ADVERTISEMENT

ಮಳೆಗಾಗಿ ದೇಗುಲಗಳಲ್ಲಿ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 19:46 IST
Last Updated 6 ಜೂನ್ 2019, 19:46 IST
   

ಬೆಂಗಳೂರು: ಮಳೆಗಾಗಿ ಪ್ರಾರ್ಥಿಸಿ ರಾಜ್ಯದಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಗುರುವಾರ ಪರ್ಜನ್ಯ ಜಪ ಹಾಗೂ ವಿಶೇಷ ಪೂಜೆಗಳು ನೆರವೇರಿದವು.

ಮಳೆ ಬೀಳುವಂತೆ ಮಾಡಲು ಮೋಡ ಬಿತ್ತನೆಯಂತಹ ವೈಜ್ಞಾನಿಕ ವಿಧಾನದ ಮೊರೆ ಹೋಗಿರುವ ಸರ್ಕಾರ, ಮತ್ತೊಂದೆಡೆ ದೇಗುಲಗಳ ಮೊರೆ ಹೋಗಿದೆ. ಮುಜರಾಯಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸುವಂತೆ ಕಂದಾಯ ಇಲಾಖೆ ಆದೇಶಿಸಿದೆ.

ಸಾಕಷ್ಟು ದೇಗುಲಗಳಲ್ಲಿ ಬುಧವಾರ ಸಂಜೆಯಿಂದಲೇ ಸಿದ್ಧತೆಗಳು ಆರಂಭಗೊಂಡಿದ್ದವು. ಗುರುವಾರ ಬೆಳಿಗ್ಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಪರ್ಜನ್ಯ ಜಪ ಕೈಗೊಳ್ಳಲಾಯಿತು. ಸಾಕಷ್ಟು ಕಡೆಗಳಲ್ಲಿ ಬೆಳಿಗ್ಗೆ 5 ಗಂಟೆಗೆ ಬ್ರಾಹ್ಮಿ ಮುಹೂರ್ತದಲ್ಲಿ ಪೂಜೆ ನೆರವೇರಿಸಲಾಯಿತು. ಶಾಸಕರು, ಕಂದಾಯ ಇಲಾಖೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಪೂಜೆಯಲ್ಲಿ ಪಾಲ್ಗೊಂಡು ಮಳೆಗಾಗಿ ಪ್ರಾರ್ಥಿಸಿದರು.

ADVERTISEMENT

ಎಲ್ಲ ದೇಗುಲಗಳಲ್ಲಿ ಒಂದೇ ದಿನ ಪೂಜೆ ಸಲ್ಲಿಸಲು ಸರ್ಕಾರ ಆದೇಶಿಸಿದ್ದರಿಂದ ಸಾಕಷ್ಟು ಕಡೆಗಳಲ್ಲಿ ಪೂಜಾ ಕೈಂಕರ್ಯ ನೆರವೇರಿಸಲು ಋತ್ವಿಜರ ಕೊರತೆ ಕಾಡಿತು. ಪುರಾಣ ಪ್ರಸಿದ್ಧ ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಸ್ಥಾನದಲ್ಲಿ ಋತ್ವಿಜರನ್ನು ಹೊಸಪೇಟೆಯಿಂದ ಕರೆಸಿ ಜಪ ಹಾಗೂ ಪೂಜೆ ಸಲ್ಲಿಸಲಾಯಿತು. ರಾಮನಗರ ಜಿಲ್ಲೆ ಹಾಗೂ ಇತರೆ ಜಿಲ್ಲೆಗಳಲ್ಲೂ ಇದೇ ಸಮಸ್ಯೆ ಕಾಡಿದ್ದರಿಂದಾಗಿ ಪೂಜೆ ಸಲ್ಲಿಸಲು ಪರದಾಡಿದರು. ಕೊನೆಗೆ ಸಿಕ್ಕವರನ್ನು ಕರೆತಂದು ಪೂಜೆ ಸಲ್ಲಿಸುವ ವ್ಯವಸ್ಥೆ ಮಾಡಲಾಯಿತು.

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಸಮೀಪದ ಕಿಗ್ಗಾದ ಋಷ್ಯಶೃಂಗೇಶ್ವರ ದೇವಾಲಯದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಪೂಜೆ ಸಲ್ಲಿಸಿ, ಮಳೆಗಾಗಿ ಪ್ರಾರ್ಥಿಸಿದರು. ‘ಉತ್ತಮ ಮಳೆಯಾಗಿ ಕೆರೆಕಟ್ಟೆ, ಜಲಾಶಯಗಳು ತುಂಬಬೇಕು. ಜನರ ಬದುಕು ಹಸನಾಗಬೇಕು. ಅದಕ್ಕಾಗಿ ಪೂಜೆ ಸಲ್ಲಿಸಲಾಗಿದೆ’ ಎಂದು ಅವರು ತಿಳಿಸಿದರು.

ಬೆಳಗಾವಿ ಜಿಲ್ಲೆ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿರುವ ರೇಣುಕಾ ಯಲ್ಲಮ್ಮ ದೇವಸ್ಥಾನದ ಗಂಗಾಮಾತೆ ಮೂರ್ತಿಗೆ ಅರ್ಚಕರು ಒಂದೂವರೆ ತಾಸು ನೀರಿನಲ್ಲೇ ನಿಂತು ಪೂಜೆ ಸಲ್ಲಿಸಿದರು.ಕಾವೇರಿ ಉಗಮಸ್ಥಾನ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ವಿಶೇಷ ಪೂಜೆ ನಡೆಯಿತು.

ವಿಶೇಷ ಪೂಜೆಗೆ ಗರಿಷ್ಠ ₹10,001 ಮೀರದಂತೆ ಖರ್ಚು ಮಾಡಬಹುದು. ಆರ್ಥಿಕವಾಗಿ ಸದೃಢವಾಗಿರುವ ದೇವಾಲಯಗಳು ತಮ್ಮ ನಿಧಿಯಿಂದ ಈ ವೆಚ್ಚ ಭರಿಸಬಹುದು ಎಂದು ಕಂದಾಯ ಇಲಾಖೆ ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.