ADVERTISEMENT

ಧರ್ಮಸ್ಥಳ ಪ್ರಕರಣ: ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸೆಂಥಿಲ್‌

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 8:34 IST
Last Updated 6 ಸೆಪ್ಟೆಂಬರ್ 2025, 8:34 IST
<div class="paragraphs"><p>ಜನಾರ್ದನ ರೆಡ್ಡಿ ಹಾಗೂ&nbsp;&nbsp;ಶಶಿಕಾಂತ ಸೆಂಥಿಲ್‌</p></div>

ಜನಾರ್ದನ ರೆಡ್ಡಿ ಹಾಗೂ  ಶಶಿಕಾಂತ ಸೆಂಥಿಲ್‌

   

ಬೆಂಗಳೂರು: ‘ಧರ್ಮಸ್ಥಳಕ್ಕೆ ಕಳಂಕ ತರುವ ಪಿತೂರಿಯ ಹಿಂದಿನ ರೂವಾರಿ ಶಶಿಕಾಂತ ಸೆಂಥಿಲ್‌’ ಎಂದು ಆರೋಪಿಸಿದ್ದ ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ತಮಿಳುನಾಡಿನ ತಿರುವಳ್ಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಸಂಸದ ಶಶಿಕಾಂತ ಸೆಂಥಿಲ್‌ ಬೆಂಗಳೂರಿನಲ್ಲಿ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಈ ಸಂಬಂಧ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ತಮ್ಮ ವಕೀಲರ ಮೂಲಕ ಬೆಳಿಗ್ಗೆ ಖುದ್ದು ಹಾಜರಾಗಿದ್ದರು.

ADVERTISEMENT

ಶಶಿಕಾಂತ ಸೆಂಥಿಲ್‌ ಪರ ಹಾಜರಾಗಿದ್ದ ಹೈಕೋರ್ಟ್ ವಕೀಲರಾದ ಸೂರ್ಯ ಮುಕುಂದರಾಜ್‌ ಮತ್ತು ಸಂಜಯ ಯಾದವ್‌, ದೂರನ್ನು ದಾಖಲು ಮಾಡಿಕೊಳ್ಳುವಂತೆ ಮ್ಯಾಜಿಸ್ಟ್ರೇಟ್‌ ಕೆ.ಎನ್‌.ಶಿವಕುಮಾರ್ ಅವರಿಗೆ ಮನವಿ ಮಾಡಿದರು. ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರು ಇದೇ 11ಕ್ಕೆ ದೂರಿನ ವಿಚಾರಣೆ ನಡೆಸಲು ಮುದ್ದತು ನಿಗದಪಡಿಸಿ ಮುಂದೂಡಿದರು.

ಆಧಾರ ರಹಿತ ಆರೋಪ:

ದೂರನ್ನು ನೀಡಿ ನ್ಯಾಯಾಲಯದಿಂದ ಹೊರಬಂದ ಸೆಂಥಿಲ್‌ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ‘ಜನಾರ್ದನ ರೆಡ್ಡಿ ಅವರು ರಾಜಕೀಯ ದುರುದ್ದೇಶದಿಂದ ನನ್ನ ಹೆಸರನ್ನು ಉಲ್ಲೇಖಿಸಿ ಆಧಾರಹಿತ ಸುಳ್ಳು ಆರೋಪಗಳನ್ನು ಮಾಡಿದ್ದಾರೆ’ ಎಂದರು.

‘ಈ ಪ್ರಕರಣದಲ್ಲಿ ನನ್ನ ಹೆಸರನ್ನು ಪ್ರತಿನಿತ್ಯವೂ ಎಳೆದು ತರಲಾಗುತ್ತಿದೆ. ಇದರ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ. ನಾನು ಬಲಪಂಥೀಯ ಚಟುವಟಿಕೆಗಳ ಬಗ್ಗೆ ಹೊಂದಿರುವ ನಿಲುವಿನಿಂದಾಗಿಯೇ ಕೆಲವರು ಇಂತಹ ಗುಲ್ಲೆಬ್ಬಿಸುತ್ತಿದ್ದಾರೆ. ಕರ್ನಾಟಕದ ಜನತೆಗೆ ಟೋಪಿ ಹಾಕುತ್ತಿದ್ದಾರೆ. ಜನಾರ್ದನ ರೆಡ್ಡಿ ಗಣಿ ಲೂಟಿ ಹೊಡೆದ ವ್ಯಕ್ತಿ. ಆತ ನ್ಯಾಯಮೂರ್ತಿಗಳನ್ನೇ ಬಿಟ್ಟಿಲ್ಲ’ ಎಂದು ದೂರಿದರು. 

ಕರ್ನಾಟಕ ಕೇಡರ್‌ನ ಮಾಜಿ ಐಎಎಸ್‌ ಅಧಿಕಾರಿಯೂ ಆಗಿರುವ ಶಶಿಕಾಂತ ಸೆಂಥಿಲ್‌, ‘ಧರ್ಮಸ್ಥಳದಲ್ಲಿ ಶವಗಳನ್ನು ದಫನ್‌ ಮಾಡಲಾಗಿದೆ ಎಂಬ ಆರೋಪದಡಿ ಬುರುಡೆ ತೋರಿಸುತ್ತಿರುವವರು ದೆಹಲಿಯಲ್ಲಿ ನಿಮ್ಮ ಮನೆಗೆ ಬಂದಿದ್ದರಂತಲ್ಲಾ’ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿ, ‘ಈತನಕ ನನಗೆ ದೆಹಲಿಯಲ್ಲಿ ಮನೆಯೇ ಇಲ್ಲ. ನಾನಿನ್ನೂ ತಮಿಳುನಾಡು ಭವನದಲ್ಲೇ ಇದ್ದೇನೆ’ ಎಂದರು.

‘ನನ್ನನ್ನು ಕ್ರಿಶ್ಚಿಯನ್‌ ಎಂದು ಪ್ರಚಾರ ಮಾಡಲಾಗುತ್ತಿದೆ. ಅಸಲಿಗೆ ಸುಬ್ರಹ್ಮಣ್ಯನ ಮತ್ತೊಂದು ಹೆಸರೇ ಸೆಂಥಿಲ್‌ ಎಂಬುದು ಇವರಿಗೆ ಗೊತ್ತಿಲ್ಲ’ ಎಂದ ಅವರು, ‘ನನ್ನ ವಿರುದ್ಧ ಯಾರೇ ಆಗಲಿ ಯಾವುದೇ ರೀತಿ ಇಲ್ಲಸಲ್ಲದ ಆರೋಪಗಳನ್ನು ಮಾಡಿದರೆ ಅಂಥವರ ವಿರುದ್ಧ ನಾನು ಖಂಡಿತವಾಗಿಯೂ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇನೆ’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.