ADVERTISEMENT

ಉಪನ್ಯಾಸ ಮಾಲೆ ಮೂಲಕ ನಾಡು ನುಡಿ ಅಭಿಮಾನ ಬಿತ್ತಿದ ಗೌಡರು

ಲಿಂಗರಾಜು
Published 31 ಅಕ್ಟೋಬರ್ 2019, 12:51 IST
Last Updated 31 ಅಕ್ಟೋಬರ್ 2019, 12:51 IST
ಜಗದೀಶ್‌ ಗೌಡ 
ಜಗದೀಶ್‌ ಗೌಡ    

ಬೆಂಗಳೂರು: ಬೆಂಗಳೂರಿನ ವಿಲ್ಸನ್ ಗಾರ್ಡನ್‌ನ ಕನ್ನಡ ಯುವಜನ ಸಂಘ 56 ವರ್ಷಗಳಿಂದಲೂ ಪ್ರತಿ ಗುರುವಾರ ನಾಡು ನುಡಿಗೆ ಸಂಬಂಧಿಸಿದ ವಿಚಾರಗಳ ಮೇಲೆ ವಾರದ ‘ಉಪನ್ಯಾಸ ಮಾಲಿಕೆ’ ನಡೆಸಿಕೊಂಡು ಬರುತ್ತಿದೆ. ಒಮ್ಮೆಯೂ ಮಾಲಿಕೆ ನಿಂತಿಲ್ಲ. ಕನ್ನಡ ಸಾಹಿತ್ಯಲೋಕದ ದಿಗ್ಗಜರೆಲ್ಲರೂ ಇಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ, ಸಮಕಾಲೀನ ವಿಷಯಗಳ ಕುರಿತಾಗಿ ಉಪನ್ಯಾಸಗಳನ್ನು ನೀಡಿದ್ದಾರೆ. ಈ ನಿಲ್ಲದ ಉಪನ್ಯಾಸ ಮಾಲಿಕೆಯ ಹಿಂದಿನ ಕೈ ಸಂಘದ ಅಧ್ಯಕ್ಷರಾದ ಜಗದೀಶ್ ಗೌಡ.

56 ವರ್ಷಗಳ ಹಿಂದೆ ಜಗದೀಶ್‌ ಗೌಡರು ಕೆಲ ಯುವಕರೊಂದಿಗೆ ಸೇರಿ ‘ಕನ್ನಡ ಯುವಜನ ಸಂಘ’ ಕಟ್ಟಿದರು. ಸಹಜವಾಗಿಯೇ ಜಗದೀಶ್ ಗೌಡ ಅಧ್ಯಕ್ಷರಾದರು. ಅಂದಿನಿಂದ ಇಂದಿನ ವರೆಗೆ ಸಂಘವು ನಾಡು, ನುಡಿ ಕೆಲಸವನ್ನು ಕರ್ತವ್ಯವೆಂದು ಭಾವಿಸಿ ಮಾಡುತ್ತಾ ಬರುತ್ತಿದೆ. ಮೊದಮೊದಲು ಸರ್ಕಾರಿ ಶಾಲೆಯಲ್ಲಿ ನಡೆಯುತ್ತಿದ್ದ ಉಪನ್ಯಾಸ ಮಾಲಿಕೆ, ನಂತರ ಸಂಘದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡು ಇಂದಿಗೂ ಮುಂದುವರಿಯುತ್ತಿದೆ. ಉಪನ್ಯಾಸಕ್ಕೆ ಪ್ರತಿವಾರವೂ ನೂರಾರು ಮಂದಿ ಆಗಮಿಸುತ್ತಾರೆ. ಈ ಚಟುವಟಿಕೆಗಳಿಗೆ ಈವರೆಗೂ ಸರ್ಕಾರದ ಯಾವುದೇ ನೆರವು ಪಡೆದಿಲ್ಲ ಜಗದೀಶ್ ಗೌಡರು.

ನಾಡು ನುಡಿಯ ಅಭಿಮಾನ ಬಿತ್ತುವ ಕೆಲಸ

ADVERTISEMENT

ಜನಸಂದಣಿ ಹೆಚ್ಚಿರುವ ಅಂಗಡಿ, ಹೋಟೆಲ್‌ಗಳ ಬಳಿ ವಾರದ ಉಪನ್ಯಾಸ ಮಾಲೆಯ ಕರಪತ್ರವನ್ನು ಅಂಟಿಸಲಾಗುತ್ತದೆ. ಅದನ್ನು ನೋಡಿದ ಜನರೂ ಕುತೂಹಲದಿಂದಲೇ ಉಪನ್ಯಾಸಕ್ಕೆ ಆಗಮಿಸುತ್ತಾರೆ. ಈ ಉಪನ್ಯಾಸ ಮಾಲೆ ಕುರಿತು ಜಗದೀಶ ಗೌಡ ಹೀಗೆ ಹೇಳುತ್ತಾರೆ. ‘ಜನತೆಗೆ ನಾವು ಯಾವ ಸವಲತ್ತು ಕೊಟ್ಟಿದ್ದೇವೆ ಎನ್ನುವುದಕ್ಕಿಂತ, ಅವರ ಮೆದುಳಿನಲ್ಲಿ ಯಾವ ವಿಚಾರ ಬಿತ್ತುತ್ತಿದ್ದೇವೆ ಎಂಬುದು ಬಹುಮುಖ್ಯ. ಜನರಲ್ಲಿ ನಾಡು, ನುಡಿ, ಸಂಸ್ಕೃತಿ, ವೈಚಾರಿಕಾ ದೃಷ್ಟಿಕೋನ ಬೆಳೆಸುವುದು ಮುಖ್ಯವೆಂದು ಭಾವಿಸಿಯೇ ಈ ವಾರದ ಉಪನ್ಯಾಸಕ್ಕೆ ಹೆಚ್ಚು ಒತ್ತು ನೀಡಿದ್ದೇವೆ,’ ಎನ್ನುತ್ತಾರೆ ಜಗದೀಶ್‌ ಗೌಡರು.

ವಿಲ್ಸನ್‌ ಗಾರ್ಡನ್‌ ಬಳಿ ಇರುವ ಸಂಘಕ್ಕೆ ಸ್ವಂತ ಕಟ್ಟಡವಿದೆ. ಈ ಕಟ್ಟಡದಲ್ಲಿ ಸಭಾಂಗಣ, ಗ್ರಂಥಾಲಯ, ರೀಡಿಂಗ್ ರೂಂ ಇದೆ. ಸಭಾಂಗಣದ ನಾಲ್ಕೂ ಗೋಡೆಗಳು ಕನ್ನಡ ಸಾಹಿತ್ಯ, ಕಲೆ, ರಂಗಭೂಮಿ, ಸಿನಿಮಾ ಇತ್ಯಾದಿ ಕ್ಷೇತ್ರಗಳ ಸಾಧಕರ ಫೋಟೋಗಳಿಂದ ತುಂಬಿವೆ. 150 ಜನ ಕೂರಬಹುದಾದ ಸಭಾಂಗಣಕ್ಕೆ ಕುವೆಂಪು ಅವರ ಹೆಸರಿಡಲಾಗಿದೆ. ಇಲ್ಲಿಯೇ ಈ ಉಪನ್ಯಾಸ ಮಾಲಿಕೆ ನಡೆದುಕೊಂಡು ಬರುತ್ತಿದೆ. ಕನ್ನಡದ ಎಲ್ಲ ದಿನಪತ್ರಿಕೆಗಳು ರೀಡಿಂಗ್ ರೂಂನಲ್ಲಿ ಓದಲು ಲಭ್ಯ. ಯಾರಾದರೂ ಇಲ್ಲಿ ಬಂದು ಓದಬಹುದು.

ಓದು ಸಂಸ್ಕೃತಿ ಕ್ಷೀಣಿಸುತ್ತಿರುವುದಕ್ಕೆ ಬೇಸರ

ಈಗೀಗ ಓದುವ ಸಂಸ್ಕೃತಿ ಕ್ಷೀಣಿಸುತ್ತಿರುವ ಬಗ್ಗೆ ಜಗದೀಶ್‌ ಗೌಡರು ಬೇಸರ ವ್ಯಕ್ತಪಡಿಸುತ್ತಾರೆ. ಗ್ರಂಥಾಲಯ, ರೀಡಿಂಗ್ ರೂಂ ಸೌಲಭ್ಯವನ್ನು ಉಪಯೋಗಿಸಿಕೊಳ್ಳಲು ಇಂದಿನ ಪೀಳಿಗೆಗೆ ನಿರಾಸಕ್ತಿ ಇದೆ. ಹಿಂದೆಲ್ಲ ಪತ್ರಿಕೆ ಹಾಕುವ ಹುಡುಗ ಬರುವುದಕ್ಕೆ ಮೊದಲೇ 50 ರಿಂದ 60 ಜನ ಸಂಘದ ಬಳಿ ಕಾಯುತ್ತಾ ಕುಳಿತಿರುತ್ತಿದ್ದರು. ಈಗ ಹಾಗಿಲ್ಲ,’ ಎಂದು ಬೇಸರಿಸಿಕೊಳ್ಳುತ್ತಾರೆ ಗೌಡರು.

ಪ್ರಶಸ್ತಿಗಳನ್ನು ಒಲ್ಲದ ಗೌಡರು

ಜಗದೀಶ್ ಗೌಡರು ಹಿಂದೆ ಬೆಂಗಳೂರು ನಗರ ಪಾಲಿಕೆ ಸದಸ್ಯರಾಗಿದ್ದರು. ಆದಾಗ್ಯೂ ಇವರನ್ನು ಗುರುತಿಸುವುದೇ ‘ಕನ್ನಡ ಸಂಘದ ಜಗದೀಶ್ ಗೌಡ’ ಎಂದು. ನಗರದಲ್ಲಿ ನಡೆಯುವ ಕನ್ನಡಪರ ಹೋರಾಟಗಳು ಹಾಗು ಜನಪರ ಹೋರಾಟಗಳಲ್ಲಿ ಇವರು ಭಾಗಿಯಾಗುತ್ತಾರೆ. ಬಿರುದು ಬಾವಲಿಗಳು ಅರಸಿ ಬಂದಿದ್ದರೂ ಅವೆಲ್ಲವನ್ನು ನಯವಾಗಿಯೇ ತಿಸ್ಕರಿಸಿದ್ದಾರೆ. 75ರ ಹರೆಯದಲ್ಲೂ ಅದೇ ಉತ್ಸಾಹ. ಕನ್ನಡ ಕಟ್ಟುವ ಕಾಯಕವನ್ನು ಕರ್ತವ್ಯವೆಂದು ಅವರು ಭಾವಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.