ADVERTISEMENT

ಡೋಲೊ– 650 ತಯಾರಕರ ಮೇಲೆ ಐ.ಟಿ ದಾಳಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 16:26 IST
Last Updated 6 ಜುಲೈ 2022, 16:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಡೋಲೊ–650 ಮಾತ್ರೆಗಳ ತಯಾರಕರಾಗಿರುವ ಮೈಕ್ರೋ ಲ್ಯಾಬ್ಸ್‌ ಕಂಪನಿಯ ಕಚೇರಿಗಳ ಮೇಲೆ ಬುಧವಾರ ದಾಳಿಮಾಡಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಶೋಧ ನಡೆಸಿದ್ದಾರೆ.

ನಗರದ ಮಾಧವನಗರದಲ್ಲಿರುವ ಮೈಕ್ರೋ ಲ್ಯಾಬ್ಸ್‌ ಕಂಪನಿಯ ಪ್ರಧಾನ ಕಚೇರಿ, ಕಂನಿಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ದಿಲೀಪ್‌ ಸುರಾನ, ನಿರ್ದೇಶಕ ಆನಂದ್‌ ಸುರಾನ ಮನೆಗಳ ಮೇಲೆ ದಾಳಿ ನಡೆದಿದೆ. ದೆಹಲಿ, ಸಿಕ್ಕಿಂ, ಪಂಜಾಬ್‌, ತಮಿಳುನಾಡು, ಗೋವಾ ರಾಜ್ಯಗಳಲ್ಲೂ ದಾಳಿ ನಡೆದಿದ್ದು, ಕಂಪನಿಗೆ ಸೇರಿದ 40 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೋವಿಡ್‌ ಸಾಂಕ್ರಾಮಿಕದಿಂದಾಗಿ ಡೋಲೊ–650 ಮಾತ್ರೆಗೆ ತೀವ್ರ ಬೇಡಿಕೆ ಸೃಷ್ಟಿಯಾಗಿತ್ತು. 2020–21ರಲ್ಲಿ 350 ಕೋಟಿ ಮಾತ್ರೆಗಳನ್ನು ಮಾರಾಟ ಮಾಡಿರುವುದಾಗಿ ಪ್ರಕಟಿಸಿದ್ದ ಕಂಪನಿ, ₹ 400 ಕೋಟಿ ಆದಾಯ ಲಭಿಸಿರುವುದಾಗಿ ಹೇಳಿತ್ತು. ನಂತರವೂ ಡೋಲೊ–650 ಮಾತ್ರೆಗಳಿಗೆ ಹೆಚ್ಚು ಬೇಡಿಕೆ ಇತ್ತು. ವಹಿವಾಟು ಹೆಚ್ಚಿರುವ ಅವಧಿಯಲ್ಲಿ ತೆರಿಗೆ ವಂಚನೆ ನಡೆಸಿರುವ ಅನುಮಾನದ ಮೇಲೆ ಶೋಧ ನಡೆಸಲಾಗಿದೆ.

ADVERTISEMENT

ಆದಾಯ ತೆರಿಗೆ ಇಲಾಖೆಯ 200ಕ್ಕೂ ಹೆಚ್ಚು ಅಧಿಕಾರಿಗಳು 40 ತಂಡಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.