ADVERTISEMENT

ಬಳ್ಳಾರಿಯಲ್ಲಿ ಐ.ಟಿ ದಾಳಿ: ‌ಸ್ಪಾಂಜ್‌ ಉ‌ಕ್ಕು ಉದ್ಯಮಿಗಳ ಮನೆ, ಕಾರ್ಖಾನೆ ಶೋಧ

​ಪ್ರಜಾವಾಣಿ ವಾರ್ತೆ
Published 14 ಜನವರಿ 2023, 19:31 IST
Last Updated 14 ಜನವರಿ 2023, 19:31 IST
ಆದಾಯ ತೆರಿಗೆ ಇಲಾಖೆ
ಆದಾಯ ತೆರಿಗೆ ಇಲಾಖೆ    

ಬಳ್ಳಾರಿ: ಜಿಲ್ಲೆಯ ಪ್ರಭಾವಿ ರಾಜಕಾರಣಿಗಳ ಜತೆ ನಿಕಟ ಸಂಬಂಧ ಹೊಂದಿದ್ದಾರೆ ಎನ್ನಲಾದ ಕೆಲ ಗಣಿ ಉದ್ಯಮಿಗಳ ಮನೆ ಹಾಗೂ ಅವರ ಸ್ಪಾಂಜ್‌ ಉಕ್ಕಿನ ಕಾರ್ಖಾನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಬೆಂಗಳೂರು, ಬಳ್ಳಾರಿ ಹಾಗೂ ಕೊಪ್ಪಳ ಸೇರಿದಂತೆ ಹಲವು ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದೊಡ್ಡ ತಂಡ ಏಕಕಾಲಕ್ಕೆ ದಾಳಿ ನಡೆಸಿದೆ. ಮೂರು ದಿನಗಳಿಂದ ಸತತ ದಾಖಲೆ ಪರಿಶೀಲನೆ ನಡೆಯುತ್ತಿದೆ ಎಂದು ವಿಶ್ವಸನೀಯ ಮೂಲಗಳು ‘ಪ್ರಜಾವಾಣಿ‘ಗೆ ತಿಳಿಸಿವೆ.

ಸ್ಪಾಂಜ್‌ ಉಕ್ಕಿನ ಕಾರ್ಖಾನೆ ನಡೆಸುತ್ತಿರುವ ಗಣಿ ಉದ್ಯಮಿ ಜಿಲ್ಲೆಯ ಪ್ರಭಾವಿ ರಾಜಕಾರಣಿಗಳು ಹಾಗೂ ಅವರ ಹತ್ತಿರದ ಸಂಬಂಧಿ ಜತೆ ಪಾಲುದಾರಿಕೆ ಹೊಂದಿದ್ದಾರೆ ಎನ್ನಲಾಗಿದೆ. ಯಾರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ ಎಂಬುದನ್ನು ಮೂಲಗಳು ಬಹಿರಂಗ ಮಾಡಿಲ್ಲ.

ADVERTISEMENT

ಆದರೆ, ಈ ಗಣಿ ಉದ್ಯಮಿಗೆ ಸೆಪ್ಟೆಂಬರ್‌ ತಿಂಗಳಲ್ಲಿ ಹೈದರಾಬಾದ್‌ನ ಸಿಬಿಐ ಕಚೇರಿಗೆ ಕರೆಸಿ ವಿಚಾರಣೆ ನಡೆಸಲಾಗಿತ್ತು. ಮಾಜಿ ಸಚಿವ ಜನಾರ್ದನರೆಡ್ಡಿ ಅಥವಾ ಬೇರೆ ಯಾವುದೇ ರಾಜಕಾರಣಿಗಳ ಜತೆ ವ್ಯಾವಹಾರಿಕ ಸಂಬಂಧವಿದೆಯೇ ಎಂದು ವಿಚಾರಣೆ ನಡೆದಿತ್ತು.

ಅಕ್ರಮ ಗಣಿಗಾರಿಕೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರ ವರದಿಯಿಂದ ಬಳ್ಳಾರಿ ದೇಶಾದ್ಯಂತ ಸದ್ದು ಮಾಡಿತ್ತು. ಈ ಆರೋಪ ಸಂಬಂಧ ಮಾಜಿ ಸಚಿವ ಜನಾರ್ದನ ರೆಡ್ಡಿ 2011ರಲ್ಲಿ ಜೈಲು ಸೇರಿದ್ದರು. ನಾಲ್ಕು ವರ್ಷಗಳ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ. ಈಗ ಅವರನ್ನು ಬಳ್ಳಾರಿಗೆ ಬರದಂತೆ ನಿರ್ಬಂಧಿಸಲಾಗಿದೆ.

ಶ್ರೀರಾಮುಲು ನಿರಾಕರಣೆ
ತಮ್ಮ ಪಾಲುದಾರಿಕೆಗೆ ಸೇರಿದ್ದೆನ್ನಲಾದ ಸ್ಪಾಂಜ್‌ ಉಕ್ಕಿನ ಕಾರ್ಖಾನೆ ಮೇಲೆ ಐ.ಟಿ ದಾಳಿ ನಡೆದಿದೆ ಎಂಬ ಆರೋಪವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ನಿರಾಕರಿಸಿದ್ದಾರೆ.

‘ನಾನು ಯಾವ ಕಾರ್ಖಾನೆಯಲ್ಲೂ ಪಾಲುದಾರಿಕೆ ಹೊಂದಿಲ್ಲ. ಗಣಿಗಾರಿಕೆ ಉದ್ಯಮ ತುತ್ತ ತುದಿಯಲ್ಲಿದ್ದಾಗಲೇ ಯಾರ ಜತೆ ಪಾಲುದಾರಿಕೆ ಹೊಂದಿರಲಿಲ್ಲ. ಈಗ ಹೇಗೆ ಪಾಲುದಾರಿಕೆ ಹೊಂದುತ್ತೇನೆ’ ಎಂದು ಶ್ರೀರಾಮುಲು ಮಾಧ್ಯಮ ಪ್ರತಿನಿಧಿಗಳನ್ನು ಪ್ರಶ್ನಿಸಿದರು.

ಆದಾಯ ತೆರಿಗೆ ಇಲಾಖೆ ದಾಳಿ ನಡೆಯುತ್ತಿರುತ್ತದೆ. ಆದಾಯ ತೆರಿಗೆ ತಪ್ಪಿಸಿದ ವೇಳೆ ಇಂಥ ದಾಳಿಗಳು ಸಾಮಾನ್ಯ. ಯಾರ ಮೇಲೆ ದಾಳಿ ನಡೆದರೂ ಕಾನೂನು ತನ್ನದೇ ಕ್ರಮ ಕೈಗೊಳ್ಳಲಿದೆ ಎಂದೂ ಸಚಿವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.