ADVERTISEMENT

ಡಿ.ಕೆ.ಶಿವಕುಮಾರ್‌ ಮತ್ತೆ ವಿಚಾರಣೆ ಸಂಭವ?

ಐ.ಟಿ. ಅಧಿಕಾರಿಗಳ ಪ್ರಶ್ನೆಗೆ ಸಮರ್ಪಕ ಉತ್ತರ ಕೊಡದ ಸಚಿವರು

​ಪ್ರಜಾವಾಣಿ ವಾರ್ತೆ
Published 22 ಜೂನ್ 2018, 18:27 IST
Last Updated 22 ಜೂನ್ 2018, 18:27 IST
   

ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಆದಾಯ ತೆರಿಗೆ ಇಲಾಖೆ (ಐ.ಟಿ) ಅಧಿಕಾರಿಗಳು ಪುನಃ ಸುದೀರ್ಘ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ಸಚಿವರು ಹಾಗೂ ಅವರ ಆಪ್ತರಿಗೆ ಮನೆಗಳ ಮೇಲೆ ಕಳೆದ ವರ್ಷ ದಾಳಿ ನಡೆಸಿದ ಬಳಿಕ ಆದಾಯ ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡಿರುವ ಮಹತ್ವದ ದಾಖಲೆಗಳು ಹಾಗೂ ಭಾರಿ ಹಣದ ಮೂಲ ಕುರಿತು ಸಮಗ್ರ ವಿಚಾರಣೆ ನಡೆಸಿದ್ದಾರೆ. ಆದರೆ, ಅಧಿಕಾರಿಗಳು ಕೇಳಿದ ಬಹಳಷ್ಟು ಪ್ರಶ್ನೆಗಳಿಗೆ ಶಿವಕುಮಾರ್‌ ಸಮರ್ಪಕ ಉತ್ತರ ನೀಡಿಲ್ಲ. ಹೀಗಾಗಿ, ಅವರನ್ನು ಪುನಃ ವಿಚಾರಣೆಗೆ ಒಳಪಡಿಸುವ ಸಂಭವ ಇದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಆದಾಯ ತೆರಿಗೆ ಇಲಾಖೆ ಯಾವಾಗ ಬೇಕಾದರೂ ಶಿವಕುಮಾರ್‌ ಅವರನ್ನು ವಿಚಾರಣೆಗೆ ಒಳಪಡಿಸಬಹದು. ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಕೊಡಬಹುದು. ಅದಕ್ಕೆ ಕಾಯ್ದೆಯಲ್ಲಿ ಅವಕಾಶವಿದೆ. ಇಲ್ಲಿನ ವಿಶೇಷ ಆರ್ಥಿಕ ಅಪರಾಧಗಳ ವಿಚಾರಣಾ ನ್ಯಾಯಾಲಯಕ್ಕೆ ದೂರು ಸಲ್ಲಿಸಿರುವ ಐ.ಟಿ., ಸಮಗ್ರ ವಿಚಾರಣೆಗೆ ಹಾಜರಾಗಲು ಸಚಿವರಿಗೆ ಸೂಚಿಸುವಂತೆ ಮನವಿ ಮಾಡಬಹುದು ಎಂದು ಮೂಲಗಳು ಸ್ಪಷ್ಟಪಡಿಸಿವೆ.

ADVERTISEMENT

ಗುಜರಾತ್‌ ವಿಧಾನಸಭೆ ಸದಸ್ಯರನ್ನು ಇರಿಸಲಾಗಿದ್ದ ಬಿಡದಿ ಸಮೀಪದ ‘ಈಗಲ್‌ಟನ್‌ ರೆಸಾರ್ಟ್‌’ ಮೇಲೆ ದಾಳಿ ನಡೆದ ಸಮಯದಲ್ಲಿ ಕೆಲವು ಬಿಡಿ ಹಾಳೆಗಳನ್ನು ಹರಿದು ಹಾಕಿದ ಬಗ್ಗೆ ಸಚಿವರು ವಿಷಾ‌ದಿಸಿದ್ದಾರೆ. ‘ತಾವು ನಿದ್ದೆಯಿಂದ ಎದ್ದ ತಕ್ಷಣವೇ ಐ.ಟಿ. ದಾಳಿ ನಡೆಯಿತು. ಇದರಿಂದ ಅಧೀರನಾಗಿ, ಹಾಳೆಗಳನ್ನು ಹರಿದು ಹಾಕಿದೆ’ ಎಂದೂ ಅವರು ಹೇಳಿದ್ದಾರೆ.

‘ಹರಿದು ಹಾಕಿದ ಬಿಡಿ ಹಾಳೆಗಳಲ್ಲಿ ಏನಿತ್ತು’ ಎಂಬುದನ್ನು ಶಿವಕುಮಾರ್‌ ಇನ್ನೂ ಬಹಿರಂಗಪಡಿಸಿಲ್ಲ. ಈ ಹಾಳೆಯಲ್ಲಿ ಏನಿತ್ತು. ಅದನ್ನು ಏಕೆ ಹರಿದು ಹಾಕಿದರು ಎಂದು ಪತ್ತೆ ಹಚ್ಚಲು ಐ.ಟಿ. ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದಾರೆ.

ರೆಸಾರ್ಟ್‌ನ ತಮ್ಮ ಕೋಣೆಯಿಂದ ಆದಾಯ ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡ ಹಲವು ಬಿಡಿ ಹಾಳೆಗಳು, ತೊಂದರೆಯಲ್ಲಿದ್ದ ಕೆಲವರು ನೆರವು ನೀಡುವಂತೆ ಕೇಳಿ ಸಲ್ಲಿಸಿದ್ದ ಮನವಿಗಳು ಇರಬಹುದು. ಅಲ್ಲದೆ, ಈ ಹಾಳೆಗಳ ಮೇಲೆ ಕೆಲವು ಲೆಕ್ಕಗಳನ್ನು ಹಾಕಲಾಗಿದೆ. ಅವು ಏನೆಂದು ಹೇಳಲು ಸ್ವಲ್ಪ ಕಾಲಾವಕಾಶ ಬೇಕು ಎಂದೂ ಸಚಿವರು ಹೇಳಿದ್ದಾರೆ.

ಕೆಲವು ಹಾಳೆಗಳ ಮೇಲೆ ಕಾಂಗ್ರೆಸ್‌ ಪಕ್ಷಕ್ಕೆ ಸಂಬಂಧಿಸಿದ ಮಾಹಿತಿಗಳಿವೆ. ತಮ್ಮ ಶಿಕ್ಷಣ ಸಂಸ್ಥೆಗಳಿಗೆ ಖರೀದಿಸಲು ಉದ್ದೇಶಿಸಿರುವ ನಿವೇಶನಗಳ ನೋಂ‌ದಣಿಗೆ ಸಂಬಂಧಿಸಿದ ವಿವರಗಳಿವೆ. ಇದು ಬರೀ ಲೆಕ್ಕಾಚಾರ ಅಷ್ಟೆ. ಆದರೆ, ಅದರಲ್ಲಿ ಹಣಕಾಸಿನ ವ್ಯವಹಾರ ಒಳಗೊಂಡಿಲ್ಲ ಎಂದು ಶಿವಕುಮಾರ್‌ ಹೇಳಿದ್ದಾಗಿ ಮೂಲಗಳು ಖಚಿತಪಡಿಸಿವೆ.

ಸಚಿವರಿಗೆ ಈಗಾಗಲೇ ನ್ಯಾಯಾಲಯ ನೋಟಿಸ್‌ ಜಾರಿ ಮಾಡಿದ್ದು, ಅವರು ಆಗಸ್ಟ್‌ 2ರಂದು ಹಾಜರಾಗುವಂತೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.