ADVERTISEMENT

ಗ್ರಾಮಸ್ಥರಿಲ್ಲದ ‘ಜಲ ಜೀವನ್‌’ ಅಪೂರ್ಣ

ರಾಜ್ಯಕ್ಕೆ ಕೇಂದ್ರ ಸರ್ಕಾರದ ಮೂವರು ಕಾರ್ಯದರ್ಶಿಗಳ ಜಂಟಿ ಪತ್ರ

ಚಂದ್ರಹಾಸ ಹಿರೇಮಳಲಿ
Published 4 ಆಗಸ್ಟ್ 2023, 0:02 IST
Last Updated 4 ಆಗಸ್ಟ್ 2023, 0:02 IST
ಕಾಡಶೆಟ್ಟಿಹಳ್ಳಿ ಸತೀಶ್‌
ಕಾಡಶೆಟ್ಟಿಹಳ್ಳಿ ಸತೀಶ್‌   

ಚಂದ್ರಹಾಸ ಹಿರೇಮಳಲಿ

ಬೆಂಗಳೂರು: ಗ್ರಾಮೀಣ ಪ್ರದೇಶಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆಯ ಅನುಷ್ಠಾನದಲ್ಲಿ ಗ್ರಾಮ ಪಂಚಾಯಿತಿ, ಗ್ರಾಮ ಸಭೆಗಳ ಒಳಗೊಳ್ಳುವಿಕೆ ಕಡ್ಡಾಯ ಎನ್ನುವುದನ್ನು ಕೇಂದ್ರ ಸರ್ಕಾರ ಮತ್ತೊಮ್ಮೆ ನೆನಪಿಸಿದೆ.

ಈ ಕುರಿತು ಜಂಟಿ ಪತ್ರ ಬರೆದಿರುವ ಕೇಂದ್ರ ಪಂಚಾಯಿತಿ ರಾಜ್‌, ಗ್ರಾಮೀಣಾಭಿವೃದ್ಧಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮೂವರೂ ಕಾರ್ಯದರ್ಶಿಗಳು, 2019ರಲ್ಲಿ ಆರಂಭವಾಗಿದ್ದ ಯೋಜನೆಯಡಿ ಮನೆ ಮನೆಗೆ ಕಲ್ಪಿಸುವ ನಲ್ಲಿ ಸಂಪರ್ಕ  ಶೇ 70ರಷ್ಟು ಗುರಿ ಸಾಧಿಸಲಾಗಿದ್ದರೂ ಜೆಜೆಎಂ ನಿಯಮದಂತೆ ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಸಭೆಗಳ ಮೂಲಕ ಯೋಜನೆಯನ್ನು ಅನುಷ್ಠಾನ ಮಾಡದೇ, ಕೇಂದ್ರೀಕೃತ ವ್ಯವಸ್ಥೆಯ ಮೂಲಕ ಕಾರ್ಯಗತಗೊಳಿಸುತ್ತಾ ಬಂದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಗ್ರಾಮ ಪಂಚಾಯಿತಿಗಳೇ ತಮ್ಮ ಗ್ರಾಮಕ್ಕೆ ಬೇಕಾದ ನೀರಿನ ಮೂಲವನ್ನು ಗುರುತಿಸಿ, ಕ್ರಿಯಾಯೋಜನೆ ರೂಪಿಸಬೇಕು. ನಂತರ ಅದು ಗ್ರಾಮದ ಜನರನ್ನು ಒಳಗೊಂಡ ಗ್ರಾಮ ಸಭೆಯಲ್ಲಿ ಅನುಮೋದನೆಗೊಳ್ಳಬೇಕು. ಜಿಲ್ಲಾ ಪಂಚಾಯಿತಿ, ಗ್ರಾಮೀಣಾಭಿವೃದ್ಧಿ ಇಲಾಖೆ, ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರಿಂಗ್‌ ವಿಭಾಗಗಳು ಯೋಜನೆಯ ಅನುಷ್ಠಾನಕ್ಕೆ ಬಾಹ್ಯ ಸಹಕಾರ ನೀಡಬೇಕು. ಮೇಲುಸ್ತುವಾರಿ ನೋಡಿಕೊಳ್ಳಬೇಕು. ಅನುಷ್ಠಾನಕ್ಕೆ ತಾಂತ್ರಿಕ ಅನುಮೋದನೆ ನೀಡುವುದಷ್ಟೇ ಗ್ರಾಮೀಣಾಭಿವೃದ್ಧಿ ಇಲಾಖೆ ಕೆಲಸ’ ಎಂದು ಕಾರ್ಯದರ್ಶಿಗಳಾದ ವಿನಿ ಮಹಾಜನ್‌ (ಕುಡಿಯುವ ನೀರು ಮತ್ತು ನೈರ್ಮಲ್ಯ), ಶೈಲೇಶ್‌ ಕುಮಾರ್ ಸಿಂಗ್ (ಗ್ರಾಮೀಣಾಭಿವೃದ್ಧಿ) ಹಾಗೂ ಸುನೀಲ್‌ ಕುಮಾರ್ (ಪಂಚಾಯಿತಿ ರಾಜ್‌) ತಾಕೀತು ಮಾಡಿದ್ದಾರೆ. 

ನಿಯಮದಂತೆ ನೀರು ಸರಬರಾಜು, ಅನುಷ್ಠಾನ, ನಿರ್ವಹಣೆ, ನೀರಿನ ಸೇವಾ ಶುಲ್ಕ ಸಂಗ್ರಹ ಸಂಪೂರ್ಣ ಗ್ರಾಮ ಸಮುದಾಯಗಳಿಗೆ ಬಿಡಲಾಗಿದೆ. ಗ್ರಾಮಸಭೆಗಳಲ್ಲಿ ನಿರ್ಧಾರ ತೆಗೆದುಕೊಂಡು ಅದಕ್ಕಾಗಿ ನೀರು ಬಳಕೆದಾರರ ಸಮಿತಿಗಳನ್ನು ರಚಿಸಬೇಕು. ಈ ಗುಂಪುಗಳಿಗೆ ಶಕ್ತಿತುಂಬಲು ಪಂಚಾಯಿತಿ  ರಾಜ್‌ ಇಲಾಖೆ ಅಧಿಸೂಚನೆಗಳನ್ನು ಹೊರಡಿಸಬೇಕು. ಗ್ರಾಮದ ಒಳಗಿನ ಕಾಮಗಾರಿಗಳ ಅನುಷ್ಠಾನಕ್ಕೆ ಅಗತ್ಯವಾದ ಅನುದಾನವನ್ನು ಗ್ರಾಮ ಸಮಿತಿಗಳ ಒಪ್ಪಿಗೆ ಪಡೆದು ಬಿಡುಗಡೆ ಮಾಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ತೆರಿಗೆ ಸಂಗ್ರಹ ಕಾರ್ಯ ಸುಲಭವಾಗಲಿದೆ ಎಂದು ವಿವರಿಸಿದ್ದಾರೆ.   

ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ತಾಂತ್ರಿಕತೆ, ದೃಢವಾದ ನಿರ್ವಹಣಾ ವ್ಯವಸ್ಥೆ ರೂಪಿಸಲು ಸ್ಥಳೀಯ ಉದ್ಯಮಿಗಳು, ಸ್ವಸಹಾಯ ಗುಂಪುಗಳು ಸೇರಿದಂತೆ ಸಂಘ-ಸಂಸ್ಥೆಗಳ ನೆರವು ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ.

ಜಲ್‌ ಜೀವನ್‌ ಮಿಷನ್‌ ಯೋಜನೆಯ ಕುಡಿಯುವ ನೀರು ಸರಬರಾಜು ನಲ್ಲಿ(ಸಂಗ್ರಹ ಚಿತ್ರ)

₹ 59 ಸಾವಿರ ಕೋಟಿ  ಯೋಜನೆಗೆ ನಿಗದಿ ಮಾಡಿದ ವೆಚ್ಚ ₹ 30,790 ಕೋಟಿ ಗ್ರಾಮಗಳ ಹೊರಗಿನ ಕಾಮಗಾರಿಗೆ ಮಾಡಿದ ವೆಚ್ಚ 1.01 ಕೋಟಿ ರಾಜ್ಯದ ಗ್ರಾಮೀಣ ಭಾಗದ ಮನೆಗಳು  70 ಲಕ್ಷ ನಲ್ಲಿ ಸಂಪರ್ಕ ಪಡೆದ ಮನೆಗಳು 31 ಲಕ್ಷ   ಸಂಪರ್ಕ ಪಡೆಯದ ಮನೆಗಳು

ಪಂಚಾಯಿತಿಗಳನ್ನು ಹೊರಗಿಟ್ಟು ಯೋಜನೆ ಕಾರ್ಯಗತಗೊಳಿಸಲಾಗಿದೆ. ಜೆಜೆಎಂನ ನಿರ್ವಹಣೆ ಹಾಗೂ ತೆರಿಗೆ ಸಂಗ್ರಹಣೆಯ ಹೊಣೆಗಾರಿಕೆ ನಿರಾಕರಿಸಲು ನಿರ್ಧರಿಸಿದ್ದೇವೆ.

-ಕಾಡಶೆಟ್ಟಿಹಳ್ಳಿ ಸತೀಶ್‌ ಅಧ್ಯಕ್ಷ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ.

ನೀರಿನ ಕಂದಾಯ ನೀಡಲು ನಿರಾಕರಣೆ

ರಾಜ್ಯದಲ್ಲಿ 1.16 ಕೋಟಿ ಮನೆಗಳಿದ್ದು ಈಗಾಗಲೇ 70 ಲಕ್ಷ ಮನೆಗಳಿಗೆ ನೀರಿನ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಗ್ರಾಮದ ಹೊರಗೆ ಕೈಗೊಳ್ಳುವ ಕಾಮಗಾರಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇ 50ರಷ್ಟು ಅನುದಾನ ಒದಗಿಸುತ್ತಿವೆ. ಗ್ರಾಮದ ಒಳಗೆ ನೀರು ಸರಬರಾಜಿಗೆ ಅಗತ್ಯವಾದ ಮೂಲಸೌಕರ್ಯ ಕೈಗೊಳ್ಳಲು ತಗಲುವ ವೆಚ್ಚದ ಶೇ 10 ರಷ್ಟು ಗ್ರಾಮಸ್ಥರು ನೀಡಬೇಕಿದೆ. ನಿಯಮದಂತೆ ಸ್ಥಳೀಯರನ್ನು ಒಳಗೊಳ್ಳದೆ ಯೋಜನೆ ಅನುಷ್ಠಾನ ಮಾಡಿದ್ದರಿಂದ ಕಾಮಗಾರಿ ಪೂರ್ಣಗೊಂಡು ನಲ್ಲಿ ಸಂಪರ್ಕ ಕಲ್ಪಿಸಿರುವ ಬಹುತೇಕ ಗ್ರಾಮಗಳಲ್ಲಿ ವಂತಿಗೆ ಹಾಗೂ ನೀರಿನ ಕಂದಾಯ ನೀಡಲು ಗ್ರಾಮಸ್ಥರು ನಿರಾಕರಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.