ಬೆಂಗಳೂರು: ‘ಪ್ರವೇಶ ಪರಿಕ್ಷೆಗಳ ಸಂದರ್ಭದಲ್ಲಿ ಧಾರ್ಮಿಕ ಉಡುಗೆಗಳನ್ನೂ ತೆಗೆದು ತಪಾಸಣೆ ನಡೆಸಬೇಕು ಎಂದು ಕೇಂದ್ರ ಸರ್ಕಾರದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (ಎನ್‌ಟಿಎ) ಮಾರ್ಗಸೂಚಿ ಹೇಳುತ್ತದೆ. ರಾಜ್ಯದ ಸಂಸ್ಥೆಗಳೂ ಎನ್‌ಟಿಎಯ ಮಾರ್ಗಸೂಚಿಯನ್ನೇ ಪಾಲಿಸುತ್ತವೆ. ಈ ಸಂಬಂಧ ಕೇಂದ್ರ ಸರ್ಕಾರವೇ ಗೊಂದಲ ನಿವಾರಿಸಬೇಕು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ರಾಜ್ಯ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರಿಗೆ ಈ ಬಗ್ಗೆ ಪತ್ರ ಬರೆದಿರುವ ಅವರು, ‘ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಯ ಜನಿವಾರ ತೆಗೆಸಿರುವ ಪ್ರಕರಣ ತೀವ್ರ ಆಘಾತಕಾರಿ. ಇದನ್ನು ಖಂಡಿಸುತ್ತೇನೆ’ ಎಂದಿದ್ದಾರೆ.
‘ಆದರೆ ಈ ವಿಚಾರದಲ್ಲಿ ಬಿಜೆಪಿ ನಾಯಕರು ಮತ್ತು ಶಾಸಕರು, ರಾಜ್ಯ ಸರ್ಕಾರವನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಹೊರಟಿರುವುದು ಕಳವಳಕಾರಿ. ಕೇಂದ್ರ ಸರ್ಕಾರದ ಪರೀಕ್ಷಾ ಸಂಸ್ಥೆಗಳು ರೂಪಿಸಿದ ಮಾರ್ಗಸೂಚಿ ಮತ್ತು ವಸ್ತ್ರ ಸಂಹಿತೆಯನ್ನು ಎಲ್ಲ ರಾಜ್ಯಗಳೂ ಪಾಲಿಸುತ್ತಿರುವಂತೆ ಕರ್ನಾಟಕದಲ್ಲೂ ಪಾಲಿಸಲಾಗಿದೆ’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
‘ಕೇಂದ್ರ ಸರ್ಕಾರ ರೂಪಿಸಿದ ನಿಯಮವನ್ನು ಪರೀಕ್ಷಾ ಕೇಂದ್ರದ ತಪಾಸಕರು ಪಾಲಿಸಿದ್ದಾರೆ. ಹೀಗಿರುವಾಗ ಕೇಂದ್ರದ ನಿಯಮ, ರಾಜ್ಯ ಸರ್ಕಾರ ಮತ್ತು ಪರೀಕ್ಷಾ ಕೇಂದ್ರದ ತಪಾಸಕರಿಗೆ ಯಾವ ರೀತಿಯ ಸಂಬಂಧ’ ಎಂದು ಅವರು ಪ್ರಶ್ನಿಸಿದ್ದಾರೆ.
‘ಎನ್‌ಟಿಎ ಮೂಲಕ ನಡೆಯುವ ನೀಟ್ ಪರೀಕ್ಷೆ ವೇಳೆ ಉದ್ದ ಅಂಗಿ, ಕೋಟ್, ಕೈದಾರ, ಜನಿವಾರ, ಬೂಟ್, ಓಲೆ, ಗೆಜ್ಜೆ, ಸರ, ಉಂಗುರ ಧರಿಸಿರುವುದು ನಿಷಿದ್ಧ. ತಪಾಸಣೆಯ ನಂತರವಷ್ಟೇ ಧಾರ್ಮಿಕ ಉಡುಗೆಗಳನ್ನು ತೊಡಲು ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ’ ಎಂದು ವಿವರಿಸಿದ್ದಾರೆ.
‘ಪರೀಕ್ಷಾ ಶುದ್ಧತೆ ಕಾಪಾಡುವ ಉದ್ದೇಶ ಒಳ್ಳೆಯದೆ. ಜತೆಗೆ ಧಾರ್ಮಿಕ ಸ್ವಾತಂತ್ರ್ಯಕ್ಕೂ ಚ್ಯುತಿ ಬರಬಾರದು. ಹೀಗಾಗಿ ಕೇಂದ್ರ ಸರ್ಕಾರದ ಸಂಸ್ಥೆಗಳ ಪರೀಕ್ಷಾ ಮಾರ್ಗಸೂಚಿಗಳಲ್ಲಿ ಕೆಲ ಬದಲಾವಣೆಗಳನ್ನು ತರಬೇಕಿದೆ. ಈ ಸಂಬಂಧ ನೀವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಿರಿ. ವಸ್ತ್ರ ಸಂಹಿತೆಯಲ್ಲಿ ಅಗತ್ಯ ಬದಲಾವಣೆ ಮಾಡುವಂತೆ ಕೋರಿ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.