ADVERTISEMENT

ಸರ್ಕಾರದ ‘ಜಡತೆ’: ಪುಟಿದೆದ್ದ ಐಟಿ

2015–20ರ ಅವಧಿ: ಖರ್ಚಾಗದ ಅನುದಾನ– ಸಿಎಜಿ

ಎಸ್.ರವಿಪ್ರಕಾಶ್
Published 26 ಸೆಪ್ಟೆಂಬರ್ 2022, 19:42 IST
Last Updated 26 ಸೆಪ್ಟೆಂಬರ್ 2022, 19:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಾಗಿ ರಾಜ್ಯ ಸರ್ಕಾರ ಪ್ರಕಟಿಸಿದ ನೀತಿಯ ಅನ್ವಯ (2015–2020) ಐದು ವರ್ಷಗಳ ಅವಧಿಯಲ್ಲಿ 20 ಸಾವಿರ ನವೋದ್ಯಮಗಳ ಸ್ಥಾಪನೆಗೆ ಉತ್ತೇಜನ ಮತ್ತು 18 ಲಕ್ಷ ಜನರಿಗೆ ಉದ್ಯೋಗ ನೀಡುವ ಗುರಿ ಈಡೇರಿಲ್ಲ.

2000 ದಿಂದ ಈಚೆಗೆ ಒಟ್ಟು ನಾಲ್ಕು ನೀತಿಗಳನ್ನು ಜಾರಿ ಮಾಡಲಾಗಿದೆ. ಇವುಗಳನ್ನು ಪರಿಣಾಮಕಾರಿಯಾಗಿ
ಜಾರಿಗೊಳಿಸುವಲ್ಲಿ ಸರ್ಕಾರ ಎಡವಿದೆ ಮತ್ತು ನಿರಾಸಕ್ತಿ ತೋರಿದೆ. ಆದರೆ, ಖಾಸಗಿ ಕಂಪನಿಗಳು ಸ್ವಂತ ಪ್ರಯತ್ನದಿಂದಾಗಿ ರಾಜ್ಯದಲ್ಲಿ ಹೆಚ್ಚಿನ ಬೆಳವಣಿಗೆ ಸಾಧಿಸಿವೆ ಎಂದು ಭಾರತದ ಲೆಕ್ಕನಿಯಂತ್ರಕರು ಮತ್ತು
ಮಹಾಲೆಕ್ಕಪರಿಶೋಧಕರ ವರದಿ ಹೇಳಿದೆ.

2015–16 ರಿಂದ 2019– 20ರ ಅವಧಿಯಲ್ಲಿ ಎವಿಜಿಸಿ ಪಾರ್ಕ್‌ಗಳು, ವೆಂಚರ್‌ ಕ್ಯಾಪಿಟಲ್‌ ಫಂಡ್‌ಗಳು, ಬೃಹತ್‌ ಯೋಜನೆಗಳು (ಮೆಗಾ ಪ್ರಾಜೆಕ್ಟ್‌ಗಳು), ರಾಜ್ಯಕ್ಕೆ ಹೂಡಿಕೆಗಳನ್ನು ಆಹ್ವಾನಿಸಲು ವಿಶ್ವದ 50→ಉನ್ನತ ಇಎಸ್‌ಟಿಎಂ→ಕಂಪನಿಗಳೊಂದಿಗೆ→ಸಹಭಾಗಿತ್ವ→ಸೇರಿ ಯಾವುದೇ→ಸಮಗ್ರ ವಾರ್ಷಿಕ→ಯೋಜನೆಗಳನ್ನೂ ಇಲಾಖೆ→ಮಾಡಿಲ್ಲ. ಸಮಗ್ರ ಕ್ರಿಯಾ ಯೋಜನೆ ಹೊಂದಿಲ್ಲದೇ ಇದ್ದುದರಿಂದ ನೀತಿಯ ಆಶಯ ಅನುಷ್ಠಾನವಾಗಿಲ್ಲ ಎಂದೂ ವರದಿ ಅಭಿಪ್ರಾಯಪಟ್ಟಿದೆ.

ADVERTISEMENT

2015–16 ರಿಂದ 2019–20ರ ಅವಧಿಯಲ್ಲಿ ₹920 ಕೋಟಿ ಅನುದಾನವನ್ನು ಅಭಿವೃದ್ಧಿಗೆ ನಿಗದಿ ಮಾಡಿದ್ದರೂ ಬಿಡುಗಡೆ ಮಾಡಿದ್ದು ₹457.30 ಕೋಟಿ. ಆದರೆ, ಈ ಅವಧಿಯಲ್ಲಿ ಖಾಸಗಿ ಐಟಿ ಕಂಪನಿಗಳು ಸ್ವಂತ ಶ್ರಮದಿಂದ ಹೆಚ್ಚಿನ ಬೆಳವಣಿಗೆ ಸಾಧಿಸಿವೆ. ಇದರ ಪರಿಣಾಮ 2014–15 ರಲ್ಲಿದ್ದ ಕಂಪನಿ ಸಂಖ್ಯೆ 2,560 ರಿಂದ 2019–20 ರ ವೇಳೆಗೆ 5,500ಕ್ಕೂ ಹೆಚ್ಚಾಗಿದೆ. ರಫ್ತು ಆದಾಯ ₹1.80 ಲಕ್ಷ ಕೋಟಿಯಿಂದ ₹5.8 ಲಕ್ಷ ಕೋಟಿಗೆ ಏರಿಕೆ ಆಗಿದ್ದು, ದೇಶದ ಐಟಿ ರಫ್ತು ಪಾಲು ಶೇ 38 ರಿಂದ ಶೇ 40 ಕ್ಕೆ ಏರಿಕೆ ಆಗಿದೆ ಎಂಬುದನ್ನು ವರದಿ ಬೊಟ್ಟು ಮಾಡಿದೆ.

ಅಚ್ಚರಿಯ ಸಂಗತಿ ಎಂದರೆ ಸರ್ಕಾರವು ಬೇಡಿಕೆ ಸಲ್ಲಿಸಿದ ₹920.06 ಕೋಟಿಯಲ್ಲಿ ಶೇ 50 ರಷ್ಟು (₹457.36 ಕೋಟಿ) ಬಿಡುಗಡೆ ಆಗಿದೆ. ಅದರೆ ಅದನ್ನು ಅನುಷ್ಠಾನ ಏಜೆನ್ಸಿಗಳು ಬಳಸಿಕೊಂಡಿಲ್ಲ. ಈ ಏಜೆನ್ಸಿಗಳು ಐದು ವರ್ಷಗಳಲ್ಲಿ ನಾಲ್ಕು ವರ್ಷಗಳ ಆರಂಭಿಕ ಶಿಲ್ಕಿಗೆ (ಬ್ಯಾಲೆನ್ಸ್‌ಗೆ) ಸಮನಾದ ಮೊತ್ತವನ್ನು ಖರ್ಚು ಮಾಡಲು ಸಾಧ್ಯವಾಗಲಿಲ್ಲ. ನವೋದ್ಯಮ ನೀತಿಯಡಿ 2018–19 ರಲ್ಲಿ ಖರ್ಚು ಮಾಡದ ಬಾಕಿ ₹52.48 ಕೋಟಿ ಇತ್ತು, 2018–19 ನೇ ಸಾಲಿಗೆ ₹44.04 ಕೋಟಿ ಹಣಕಾಸಿನ ಹಂಚಿಕೆಯನ್ನು ₹11.01 ಕೋಟಿಯಂತೆ ನಾಲ್ಕು ಸಮಾನ ಕಂತುಗಳಲ್ಲಿ ಬಿಡುಗಡೆ ಮಾಡಿದ್ದರೂ ಸಂಪೂರ್ಣ ಅನುದಾನ ಬಳಕೆ ಆಗಿಲ್ಲ ಎಂದು ಸಿಎಜಿ ಹೇಳಿದೆ.

ಒಂದು ನೀತಿಯಿಂದ ಇನ್ನೊಂದು ನೀತಿಗೆ ₹66.61 ಕೋಟಿ ಹಣವನ್ನು ಅನಗತ್ಯವಾಗಿ ಮರು ವಿನಿಯೋಗ ಮಾಡಿದ ಹಲವಾರು ನಿದರ್ಶನಗಳಿವೆ. ₹8.85 ಕೋಟಿ ಮೊತ್ತವನ್ನು ಗ್ರಾಮೀಣ ವೈ–ಫೈನಿಂದ ನವೋದ್ಯಮ ನೀತಿಗೆ ಮರು ವಿನಿಯೋಗಿಸಲಾಗಿದೆ. ನವೋದ್ಯಮ ನೀತಿಗೆ ಸಂಬಂಧಿಸಿದಂತೆ 2017–18 ರ ಖರ್ಚು ಮಾಡದ ಬಾಕಿ ₹52.48 ಕೋಟಿ, 2018–19ರಲ್ಲಿ ₹67.10 ಕೋಟಿ ಬಳಕೆಯಾಗದೇ ಉಳಿದಿದೆ. 2019–20 ರಲ್ಲಿ ₹35.60 ಕೋಟಿ ಬಳಕೆಯಾಗದೆ ಉಳಿದಿದೆ. ಹಣ ಬಿಡುಗಡೆ ಮಾಡಿದ್ದೇ ಅನಗತ್ಯ ಎಂದು ಸಿಎಜಿ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.