ADVERTISEMENT

ಐ.ಟಿ ಅಧಿಕಾರಿಗಳ ಹೆಸರಿನಲ್ಲಿ ದಾಳಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 17:36 IST
Last Updated 13 ಏಪ್ರಿಲ್ 2019, 17:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾಸನ: ಹೊಳೆನರಸೀಪುರ ತಾಲ್ಲೂಕು ಹರದನಹಳ್ಳಿ ಈಶ್ವರ ದೇಗುಲದ ಅರ್ಚಕರ ನಿವಾಸಗಳಲ್ಲಿ ಶುಕ್ರವಾರ ಆದಾಯ ತೆರಿಗೆ (ಐ.ಟಿ) ಅಧಿಕಾರಿಗಳ ಸೋಗಿನಲ್ಲಿ ಇಬ್ಬರು ಅಪರಿಚಿತರು ತಪಾಸಣೆ ಕೈಗೊಂಡ ಸಂಬಂಧ ಅರ್ಚಕ ಪ್ರಕಾಶ್‌ ಭಟ್ಟ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರು ಆಧರಿಸಿ ಪೊಲೀಸರು ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಎಚ್.ಡಿ.ದೇವೇಗೌಡ ಕುಟುಂಬದ ಕುಲದೇವರು ಈಶ್ವರ. ಶುಕ್ರವಾರ ಇಬ್ಬರು ಐ.ಟಿ ಅಧಿಕಾರಿಗಳ ಸೋಗಿನಲ್ಲಿ ದೇಗುಲ, ಅರ್ಚಕರ ಮನೆಗಳಲ್ಲಿ ಶೋಧ ನಡೆಸಿದ್ದರು. ಐ.ಟಿ ಅಧಿಕಾರಿಗಳು ದಾಳಿ ನಡೆಸಿಲ್ಲ ಎಂಬುದು ಇದೀಗ ಖಚಿತವಾಗಿದೆ.

‘ಬೆಳಿಗ್ಗೆ 11 ಗಂಟೆಗೆ ಮನೆಗೆ ಬಂದ ಇಬ್ಬರು, ತಾವು ಐ.ಟಿ ಹಾಗೂ ಚುನಾವಣಾ ಅಧಿಕಾರಿಗಳು ಎಂದು ಹೇಳಿಕೊಂಡರು. ಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚಲು ಅಕ್ರಮವಾಗಿ ಹಣ ಸಂಗ್ರಹಿಸಿಟ್ಟಿರುವ ಮಾಹಿತಿ ಹಿನ್ನೆಲೆಯಲ್ಲಿ ದೇಗುಲ, ಮನೆಯಲ್ಲಿ ತಪಾಸಣೆ ನಡೆಸಬೇಕು ಎಂದರು. ಒಬ್ಬರು ಕನ್ನಡ, ಮತ್ತೊಬ್ಬರು ಹಿಂದಿಯಲ್ಲಿ ಮಾತನಾಡಿದರು. ಮೊಬೈಲ್‌ ಕಸಿದುಕೊಂಡಿದ್ದರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ನಾವು ಯಾವುದೇ ಹಣ ಇರಿಸಿಕೊಂಡಿಲ್ಲ ಎಂದರೂ ದೇವಾಲಯ, ನಮ್ಮ ಮನೆ ಹಾಗೂ ಮತ್ತೊಬ್ಬ ಅರ್ಚಕ ರೇವಣ್ಣ ಅವರ ಮನೆಯಲ್ಲೂ ತಪಾಸಣೆ ನಡೆಸಿದರು. ಎಲ್ಲಿಯೂ ಹಣ ಇರಲಿಲ್ಲ. ನಂತರ ಸಿಲ್ವರ್‌ ಬಣ್ಣದ ಇನ್ನೊವಾ ಕಾರಿನಲ್ಲಿ ತೆರಳಿದರು. ಮನೆಗೆ ಬಂದವರು ಐ.ಟಿ ಅಧಿಕಾರಿಗಳಲ್ಲ ಎಂಬುದು ಮಾಧ್ಯಮಗಳಿಂದ ಗೊತ್ತಾಯಿತು. ನಮ್ಮ ಮನೆ, ದೇಗುಲಗಳಿಗೆ ಪ್ರವೇಶಿಸಿದ ಇಬ್ಬರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಬೇಕು’ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.