ADVERTISEMENT

'ವೀರಶೈವ ಲಿಂಗಾಯತರು ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರುವುದು ಮಹಾ ಅಪರಾಧವೇ?'

ಇನ್ನೆರಡು ದಿನಗಳಲ್ಲಿ ಸಂಪುಟ ವಿಷಯ ಕ್ಲಿಯರ್: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 8:51 IST
Last Updated 27 ನವೆಂಬರ್ 2020, 8:51 IST
ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ
ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ   

ಬೆಂಗಳೂರು: ಲಿಂಗಾಯತರಲ್ಲಿ ಕೆಲವು ಉಪಜಾತಿಗಳಲ್ಲದೆ, ಒಕ್ಕಲಿಗರಲ್ಲೂ ಕೆಲವು ಜಾತಿಗಳನ್ನು ಸೇರಿಸಬೇಕಾಗಿದೆ. ಹೀಗಾಗಿ ಸಮಗ್ರವಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ. ಆದ್ದರಿಂದ ವಿಷಯ ಮುಂದೂಡಲಾಗಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಸಂಪುಟ ಸಭೆ ಮುಕ್ತಾಯದ ಬಳಿಕ ಪೂರ್ವ ನಿಗದಿತ ಸಿಎಂ ಸುದ್ದಿಗೋಷ್ಠಿ ರದ್ದಾಗಿದ್ದರಿಂದ ತಾವೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇನ್ನೂ ಸ್ಟಡಿ ಆಗಬೇಕು. ಪೂರಕ, ಪೋಷಕ ಅಗತ್ಯ ದಾಖಲೆ ಸಿದ್ಧಮಾಡಿಕೊಂಡು ನಿರ್ಣಯ ಮಾಡಲು ನಿರ್ಧರಿಸಲಾಗಿದೆ. ಸಿಎಂಗೆ ಮನವರಿಕೆ ಮಾಡಿಕೊಡಲಾಗಿದೆ. ದೆಹಲಿ ನಾಯಕರು ತೀರ್ಮಾನ ಮಾಡಬಾರದೆಂದು ಯಾವುದೇ ಒತ್ತಡ ಹೇರಿಲ್ಲ. ನಾವು ಸಿಎಂಗೆ ಮನವರಿಕೆ ಮಾಡಿಕೊಡಲು ಸಮರ್ಥರಾದೆವು ಎಂದು ತಿಳಿಸಿದರು.

ಕುಂಚಿಟಿಗ, ಒಕ್ಕಲಿಗರು ಒಬಿಸಿಯಿಂದ ಬಿಟ್ಟು ಹೋಗಿದ್ದಾರೆ. ಅವರನ್ನೂ ಸೇರಿಸಿ ವೀರಶೈವ ಲಿಂಗಾಯತರನ್ನು ಒಬಿಸಿಗೆ ಸೇರಿಸಬೇಕೆಂದು ಕೇಂದ್ರದ ಮುಂದೆ ಪ್ರಸ್ತಾವನೆ ಮಂಡಿಸಲು ಉದ್ದೇಶಿಸಿದೆವು. ಹೀಗಾಗಿ ಸಂಪುಟದಲ್ಲಿ ವಿಷಯ ಡೆಫರ್ ಆಯಿತು. ಕೇಂದ್ರದ ಉದ್ಯೋಗ ಮತ್ತು ಶೈಕ್ಷಣಿಕ ಮೀಸಲಾತಿ ಉದ್ದೇಶಕ್ಕಾಗಿ ಪ್ರಸ್ತಾವನೆ ಸಲ್ಲಿಸಲು ಉದ್ದೇಶಿಸಲಾಗಿತ್ತು ಎಂದು ಹೇಳಿದರು.

ADVERTISEMENT

ಕೇಂದ್ರದ ಉದ್ಯೋಗ ಮತ್ತು ಶೈಕ್ಷಣಿಕ ಮೀಸಲಾತಿ ಉದ್ದೇಶಕ್ಕಾಗಿ ಪ್ರಸ್ತಾವನೆ ಸಲ್ಲಿಸಲು ಉದ್ದೇಶಿಸಲಾಗಿತ್ತು. 1999ರಿಂದಲೂ ವೀರಶೈವ ಸಮಾಜ ಹೋರಾಟ ಮಾಡಿಕೊಂಡು ಬಂದಿದ್ದಾರೆ. ರಾಜ್ಯದಲ್ಲಿ ಈಗ ಮೀಸಲಾತಿ ಕೇಳುತ್ತಿಲ್ಲ. ಕೇಂದ್ರದ ಕೋಟಾದಲಿ ಅವಕಾಶ ಪಡೆಯುವುದಷ್ಟೇ ಉದ್ದೇಶ ಎಂದರು.

ವಿಜಯನಗರ ಜಿಲ್ಲೆ ಘೋಷಣೆಗೆ ಅಧಿಕೃತ ಮುದ್ರೆ

ವಿಜಯ‌ನಗರ ಹೊಸ ಜಿಲ್ಲೆ ಘೋಷಣೆಗೆ ಸಂಪುಟದಲ್ಲಿ ಅಧಿಕೃತ‌ ಮುದ್ರೆಯೊತ್ತಲಾಯಿತು. ಕಳೆದ ಸಂಪುಟ ಸಭೆಯಲ್ಲಿ ತಾತ್ವಿಕ‌ ಒಪ್ಪಿಗೆ ನೀಡಲಾಗಿತ್ತು. ಇದೀಗ ತಾಲೂಕು ಗುರುತಿಸಲಾಗಿದೆ. ತಕರಾರು ಪಡೆದು ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ. ಹೊಸ ಜಿಲ್ಲೆಗೆ ಹೊಸಪೇಟೆ, ಹರಪನಹಳ್ಳಿ, ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕೂಡ್ಲಿಗಿ ತಾಲೂಕುಗಳ ಸೇರ್ಪಡೆಯಾಗಲಿದೆ. ಬಳ್ಳಾರಿ ‌ಜಿಲ್ಲೆಯಲ್ಲಿ 10 ತಾಲೂಕು, 11 ವಿಧಾನಸಭಾ ಕ್ಷೇತ್ರವಿದೆ.

***

ವೀರಶೈವ ಲಿಂಗಾಯತರು ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರುವುದು ಮಹಾ ಅಪರಾಧವೇ? ಅವಕಾಶ ಪಡೆದುಕೊಳ್ಳುವುದು ಅಪರಾಧ ಮಾಡಿರುವ ರೀತಿ ಏಕೆ ನೋಡಲಾಗುತ್ತಿದೆ? ಮುಂದುವರಿದ ವರ್ಗದಲ್ಲಿದ್ದು, ಉಪ ಜಾತಿಗಳು ಒಬಿಸಿ ಪಟ್ಟಿಯಿಂದ ಬಿಟ್ಟು ಹೋಗಿದ್ದರೆ ಅವರನ್ನೂ ಸೇರಿಸಿಕೊಂಡು ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ.

- ಮಾಧುಸ್ವಾಮಿ, ಕಾನೂನು ಸಚಿವ

***

ಇನ್ನೆರಡು ದಿನಗಳಲ್ಲಿ ಸಂಪುಟ ವಿಷಯ ಕ್ಲಿಯರ್: ಬಿಎಸ್‌ವೈ

ಈಗಷ್ಟೇ ಅಮಿತ್ ಷಾ ಜತೆ ಮಾತನಾಡಿದ್ದೇನೆ. ಇನ್ನು ಎರಡು ದಿನಗಳಲ್ಲಿ ಪಟ್ಟಿ ಕಳುಹಿಸಿಕೊಡುವುದಾಗಿ ಹೇಳಿದ್ದಾರೆ. ಸಚಿವ ಸಂಪುಟದ ವಿಷಯ ಕ್ಲಿಯರ್ ಆಗುತ್ತೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ವೀರಶೈವ ಲಿಂಗಾಯತರನ್ಮು ಓಬಿಸಿಗೆ ಸೇರಿಸುವ ಬಗ್ಗೆ ಇಂದು ಯಾವುದೇ ತೀರ್ಮಾನ ಮಾಡಲ್ಲ. ಮಹತ್ವದ ಕಾರಣಕ್ಕೆ ಲಿಂಗಾಯಿತರ ಬಗ್ಗೆ ಓಬಿಸಿಗೆ ಸೇರಿಸಲು ನಿರ್ಧರಿಸಿದ್ದೆವು. ಆದರೆ, ದೆಹಲಿಗೆ ಹೋಗಿ ಚರ್ಚಿಸಿದ ಬಳಿಕ ಅದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಯಾವುದೇ ಆತುರದ ತೀರ್ಮಾನ ಕೈಗೊಳ್ಳದಂತೆ ಸಂಪುಟ ಸಹೋದ್ಯೋಗಿಗಳು ಸಲಹೆ ಮಾಡಿದ್ದಾರೆ. ಹಾಗಾಗಿ ದೆಹಲಿಗೆ ಹೋಗಿ ಬಂದ ಬಳಿಕವಷ್ಟೇ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.