ADVERTISEMENT

ಜಮ್ಮುವಿನಲ್ಲಿ ಹಿಂಸಾಚಾರ: ಪತ್ನಿ ಜೊತೆ ನೆಲೆಸಿದ್ದ ಶಂಕಿತ ತಾಲಿಬ್

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 11:51 IST
Last Updated 7 ಜೂನ್ 2022, 11:51 IST
ತಾಲಿಬ್
ತಾಲಿಬ್   

ಬೆಂಗಳೂರು: ಜಮ್ಮುವಿನಲ್ಲಿ ಪೊಲೀಸರು ಹಾಗೂ ಸೈನಿಕರ‌ ಮೇಲೆ ಕಲ್ಲು ತೂರಾಟ ನಡೆಸಿ‌ ಹಿಂಸಾಚಾರಕ್ಕೆ ಕಾರಣನಾಗಿದ್ದ ಎನ್ನಲಾದ ಶಂಕಿತ ತಾಲಿಬ್ ಹುಸೇನ್,ಪತ್ನಿ ಜೊತೆ ನಗರದಲ್ಲಿ ವಾಸವಿದ್ದನೆಂಬುದು ತನಿಖೆಯಿಂದ ಗೊತ್ತಾಗಿದೆ.

'ಜಮ್ಮುವಿನ ಕಿಸ್ತವಾರ್ ಠಾಣೆ ವ್ಯಾಪ್ತಿಯಲ್ಲಿ ಎರಡು ವರ್ಷಗಳ ಹಿಂದೆ ಹಿಂಸಾಚಾರ ನಡೆದಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಜಮ್ಮುವಿನಿಂದ ಪರಾರಿಯಾಗಿದ್ದ ತಾಲಿಬ್, ಬೆಂಗಳೂರಿಗೆ ಬಂದಿದ್ದ' ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

'ಹಿಜ್ಬುಲ್ ಉಗ್ರ ಸಂಘಟನೆ ಜೊತೆ ಗುರುತಿಸಿಕೊಂಡಿದ್ದ ಈತ, ಹಿಂಸಾಚಾರ ಸಂಚಿನಲ್ಲಿ ಭಾಗಿಯಾಗಿದ್ದ. ಈತನ ಸುಳಿವು ಸಂಗ್ರಹಿಸಿದ್ದ ಜಮ್ಮು ಪೊಲೀಸರು, ನಗರಕ್ಕೆ ಬಂದು ಬಂಧಿಸಿ ಕರೆದೊಯ್ದಿದ್ದಾರೆ' ಎಂದೂ ತಿಳಿಸಿದರು.

ADVERTISEMENT

ರೈಲ್ವೆ ನಿಲ್ದಾಣದಲ್ಲಿ ಕೂಲಿ ಕೆಲಸ: 'ರೈಲಿನಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣಕ್ಕೆ ಬಂದಿದ್ದ ತಾಲಿಬ್, ನಿಲ್ದಾಣದಲ್ಲೇ ಕೆಲ ದಿನ ಕೂಲಿ ಕೆಲಸ ಮಾಡಿದ್ದ. ನಿಲ್ದಾಣದಲ್ಲೇ ರಾತ್ರಿ ಮಲಗುತ್ತಿದ್ದ' ಎಂದು ಅಧಿಕಾರಿ ಹೇಳಿದರು.

'ನಿಲ್ದಾಣಕ್ಕೆ ಹೊಂದಿಕೊಂಡಿರುವ ಓಕಳಿಪುರಕ್ಕೆ ಊಟ ಹಾಗೂ ತಿಂಡಿಗೆಂದು ಹೋಗಿ ಬರುತ್ತಿದ್ದ ತಾಲಿಬ್, ಸ್ಥಳೀಯರನ್ನು ಪರಿಚಯ ಮಾಡಿಕೊಂಡಿದ್ದ. ಅನಾಥನೆಂದು ಹೇಳಿದ್ದ ಈತ, ಓಕಳಿಪುರದ ಮಸೀದಿಯೊಂದರಲ್ಲಿ ಅನ್ವರ್ ಪಾಷಾ ಎಂಬಾತನ ಮೂಲಕ ಆಶ್ರಯ ಪಡೆದಿದ್ದ. ಆಟೊ ಚಾಲಕನಾಗಿ ಬದಲಾಗಿದ್ದ ತಾಲಿಬ್, ಓಕಳಿಪುರದಲ್ಲೇ ಬಾಡಿಗೆ ಮನೆ ಮಾಡಿದ್ದ.‌ ಜಮ್ಮುವಿನಲ್ಲಿದ್ದ ಪತ್ನಿ ಹಾಗೂ ಮೂವರು ಮಕ್ಕಳನ್ನು ಬೆಂಗಳೂರಿಗೆ ಕರೆತಂದು ವಾಸವಿದ್ದ. ಎರಡು ವರ್ಷಗಳಿಂದ ಸ್ಥಳೀಯರ ಜೊತೆ ಒಡನಾಟ ಹೊಂದಿ, ಎಲ್ಲರ ನಂಬಿಕೆ ಗಳಿಸಿದ್ದ.' ಎಂದು ಅವರು ಹೇಳಿದ್ದಾರೆ.

'ತಾಲಿಬ್ ಬಗ್ಗೆ ಸ್ಥಳಿಯರಿಂದ ಮಾಹಿತಿ ಪಡೆಯಲಾಗುತ್ತಿದೆ. ಆತ ನಗರದಲ್ಲಿ ಎಲ್ಲೆಲ್ಲಿ ಓಡಾಡಿದ್ದ ಹಾಗೂ ಆತನ ದಿನಚರಿ ಬಗ್ಗೆಯೂ ವಿಚಾರಿಸಲಾಗುತ್ತಿದೆ' ಎಂದೂ ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.