ADVERTISEMENT

ಮಾಡಾಳ್‌ ವಿರೂಪಾಕ್ಷ ಪ್ರಕರಣದಿಂದ ಸರ್ಕಾರಕ್ಕೆ ಮುಜುಗರ: ಜೆ.ಸಿ.ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 19:31 IST
Last Updated 8 ಮಾರ್ಚ್ 2023, 19:31 IST
ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ
ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ   

ಬೆಂಗಳೂರು: ‘ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷ ಪ್ರಕರಣದಿಂದ ಸರ್ಕಾರಕ್ಕೆ ಮುಜುಗರ ಆಗಿಲ್ಲ ಎನ್ನಲು ಆಗುವುದಿಲ್ಲ’ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಹೇಳಿದ್ದಾರೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಇದೊಂದು ಸಾಗರ ಇದ್ದಂತೆ. ಎಲ್ಲೊ ಆ ಒಂದು ಕಡೆ ಏನೋ ಆದರೆ, ದಾಳಿ ನಡೆದರೆ, ಭ್ರಷ್ಟಾಚಾರ ಆದರೆ ಮುಜುಗರ ಆಗುತ್ತದೆ. ಇಲ್ಲ ಎನ್ನಲು ಆಗುವುದಿಲ್ಲ. ಸಂಬಂಧಪಟ್ಟವರನ್ನು ಜವಾಬ್ದಾರಿ ಮಾಡಿ ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಹೇಳಿದರು.

‘ಲೋಕಾಯುಕ್ತ ವಕೀಲರು ಸರಿಯಾಗಿ ವಾದ ಮಂಡಿಸಿಲ್ಲ ಎಂದರೆ ಸರ್ಕಾರ ಏನು ಮಾಡಲು ಆಗುತ್ತದೆ. ಲೋಕಾಯುಕ್ತರೇ ಅವರನ್ನು ವಿಚಾರಿಸಬೇಕು. ಆ ವಕೀಲರು ಲೋಕಾಯುಕ್ತದ ವ್ಯಾಪ್ತಿಗೆ ಬರುತ್ತಾರೆ. ಅಲ್ಲಿರುವ ಪೊಲೀಸ್‌ ಅಧಿಕಾರಿಗಳ ವಿರುದ್ಧವೂ ಸರ್ಕಾರ ಕ್ರಮ ತೆಗೆದುಕೊಳ್ಳಲು ಬರುವುದಿಲ್ಲ. ಅವರ ವಿರುದ್ಧವೂ ಲೋಕಾಯುಕ್ತರೇ ಕ್ರಮ ತೆಗೆದುಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ಪ್ರಶಾಂತ್‌ ಮಾಡಾಳ್‌ ನ್ಯಾಯಾಂಗ ಬಂಧನದಲ್ಲಿ 48 ಗಂಟೆಗಳು ಕಳೆದಿದ್ದರೆ, ಅವರ ಮೇಲೆ ಕ್ರಮ ಜರುಗಿಸಲು ಬೆಂಗಳೂರು ಜಲ ಮಂಡಳಿಗೆ ಸೂಚಿಸುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮಾಡಾಳ್‌ ಸಂಭ್ರಮಾಚರಣೆ ಸರಿಯಲ್ಲ: ನಳಿನ್‌
ಚನ್ನರಾಯಪಟ್ಟಣ (ಹಾಸನ ಜಿಲ್ಲೆ):
‘ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ನಿರೀಕ್ಷಣಾ ಜಾಮೀನು ಸಿಕ್ಕ ನಂತರ ಸಂಭ್ರಮಾಚರಣೆ ಮಾಡಿದ್ದು ಸರಿಯಲ್ಲ. ಭ್ರಷ್ಟಾಚಾರವನ್ನು ಬಿಜೆಪಿ ಸಹಿಸುವುದಿಲ್ಲ. ಲೋಕಾಯುಕ್ತ ಅದರ ಕೆಲಸ ಮಾಡುತ್ತದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದರು.

ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ‘‌ನಾಗಾಲ್ಯಾಂಡ್ ವಿಫಲಿತಾಂಶ ಕರ್ನಾಟಕದಲ್ಲಿ ಪುನಾರವರ್ತನೆ ಯಾಗಲಿದೆ. ಬಿಜೆಪಿಗೆ 60 ಸ್ಥಾನವೂ ಬರುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಸುಳ್ಳು ಹೇಳುವುದನ್ನು ಬಿಡಬೇಕು. ಅವರೊಬ್ಬ ಮಹಾನ್ ಸುಳ್ಳುಗಾರ. ಕುರುಬ ಸಮುದಾಯಕ್ಕೂ ನ್ಯಾಯ ಕೊಟ್ಟಿಲ್ಲ. ಸುಳ್ಳು ಎಂಬುದು ಅವರಿಗೆ ರಕ್ತಗತವಾಗಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.