ಹಾಸನ: ‘ದೇವೇಗೌಡರು ಯಾರನ್ನೂ ಬೆಳೆಸಲು ಇಷ್ಟ ಪಡುವುದಿಲ್ಲ. ಒಕ್ಕಲಿಗರನ್ನೇ ಬೆಳೆಸುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಹಾಗೂ ಸ್ವಾಭಿಮಾನಿ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ನಡೆಯುತ್ತಿರುವ ಜನಕಲ್ಯಾಣ ಸಮಾವೇಶದಲ್ಲಿ ಗುರುವಾರ ಅವರು ಮಾತನಾಡಿದರು.
‘ದೇವೇಗೌಡರ ಮನೆ ಮಗನಂತಿದ್ದ ಬಿ.ಎಲ್. ಶಂಕರ್, ವೈ.ಕೆ. ರಾಮಯ್ಯ ಅವರನ್ನೂ ಬೆಳೆಸಲಿಲ್ಲ. ಸಿದ್ದರಾಮಯ್ಯ ಅವರನ್ನು ಹಣಕಾಸು ಸಚಿವನನ್ನಾಗಿ ಮಾಡಿದೆ. ಅದಕ್ಕಾಗಿ ಅವರ ಬೆಳೆದರು ಎಂದು ದೇವೇಗೌಡರು ಹೇಳಿದ್ದಾರೆ. ನಾನು, ಜಾಲಪ್ಪ ಇಲ್ಲದೇ ಹೋಗಿದ್ದರೆ, 1994 ರಲ್ಲಿ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿ ಆಗಲು ಸಾಧ್ಯವೇ ಇರಲಿಲ್ಲ’ ಎಂದು ತಿರುಗೇಟು ನೀಡಿದರು.
‘ನಾವೆಲ್ಲ ಜೆಡಿಎಸ್ ಪಕ್ಷವನ್ನು ಕಟ್ಟಿದೆವು. ಆದರೆ, ಅಹಿಂದ ಸಮಾವೇಶ ಮಾಡಿದೆ ಎನ್ನುವ ಒಂದೇ ಕಾರಣಕ್ಕೆ ನನ್ನನ್ನು ಪಕ್ಷದಿಂದ ಉಚ್ಚಾಟಿಸಿದರು. ದೇವೇಗೌಡರು ನನ್ನನ್ನು ಬೆಳೆಸಿಲ್ಲ. ಬದಲಾಗಿ ಅವರು ಮುಖ್ಯಮಂತ್ರಿ ಆಗಲು ನಾವು ಅವರ ಬೆಂಬಲಕ್ಕೆ ನಿಂತಿದ್ದೆವು’ ಎಂದು ಹೇಳಿದರು.
‘ದೇವೇಗೌಡರು ವಯಸ್ಸಿಗೆ ತಕ್ಕಂತೆ ಮಾತನಾಡಬೇಕು. 2019ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದರೆ, ದೇಶ ಬಿಡುವುದಾಗಿ ಎಚ್.ಡಿ. ದೇವೇಗೌಡರು ಹೇಳಿದ್ದರು. ಈಗ ಚನ್ನಪಟ್ಟಣದಲ್ಲಿ ಸಿದ್ದರಾಮಯ್ಯ ಗರ್ವಭಂಗ ಮಾಡುತ್ತೇನೆ. ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಿರಿ ಎಂದು ಹೇಳಿದರು. ನಾನು ದೇವೇಗೌಡರಿಂದ ಈ ಮಾತುಗಳನ್ನು ನಿರೀಕ್ಷೆ ಮಾಡಿರಲಿಲ್ಲ. ಒಂದು ವಾರ ಚನ್ನಪಟ್ಟಣದಲ್ಲಿ ದೇವೇಗೌಡರು, ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿದ್ದೇ ಹಾಕಿದ್ದು. ಆದರೆ, ಹಾಸನದಲ್ಲಿ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ. ಇಲ್ಲಿಗೆ ಬಂದು ಕಣ್ಣೀರು ಹಾಕಿದ್ದಾರಾ’ ಎಂದು ಪ್ರಶ್ನಿಸಿದರು.
‘ತೆರಿಗೆಯಲ್ಲಿ ಸರಿಯಾದ ಪಾಲು ಕೊಡುತ್ತಿಲ್ಲ. ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನದಲ್ಲಿ ಕಡಿತ ಮಾಡಿದ್ದಾರೆ. ₹4.5 ಲಕ್ಷ ಕೋಟಿ ತೆರಿಗೆಯನ್ನು ಕರ್ನಾಟಕದಿಂದ ಕೊಡಲಾಗುತ್ತಿದೆ. ನಮಗೆ ಬರುತ್ತಿರುವುದು ಕೇವಲ 13 ಪೈಸೆ. ರಾಜ್ಯಕ್ಕೆ ಇಷ್ಟೊಂದು ಅನ್ಯಾಯ ಆಗುತ್ತಿದೆ. ಈ ಬಗ್ಗೆ ಕೇಳಿದ್ದೀರಾ ದೇವೇಗೌಡರೇ? ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕೇಳಿದ್ದಾರಾ’ ಎಂದು ಪ್ರಶ್ನಿಸಿದರು.
ದೇವೇಗೌಡರಿಗೆ ದೇವರು ಒಳ್ಳೆಯ ಆರೋಗ್ಯ ಕೊಡಲಿ. ಅವರು ರಾಜಕಾರಣ ಮಾಡಲಿ. ಆದರೆ, ದ್ವೇಷ, ಸೇಡಿನ ರಾಜಕಾರಣ ಮಾಡಬೇಡಿ ಎಂದು ಸಲಹೆ ನೀಡಿದ ಸಿದ್ದರಾಮಯ್ಯ, ಕೋಮುವಾದಿಗಳ ಜೊತೆಗೆ ಸೇರಿಕೊಂಡು ಜಾತ್ಯತೀತ ಜನತಾ ದಳ ಎಂದು ಹೆಸರು ಇಟ್ಟುಕೊಳ್ಳಲು ದೇವೇಗೌಡರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದರು.
ಮೈಸೂರಿನಲ್ಲಿ ಅನೇಕ ಸಮಾವೇಶಗಳು ನಡೆದಿವೆ. ಹಾಸನದಲ್ಲಿ ಕಾಂಗ್ರೆಸ್‌ನಿಂದ ದೊಡ್ಡ ಸಮಾವೇಶ ಆಗಿರಲಿಲ್ಲ. ಈ ಬಾರಿ ಹಾಸನದಲ್ಲಿ ಮಾಡೋಣ ಎಂದು ಶಿವಲಿಂಗೇಗೌಡರು, ಶ್ರೇಯಸ್ ಪಟೇಲ್ ಅವರನ್ನು ಕೇಳಿದೆ. ಸಚಿವರಾದ ಡಾ.ಮಹದೇವಪ್ಪ, ವೆಂಕಟೇಶ್ ಕೂಡ ಹಾಸನದಲ್ಲಿಯೇ ಸಮಾವೇಶ ಮಾಡೋಣ ಎಂದು ಹೇಳಿದರು. ಅದಕ್ಕಾಗಿಯೇ ಇಲ್ಲಿ ಸಮಾವೇಶ ಮಾಡಲಾಗುತ್ತಿದೆ. 40 ವರ್ಷಗಳ ರಾಜಕೀಯ ಜೀವನದಲ್ಲಿ ಹಾಸನ ಜಿಲ್ಲೆಯಲ್ಲಿ ಇಷ್ಟೊಂದು ದೊಡ್ಡ ಸಮಾವೇಶ ಆಗಿರಲಿಲ್ಲ. ಅದಕ್ಕಾಗಿ ಇಲ್ಲಿಗೆ ಬಂದಿರುವ ಕಾರ್ಯಕರ್ತರು, ಜನರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸ್ವಾಭಿಮಾನಿಗಳ ಒಕ್ಕೂಟದಿಂದ ಕೃತಜ್ಞತೆ ಸಲ್ಲಿಸಲು ಸಮಾವೇಶ ಮಾಡುವುದಾಗಿ ಒಕ್ಕೂಟದ ಪದಾಧಿಕಾರಿಗಳು ಕೇಳಿಕೊಂಡಿದ್ದರು. ಆದರೆ, ನಾನು ರಾಜ್ಯದ ಮುಖ್ಯಮಂತ್ರಿ. ಹಾಗಾಗಿ ಕಾಂಗ್ರೆಸ್ ಪಕ್ಷದ ಸಹಯೋಗದಲ್ಲಿಯೇ ಸಮಾವೇಶ ಮಾಡುವಂತೆ ತಿಳಿಸಿದ್ದೆ. ಅದರಂತೆ ಎಲ್ಲರೂ ಒಟ್ಟಾಗಿ ಸಮಾವೇಶ ಮಾಡುತ್ತಿದ್ದೇವೆ ಎಂದರು.
ವರನಟ ರಾಜ್‌ಕುಮಾರ್ ಅವರು ಅಭಿಮಾನಿ ದೇವರು ಎಂದು ಹೇಳುತ್ತಿದ್ದರು. ನಮಗೆ ಮತದಾರರೇ ದೇವರು. ಮೂರು ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಚನ್ನಪಟ್ಟಣದಲ್ಲಿ ಈ ಜಿಲ್ಲೆಗೆ ಸೇರಿದ ಮಹಾನಾಯಕರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದರು. ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಸ್ಪರ್ಧೆ ಮಾಡಿದ್ದರು. ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರಲಿಲ್ಲ. ಆದರೆ, ಕಾರ್ಯಕರ್ತರು, ಮತದಾರರ ಆಶೀರ್ವಾದದಿಂದ ಈ ಎರಡೂ ಕ್ಷೇತ್ರಗಳಲ್ಲಿ ಈಗ ಕಾಂಗ್ರೆಸ್ ಜಯಗಳಿಸಿದೆ ಎಂದರು.
ಕಾಂಗ್ರೆಸ್ ಪಕ್ಷದಿಂದ ಮಾತ್ರ ಸುಭದ್ರ ಸರ್ಕಾರ ಕೊಡಲು ಸಾಧ್ಯ. ಜೆಡಿಎಸ್, ಬಿಜೆಪಿ ಪಕ್ಷಗಳು ಸ್ವಂತ ಶಕ್ತಿಯ ಮೇಲೆ ಎಂದಿಗೂ ಅಧಿಕಾರಕ್ಕೆ ಬಂದಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದು ಬಿಜೆಪಿ ಹಾಗೂ ನಮ್ಮ ಬೆಂಬಲದಿಂದ. ಅದೇ ರೀತಿ ಬಿಜೆಪಿಯವರು ಎರಡು ಬಾರಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದರು. ಅಪರೇಷನ್ ಕಮಲದಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅಧಿಕಾರಕ್ಕೆ ಬಂದರು. 2006 ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆದರು. ನಂತರ ಯಡಿಯೂರಪ್ಪ ಅವರಿಗೆ ಮೋಸ ಮಾಡಿದರು. 2018 ರಲ್ಲಿ 38 ಸ್ಥಾನ ಗೆದ್ದಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿ, ಮುಖ್ಯಮಂತ್ರಿ ಮಾಡಿದೆವು. ಆದರೆ, ಸರ್ಕಾರ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ರಾಜ್ಯದ ರಾಜಕೀಯ ಇತಿಹಾಸವನ್ನು ಮೆಲುಕು ಹಾಕಿದರು.
2013 ರಿಂದ 2018 ರವರೆಗೆ ಕಾಂಗ್ರೆಸ್ ಅಧಿಕಾರದಲ್ಲಿದ್ದು, 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದೆವು. ಬಿಜೆಪಿಯವರು 600 ಭರವಸೆ ನೀಡಿದ್ದರು. ಆದರೆ, ಶೇ 10 ರಷ್ಟನ್ನೂ ಈಡೇರಿಸಲಿಲ್ಲ. ಕೊಟ್ಟ ಮಾತಿನಂತೆ ನಡೆದವರು ನಾವು ಎಂದರು.
ಬಿಪಿಎಲ್ ಕಾರ್ಡ್ ರದ್ದತಿ ಮಾಡುತ್ತಿರುವುದಾಗಿ ಬಿಜೆಪಿ–ಜೆಡಿಎಸ್‌ನವರು ಆರೋಪಿಸುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ. ಉಚಿತ ಅಕ್ಕಿ ನೀಡಿದವರು, ಆಹಾರ ಭದ್ರತೆ ಯೋಜನೆ ಜಾರಿಗೊಳಿಸಿದ್ದು ನಮ್ಮ ಸರ್ಕಾರ. 5ರಿಂದ 7 ಕೆ.ಜಿ. ಅಕ್ಕಿ ಕೊಡುವ ತೀರ್ಮಾನ ಮಾಡಿದ್ದು ನಮ್ಮ ಸರ್ಕಾರ. 5 ಕೆ.ಜಿ. ಅಕ್ಕಿಯ ಜೊತೆಗೆ ಮತ್ತೆ 5 ಕೆ.ಜಿ. ಅಕ್ಕಿ ಕೊಡುವ ತೀರ್ಮಾನ ಮಾಡಿದವರು ನಾವು. ಬಡವರಿಗೆ ಹೆಚ್ಚುವರಿ ಅಕ್ಕಿ ಕೊಡುವಂತೆ ಕೇಂದ್ರ ಸರ್ಕಾರಕ್ಕೆ ಕೋರಿದರೆ, ಅಕ್ಕಿ ಕೊಡಲಿಲ್ಲ. ಅದರಿಂದ 5 ಕೆ.ಜಿ. ಅಕ್ಕಿಯ ಬದಲಾಗಿ ₹170 ಕೊಡಲಾಗುತ್ತಿದೆ ಎಂದರು.
ಬೇರೆ ಯಾವುದೇ ರಾಜ್ಯದಲ್ಲಿ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುತ್ತಿರುವುದನ್ನು ತೋರಿಸಿದರೆ, ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ. ಬಡವರ ಹೊಟ್ಟೆಯ ಮೇಲೆ ಹೊಡೆಯುವವರು ಬಿಜೆಪಿ, ಜೆಡಿಎಸ್‌ನವರು. ಅವರಿಗೆ ಯಾವ ನೈತಿಕ ಹಕ್ಕಿದೆ ಎಂದು ಪ್ರಶ್ನಿಸಿದರು.
ಗ್ಯಾರಂಟಿಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ, ಜಾರಿ ಮಾಡಿದರೆ ಬೊಕ್ಕಸ ಖಾಲಿಯಾಗುತ್ತದೆ ಎಂದು ಪ್ರಧಾನಿ ಮೋದಿ ಸೇರಿದಂತೆ ಪ್ರತಿಪಕ್ಷಗಳ ನಾಯಕರು ಗ್ಯಾರಂಟಿಗಳನ್ನು ವಿರೋಧ ಮಾಡಿದರು. ಹಾಗಾಗಿ ಅವರು ಬಡವರ ವಿರೋಧಿಗಳು ಎಂದರು.
ನಬಾರ್ಡ್‌ನಿಂದ ಶೇ 4.5 ರಷ್ಟು ಬಡ್ಡಿದರದೊಂದಿಗೆ ನಬಾರ್ಡ್‌ನಿಂದ ಸಾಲ ಪಡೆದು, ₹5 ಲಕ್ಷದವರೆಗೆ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಆದರೆ, ₹5,600 ಕೋಟಿಯಿದ್ದ ನಬಾರ್ಡ್ ಸಾಲ ಈಗ ₹2,340 ಕೋಟಿಗೆ ಇಳಿಕೆ ಮಾಡಲಾಗಿದೆ. ಶೇ 58 ರಷ್ಟು ಕಡಿತ ಮಾಡಲಾಗಿದೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದರೂ, ಪ್ರಯೋಜನವಾಗಿಲ್ಲ. ಮಣ್ಣಿನ ಮಗ ಎಂದು ಹೇಳಿಕೊಳ್ಳುವ ದೇವೇಗೌಡರು ಈ ಬಗ್ಗೆ ಪ್ರಶ್ನೆ ಮಾಡಬೇಕಲ್ಲವೇ? ರಾಜ್ಯಕ್ಕೆ ಅನ್ಯಾಯವಾದಾಗ, ರಾಜ್ಯದ ಬಿಜೆಪಿ ಸಂಸದರು ಅದರ ವಿರುದ್ಧ ಧ್ವನಿ ಎತ್ತಬೇಕು ಎಂದರು.
3.71 ಲಕ್ಷ ಕೋಟಿಯಲ್ಲಿ 1.20 ಲಕ್ಷ ಕೋಟಿ ಅಭಿವೃದ್ಧಿಗೆ, ₹56 ಸಾವಿರ ಕೋಟಿ ಗ್ಯಾರಂಟಿಗೆ ನೀಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಕೇಂದ್ರದ ಹಣಕಾಸು ನೆರವನ್ನು ಕಡಿತಗೊಳಿಸುವ ಮೂಲಕ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಹುನ್ನಾರವನ್ನು ಕೇಂದ್ರದ ಬಿಜೆಪಿ ಸರ್ಕಾರ ಮಾಡುತ್ತಿದೆ. 2028 ರ ಮೇ ವರೆಗೂ ಗ್ಯಾರಂಟಿ ಯೋಜನೆಗಳು ಮುಂದುವರಿಯಲಿವೆ. 2028 ರಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಆಗಲೂ ಗ್ಯಾರಂಟಿಗಳು ಮುಂದುವರಿಯಲಿವೆ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.