ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಪ್ರಧಾನ ಮಂತ್ರಿ ನರೇಂದ್ರಮೋದಿ ಕರೆ ನೀಡಿರುವ ‘ಜನತಾ ಕರ್ಫ್ಯೂ’ಗೆ ರಾಜ್ಯದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಭಾನುವಾರ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ರಾಜ್ಯ ಸಂಪೂರ್ಣ ಸ್ಥಗಿತವಾಗುವ ಸಾಧ್ಯತೆ ಇದೆ.
ಕೋವಿಡ್–19ಕ್ಕೆ ಈಡಾದವರ ಒಂದೇ ಒಂದು ಪ್ರಕರಣ ರಾಜ್ಯದಲ್ಲಿ ಶುಕ್ರವಾರ ಪತ್ತೆಯಾಗದಿರುವುದು ಹಾಗೂ ಓರ್ವ ಸೋಂಕಿತ ಗುಣಮುಖನಾಗಿ ಮನೆ ಸೇರಿರುವುದು ಸಮಾಧಾನ ತಂದಂತಾಗಿದೆ.
‘ಜನತಾ ಕರ್ಫ್ಯೂ’ಗೆ ರಾಜ್ಯದ ಹಲವು ಸಂಘಟನೆಗಳು ಬೆಂಬಲ ಸೂಚಿಸಿದ್ದು, ಅಂದು ತಮ್ಮ ಎಲ್ಲ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿವೆ. ಬಹುತೇಕರು ಅಂದು ಇಡೀ ದಿನ ಮನೆಯಲ್ಲೇ ಇರುವುದಾಗಿ ಘೋಷಿಸಿದ್ದಾರೆ.
ಆಸ್ಪತ್ರೆಗಳು, ಔಷಧ ಮಳಿಗೆ, ಅಗ್ನಿಶಾಮಕ ದಳ ಸೇರಿ ತುರ್ತು ಸೇವೆಗಳು ಮಾತ್ರ ಅಂದು ಲಭ್ಯವಾಗಲಿವೆ. ಹಾಲು, ಪತ್ರಿಕೆ ಸರಬರಾಜು ಎಂದಿನಂತೆ ಇರಲಿದೆ.ತರಕಾರಿ, ಹಣ್ಣು ಸೇರಿದಂತೆ ಬಹುತೇಕ ವಸ್ತುಗಳ ಮಾರುಕಟ್ಟೆಗಳು ಸಂಪೂರ್ಣ ಬಂದ್ ಆಗಲಿವೆ.
ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಬಿಎಂಟಿಸಿ ಬಸ್‌ಗಳು ಅಂದು ಬೆಳಿಗ್ಗೆ ಎಂದಿನಂತೆ ಸಂಚರಿಸಲಿವೆ. ಪ್ರಯಾಣಿಕರು ಅನಿವಾರ್ಯ ಸಂದರ್ಭಗಳಲ್ಲಿ ಸಂಚಾರ ಮಾಡಬೇಕಾದಲ್ಲಿ ಮಾತ್ರ ಈ ಎರಡು ಸಂಸ್ಥೆಗಳ ಸೇವೆ ಲಭ್ಯ ಇರಲಿದೆ.
ಬೆಳಿಗ್ಗೆಯಿಂದಲೇ ಮೆಟ್ರೊ ರೈಲು ಸಂಚಾರವನ್ನೂ ಸ್ಥಗಿತಗೊಳಿಸುವುದಾಗಿ ಬೆಂಗಳೂರು ಮೆಟ್ರೊ (ಬಿಎಂಆರ್‌ಸಿಎಲ್) ಹೇಳಿದೆ. ಆಟೊ, ಓಲಾ ಹಾಗೂ ಉಬರ್ ಸೇರಿ ವಿವಿಧ ಕಂಪನಿ ಕ್ಯಾಬ್‌ಗಳು ಅಂದು ರಸ್ತೆಗೆ ಇಳಿಯುವುದಿಲ್ಲ. ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಸಹ ಬಂದ್ ಆಗಲಿದೆ.
ರಾಜ್ಯದ ಪೆಟ್ರೋಲ್ ಹಾಗೂ ಡೀಸೆಲ್ ಬಂಕ್‌ಗಳ ಮಾಲೀಕರು ಬಂದ್‌ಗೆ ಪರೋಕ್ಷ ಬೆಂಬಲ ನೀಡಿದ್ದಾರೆ. ತೈಲ ಅಗತ್ಯವಾಗಿರುವುದರಿಂದ ಅಂದು ಬಂಕ್‌ಗಳು ಯಥಾಪ್ರಕಾರ ತೆರೆದಿರಲಿವೆ. ಆದರೆ, ಸಿಬ್ಬಂದಿ ಬಂಕ್ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ.
ಹೊಟೇಲ್‌ನಲ್ಲಿ ಪಾರ್ಸೆಲ್ ಮಾತ್ರ
ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಹೋಟೆಲ್‌ಗಳು ಶನಿವಾರದಿಂದ ಮಾರ್ಚ್ 31 ರವರೆಗೆ ತಮ್ಮ ಪಾಕಶಾಲೆಯನ್ನು ಮಾತ್ರ ತೆರೆಯಬೇಕು ಮತ್ತು ಪಾರ್ಸೆಲ್ ಒಯ್ಯಲು ಅವಕಾಶ ನೀಡಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಪಬ್ ಮತ್ತು ಕ್ಲಬ್‌ಗಳಿಗೆ ಇದ್ದ ನಿರ್ಬಂಧವನ್ನು ಬಾರ್‌ಗಳಿಗೂ ವಿಸ್ತರಿಸಲಾಗಿದೆ. ಮದ್ಯದಂಗಡಿಗಳು ಮಾತ್ರ ತೆರೆಯಲಿದ್ದು, ಮದ್ಯವನ್ನು ಮನೆಗೆ ಒಯ್ಯಲು ಅವಕಾಶವಿದೆ.
ಅಡುಗೆ ಮನೆ ಹೊರಗೆ ಇರುವ ಸಣ್ಣ ಕ್ಯಾಂಟಿನ್‌ಗಳು ಕಾರ್ಯ ನಿರ್ವಹಿಸಬಹುದು. ನಿಂತು ತಿನ್ನುವ ವ್ಯವಸ್ಥೆ ಇರುವ ‘ದರ್ಶಿನಿ’ ಗಳಲ್ಲಿ ವ್ಯಕ್ತಿಗಳ ನಡುವೆ ಆರು ಅಡಿಗಳಷ್ಟು ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದೆ.
ವಿಮಾನಗಳಿಗೆ ನಿಷೇಧ
‘ಮಾ.23 ರಿಂದ ಯಾವುದೇ ಅಂತಾರಾಷ್ಟ್ರೀಯ ವಿಮಾನಗಳು ರಾಜ್ಯಕ್ಕೆ ಬರುವುದಿಲ್ಲ. 22ರ ಮಧ್ಯರಾತ್ರಿ 1 ಗಂಟೆಗೆ ಮೊದಲು ಬರುವ ವಿಮಾನಗಳಿಗೆ ಇಳಿಯಲು ಅವಕಾಶ ನೀಡಲಾಗುವುದು’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.
ದೇಶದೊಳಗೆ ಸಂಚರಿಸುವ ವಿಮಾನಗಳಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಈ ಸಂಬಂಧ ಕೇಂದ್ರ ಸರ್ಕಾರ ಯಾವುದೇ ಸೂಚನೆ ನೀಡಿದರೂ ಅದನ್ನು ಪಾಲಿಸಲಾಗುವುದು ಎಂದವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.