
ಬೆಂಗಳೂರು: ‘ಶಾಸಕ ನಾರಾ ಭರತ್ ರೆಡ್ಡಿ ಬೆನ್ನಿಗೆ ನಮ್ಮ ಪಕ್ಷ ನಿಲ್ಲಲಿದೆ. ನಾವು ನಮ್ಮ ಕಾರ್ಯಕರ್ತನನ್ನು ಕಳೆದುಕೊಂಡಿದ್ದೇವೆ. ಇದಕ್ಕೆ ಕಾರಣ ಯಾರು ಎಂಬುದು ತನಿಖೆಯಿಂದ ಹೊರಬರಲಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಜನಾರ್ದನ ರೆಡ್ಡಿ ಬಳ್ಳಾರಿಗೆ ಕಾಲಿಡುವವರೆಗೂ ಗಲಾಟೆ ಇರಲಿಲ್ಲ. ಅವರು ಬಂದ ಮೇಲೆ ಗಲಭೆ ಆಗಿದೆ. ಹೀಗಾಗಿ, ಈ ಗಲಾಟೆಯ ಬಗ್ಗೆ ಮಾತನಾಡುವ ಹಕ್ಕು ಅವರಿಗಿಲ್ಲ’ ಎಂದರು.
‘ನನ್ನ ಹತ್ಯೆಗೆ ಸಂಚು ರೂಪಿಸಿದ್ದರು’ ಎಂದು ಜನಾರ್ದನ ರೆಡ್ಡಿ ಆರೋಪಿಸಿರುವ ಬಗ್ಗೆ ಕೇಳಿದಾಗ, ‘ಅವರು ಡ್ರಾಮಾ ಮಾಸ್ಟರ್. ಅವರು ಮೊದಲೇ ಸಿನಿಮಾ ನಿರ್ಮಾಪಕರಲ್ಲವೇ? ಕೋಟೆ ನಿರ್ಮಿಸಿಕೊಂಡು ನೂರು ಜನ ಭದ್ರತಾ ಸಿಬ್ಬಂದಿ ಹೊಂದಿರುವವರನ್ನು ಯಾರು ಹತ್ಯೆ ಮಾಡುತ್ತಾರೆ? ಯಾರ ಇತಿಹಾಸ, ಏನು ಎಂಬುದನ್ನು ನೀವೇ (ಮಾಧ್ಯಮ) ಅರ್ಥ ಮಾಡಿಕೊಳ್ಳಬೇಕು’ ಎಂದು ತಿರುಗೇಟು ನೀಡಿದರು.
‘ವಾಲ್ಮೀಕಿ ಮಹರ್ಷಿಯ ಪುತ್ಥಳಿ ಅನಾವರಣಕ್ಕೆ ಸಂಬಂಧಿಸಿದ ಬ್ಯಾನರ್ ಹಾಕುವುದರಿಂದ ಬಿಜೆಪಿಯವರಿಗೆ ಆಗಿರುವ ತೊಂದರೆಯಾದರೂ ಏನು? ಈ ವಿಚಾರಕ್ಕೆ ರೆಡ್ಡಿ ಜಗಳಕ್ಕೆ ಬರುವ ಅಗತ್ಯವೇನಿತ್ತು? ನಾವು ಕಾರ್ಯಕರ್ತನನ್ನು ಕಳೆದುಕೊಳ್ಳಲು ಬಿಜೆಪಿಯವರು ಕಾರಣ. ಈ ಪ್ರಕರಣದ ತನಿಖೆಯಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ’ ಎಂದರು.
‘ಬಳ್ಳಾರಿಯಲ್ಲಿ ನಮ್ಮ ಪಕ್ಷದ ಗೆಲುವು ಅರಗಿಸಿಕೊಳ್ಳಲು ಬಿಜೆಪಿಯವರಿಗೆ ಆಗುತ್ತಿಲ್ಲ. ಸೋತ ನಂತರ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಇಬ್ಬರೂ ತಬ್ಬಿಕೊಂಡು ಓಡಾಡುತ್ತಿದ್ದಾರೆ. ಮತ್ತೆ ಬಳ್ಳಾರಿಯಲ್ಲಿ ತಮ್ಮ ರಿಪಬ್ಲಿಕ್ ತರಲು ಪ್ರಯತ್ನಿಸುತ್ತಿದ್ದಾರೆ. ನಾವು ಅದಕ್ಕೆ ಅವಕಾಶ ನೀಡುವುದಿಲ್ಲ’ ಎಂದರು.
ಗನ್ ವಿತರಿಸಲು ನಿಯಮ: ‘ಬಳ್ಳಾರಿಯ ಘಟನೆಯ ಬೆನ್ನಲ್ಲೇ ಎಲ್ಲ ಖಾಸಗಿ ಗನ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಗನ್ ವಿತರಿಸಲು ನಿಯಮಾವಳಿ ರೂಪಿಸುತ್ತೇವೆ’ ಎಂದು ಶಿವಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.