
ಬೆಂಗಳೂರು: ಲೋಕಸಭೆ ಚುನಾವಣೆಯನ್ನು ಬಿಜೆಪಿ ಜತೆಗೂಡಿ ಎದುರಿಸಿದ್ದ ಜೆಡಿಎಸ್, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಪಾಲಿಕೆಗಳ ಚುನಾವಣೆಯಲ್ಲೂ ಮೈತ್ರಿಗೆ ಮುಂದಾಗಿದೆ.
‘ಚುನಾವಣೆಯನ್ನು ಬಿಜೆಪಿ ಜತೆಗೆ ಮೈತ್ರಿಯೊಂದಿಗೇ ಎದುರಿಸೋಣ. ಮೈತ್ರಿಗೆ ಧಕ್ಕೆಯಾಗುವ ರೀತಿಯಲ್ಲಿ ಯಾರೂ ನಡೆದುಕೊಳ್ಳಬಾರದು ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಸೂಚಿಸಿದ್ದಾರೆ.
ಬೃಹತ್ ಮುಂಬೈ ನಗರ ಪಾಲಿಕೆಗೆ (ಬಿಎಂಸಿ) ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನಾ ಮೈತ್ರಿಕೂಟವು ಸರಳ ಬಹುಮತ ಪಡೆದ ಬೆನ್ನಲ್ಲೇ, ಶುಕ್ರವಾರ ಸಂಜೆ ಜೆಡಿಎಸ್ ನಾಯಕರ ಸಭೆ ನಡೆಯಿತು. ಜಿಬಿಎ ವ್ಯಾಪ್ತಿಯ ಪಾಲಿಕೆಗಳ ಚುನಾವಣಾ ಸಿದ್ದತಾ ಸಭೆಯಲ್ಲಿ ಬಿಜೆಪಿ ಮೈತ್ರಿಯೊಂದಿಗೆ ಕಣಕ್ಕೆ ಇಳಿಯಲು ನಿರ್ಧರಿಸಲಾಯಿತು ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಬಿಜೆಪಿ ಜತೆಗಿನ ಮೈತ್ರಿ ಜತೆಗೇ ಚುನಾವಣೆ ಎದುರಿಸಿದರೆ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಕುಮಾರಸ್ವಾಮಿ ಅವರೂ ಈ ಅಭಿಪ್ರಾಯವನ್ನು ಬೆಂಬಲಿಸಿದರು ಎಂದು ಮಾಹಿತಿ ನೀಡಿದೆ.
‘ಬಿಎಂಸಿ ಚುನಾವಣೆಯನ್ನು ಬಿಜೆಪಿ ಮತ್ತು ಶಿವಸೇನಾ ಎದುರಿಸಿದ ರೀತಿಯು ನಮಗೆ ಮಾದರಿಯಾಗಬೇಕು. ಮೈತ್ರಿ ವಿಚಾರದಲ್ಲಿ ಸಮಸ್ಯೆ, ಗೊಂದಲಗಳು ಇದ್ದರೆ ಅದನ್ನು ಮೊದಲು ನನ್ನ ಗಮನಕ್ಕೆ ತನ್ನಿ. ಅವನ್ನು ಬಗೆಹರಿಸುತ್ತೇನೆ ಎಂದು ಕುಮಾರಸ್ವಾಮಿ ಅವರು ಕಾರ್ಯಕರ್ತರಿಗೆ ತಾಕೀತು ಮಾಡಿದರು’ ಎಂದು ತಿಳಿಸಿದೆ.
‘ಬೆಂಗಳೂರಿನಲ್ಲಿ ಮೂಲಸೌಕರ್ಯ ಸಮಸ್ಯೆ ವಿಪರೀತ ಎನಿಸುವಷ್ಟಾಗಿದೆ. ರಾಜ್ಯ ಸರ್ಕಾರದ ಆಡಳಿತದಿಂದ ಜನ ರೋಸಿ ಹೋಗಿದ್ದಾರೆ. ಇದೆಲ್ಲವನ್ನೂ ಜನರಿಗೆ ತಲುಪಿಸುವ ಕೆಲಸವನ್ನು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಒಟ್ಟಾಗಿ ಮಾಡಬೇಕು ಎಂದು ಕರೆ ನೀಡಿದರು’ ಎಂದು ಪ್ರಕಟಣೆ ವಿವರಿಸಿದೆ.
ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಬೆಂಗಳೂರು ನಗರದ ಎಲ್ಲ ವಿಧಾನಸಭೆ ಕ್ಷೇತ್ರಗಳ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.