ಡಾ. ಅಂಬೇಡ್ಕರ್
ಬೆಂಗಳೂರು: ‘ಇಂದು ಶಿಕ್ಷಣ, ಆಸ್ತಿಯ ಹಕ್ಕು ಮತ್ತು ಸಮಾನತೆಯ ಕಾನೂನುಗಳ ಫಲವನ್ನು ಅನುಭವಿಸುತ್ತಿರುವ ದೇಶದ ಎಲ್ಲ ಹೆಣ್ಣುಮಕ್ಕಳೂ ಬಿ.ಆರ್.ಅಂಬೇಡ್ಕರ್ ಅವರಿಗೆ ಋಣಿಯಾಗಿರಬೇಕು’ ಎಂದು ಪ್ರೊ.ರವಿಕುಮಾರ್ ಬಾಗಿ ಅಭಿಪ್ರಾಯಟ್ಟರು.
ಅಂಬೇಡ್ಕರ್ ಜಯಂತಿ ನಿಮಿತ್ತ ಜನಶಕ್ತಿ ಶಿಕ್ಷಣ ಟ್ರಸ್ಟ್, ಕ್ರಿಯಾ ಮಾಧ್ಯಮ ಜಂಟಿಯಾಗಿ ಏರ್ಪಡಿಸಿದ್ದ ‘ಅಂಬೇಡ್ಕರ್ ಚಿಂತನೆಗಳು’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸ್ವಾತಂತ್ರ್ಯ ಬಂದಾಗಲೂ ದೇಶದಲ್ಲಿ ಹೆಣ್ಣುಮಕ್ಕಳನ್ನು ಭೋಗ ಮತ್ತು ಬಳಸಿ ಬಿಸಾಡುವ ವಸ್ತುವಿನಂತೆ ನೋಡಲಾಗುತ್ತಿತ್ತು. ಹೆಣ್ಣು ಸ್ವಾತಂತ್ರ್ಯಕ್ಕೆ ಅರ್ಹಳೇ ಅಲ್ಲ ಎಂಬ ಮನುವಿನ ಪ್ರತಿಪಾದನೆಗೇ ಜೋತುಬಿದ್ದಿದ್ದ ಮನುವಾದಿಗಳು, ಆಕೆಯನ್ನು ದಾಸಿಯಂತೆಯೇ ನೋಡಿಕೊಳ್ಳುತ್ತಿದ್ದರು. ಇದಕ್ಕೆಲ್ಲಾ ಕೊನೆ ಹಾಡಬೇಕು ಎಂಬ ಉದ್ದೇಶದಿಂದಲೇ ಅಂಬೇಡ್ಕರ್ ಅವರು ‘ಹಿಂದೂ ಸಂಹಿತೆ ಮಸೂದೆ’ಯನ್ನು ಮಂಡಿಸಿದರು’ ಎಂದರು.
‘ಅಂಬೇಡ್ಕರರ ಈ ನಡೆ ಮನುವಾದಿಗಳನ್ನು ಕೆರಳಿಸಿತು. ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ತರಲು ಹೊರಟ ಕಾನೂನಿನ ವಿರುದ್ಧ, ಮನುವಾದಿಗಳು ಹೆಣ್ಣುಮಕ್ಕಳನ್ನೇ ಎತ್ತಿಕಟ್ಟಿದರು. ಸಂಸತ್ ಭವನದ ಎದುರು ಪ್ರತಿಭಟನೆ ನಡೆಸಿದರು. ಚುನಾವಣೆಗೆ ಬೆಂಬಲ ನೀಡುವುದಿಲ್ಲ ಎಂದು ವ್ಯಾಪಾರಿ ಸಮುದಾಯವರು ಬೆದರಿಕೆ ಹಾಕಿದರು. ಹೀಗಿದ್ದರೂ ಅಂಬೇಡ್ಕರ್ ಅವರು ಆ ಮಸೂದೆ ನಾಲ್ಕು ವರ್ಷಗಳವರೆಗೆ ಚರ್ಚೆಯಲ್ಲಿ ಇರುವಂತೆ ನೋಡಿಕೊಂಡರು’ ಎಂದರು.
‘ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನಹಕ್ಕು, ಶಿಕ್ಷಣದ ಹಕ್ಕನ್ನು ಮಸೂದೆಯಲ್ಲಿ ಸೇರಿಸಿದ್ದರು. 1951ರಲ್ಲಿ ಸಂಸತ್ತಿನಲ್ಲಿ ಮಸೂದೆಗೆ ಅನುಮೋದನೆ ದೊರೆಯದೇ ಇದ್ದಾಗ, ಅಂಬೇಡ್ಕರ್ ರಾಜೀನಾಮೆ ನೀಡಿದರು. ಆದರೆ ಅವರು ಹಿಂದೂ ಸಂಹಿತೆ ಮೂಲಕ ತರಲು ಹೊರಟಿದ್ದ ಕಾನೂನುಗಳು, ನಂತರದ ವರ್ಷಗಳಲ್ಲಿ ಬೇರೆ–ಬೇರೆ ರೂಪದಲ್ಲಿ ಜಾರಿಗೆ ಬಂದವು’ ಎಂದರು.
‘ಈ ಎಲ್ಲ ಕಾರಣಗಳಿಗಾಗಿ ಅಂಬೇಡ್ಕರ್ ಅವರನ್ನು ದೇಶದ ಎಲ್ಲ ಮಹಿಳೆಯರು ಗೌರವಿಸಬೇಕು, ಪೂಜಿಸಬೇಕು ಮತ್ತು ಋಣಿಯಾಗಿರಬೇಕು’ ಎಂದರು.
‘ಅಂಬೇಡ್ಕರ್ ಮತ್ತು ಕಾರ್ಮಿಕ ಕಾನೂನುಗಳು’ ಕುರಿತು ವಕೀಲೆ ಅಶ್ವನಿ ಓಬುಳೇಶ್, ‘1952ರ ಚುನಾವಣೆಗೆ ಎಐಎಸ್‌ಸಿಎಫ್ ಪ್ರಣಾಳಿಕೆ’ ಕುರಿತು ಸಾಮಾಜಿಕ ಕಾರ್ಯಕರ್ತ ಬಿ.ಆರ್.ಮಂಜುನಾಥ್ ವಿಷಯ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.