32 IST
   

ಬಂಟ್ವಾಳ/ಮಂಗಳೂರು: ನಿಷೇಧಿತ ಭಯೋತ್ಪಾದಕ ಸಂಘಟನೆ ಐಎಸ್‌ ಜೊತೆ ನಂಟು ಹೊಂದಿರುವ ಆರೋಪಿಮಾಝ್ ಮುನೀರ್‌ ಅಹಮದ್‌ನನ್ನು (21) ಶಿವಮೊಗ್ಗ ಪೊಲೀಸರು ಮಂಗಳೂರಿಗೆ ಕರೆತಂದಿದ್ದಾರೆ.

ನಗರದ ಎಂಜಿನಿಯರಿಂಗ್‌ ಕಾಲೇಜೊಂದರಲ್ಲಿ ವಿದ್ಯಾರ್ಥಿಯಾಗಿರುವ ಮಾಝ್‌ ಇಲ್ಲಿನ ಆರ್ಯ ಸಮಾಜ ರಸ್ತೆಯ ಪಕ್ಕದಲ್ಲಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಸಂಬಂಧಿಕರೊಬ್ಬರ ಮನೆಯಲ್ಲಿ ವಾಸವಾಗಿದ್ದ. ಆ ಮನೆಗೆ ಆರೋಪಿಯನ್ನು ಕರೆತಂದಪೊಲೀಸರು ಮಂಗಳವಾರ ರಾತ್ರಿ ಪರಿಶೀಲನೆ ನಡೆಸಿದ್ದಾರೆ. ಆತನ ಮನೆಯಲ್ಲಿ ಮೊಬೈಲ್‌ ಹಾಗೂ ಇತರ ಕೆಲವು ಎಲೆಕ್ಟ್ರಾನಿಕ್‌ ಪರಿಕರಗಳನ್ನು ವಶಕ್ಕೆ ಪಡೆದಿರುವುದಾಗಿ ಶಿವಮೊಗ್ಗ ಜಿಲ್ಲೆಯ ಪೊಲೀಸರು ‘ಪ್ರಜಾವಾಣಿ‘ಗೆ ಮಾಹಿತಿ ನೀಡಿದ್ದಾರೆ.

ಆರೋಪಿಯನ್ನು ಬಂಟ್ವಾಳ ತಾಲ್ಲೂಕಿನ ನಾವೂರ ಗ್ರಾಮಕ್ಕೆ ಬುಧವಾರ ಕರೆದೊಯ್ದ ಪೊಲೀಸರು, ಅಲ್ಲಿ ಗಣೇಶನ ಕಟ್ಟೆ ಎಂಬಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ‘ಮಾಝ್‌ ಹಾಗೂ ಆತನ ಗೆಳೆಯರು ಅಲ್ಲೂ ಕೆಲವು ನಿಗೂಢ ಚಟುವಟಿಕೆಗಳಲ್ಲಿ ತೊಡಗಿದ್ದರು. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಬಹಿರಂಗ ಪಡಿಸುತ್ತೇವೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

ನಗರದಲ್ಲಿ 2020ರ ನವೆಂಬರ್‌ನಲ್ಲಿ ಲಷ್ಕರ್‌ ಎ ತಯ್ಯಬಾ ಹಾಗೂ ತಾಲಿಬಾನ್‌ ಪರವಾಗಿ ಗೋಡೆ ಬರಹ ಪ್ರಕರಣದಲ್ಲಿ ಬಂಧಿತನಾಗಿದ್ದ ಮಾಝ್‌ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಸೆ.14ರಿಂದಲೇ ಮಾಝ್‌ ಕಾಣೆಯಾಗಿದ್ದಾನೆ ಎಂದು ಆತನ ತಂದೆ ಮುನೀರ್‌ ಅಹಮದ್‌ ಅವರು ಅಂಚೆ ಮೂಲಕ ಕದ್ರಿ ಠಾಣೆಗೆ ಸೋಮವಾರ ದೂರು ನೀಡಿದ್ದರು.

‘ಅಂಚೆ ಮೂಲಕ ನೀಡಿದ ದೂರಿನ ಆಧಾರದಲ್ಲೇ ನಾವು ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ. ಈ ಬಗ್ಗೆ ಮನೆಯವರಿಂದ ಹೆಚ್ಚಿನ ಮಾಹಿತಿ ಪಡೆಯಬೇಕೆನ್ನುವಷ್ಟರಲ್ಲಿ ಆತನ ಬಂಧನದ ವಿಚಾರ ಗೊತ್ತಾಗಿದೆ’ ಎಂದು ಕದ್ರಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಉಡುಪಿ ವರದಿ: ‘ಶಿವಮೊಗ್ಗ ಜಿಲ್ಲೆಗೆ ಶಂಕಿತ ಉಗ್ರರ ಪ್ರವೇಶವಾಗಿರುವುದು ಆತಂಕಕಾರಿ. ಹಿಂದೆ ಮಂಗಳೂರು –ಉಡುಪಿ ಪರಿಸರದಲ್ಲಿಯೂ ಶಂಕಿತ ಉಗ್ರರ ಇರುವಿಕೆ ಪತ್ತೆಯಾಗಿತ್ತು. ಸರ್ಕಾರ ಕೂಂಬಿಂಗ್ ಮಾದರಿಯಲ್ಲಿ ಉಗ್ರರ ಸೆರೆ ಕಾರ್ಯಾಚರಣೆ ನಡೆಸಬೇಕು. ಉಗ್ರರಿಂದ ಯಾರಿಗೂ ನೆಮ್ಮದಿ ಇಲ್ಲವಾಗಿದ್ದು, ಘಟನೆಗೆ ಕೋಮಿನ ಬಣ್ಣ ನೀಡಬಾರದು. ಸಮಾಜದಲ್ಲಿ ಶಾಂತಿ ಕದಡುವಂತಹ ಪ್ರಯತ್ನಗಳನ್ನು ನಿಗ್ರಹಿಸಬೇಕು’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.