ಬೆಂಗಳೂರು: ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಾಯಕತ್ವದಲ್ಲೇ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಂತ್ಯ ಕಾಣಲಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘60 ವರ್ಷಗಳಿಂದ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಕರ್ನಾಟಕದಲ್ಲಿ ಇವರು ಅಂತ್ಯ ಕಾಣುತ್ತಿದ್ದಾರೆ ಎಂದು ಇವತ್ತೇ ಹೇಳುತ್ತಿದ್ದೇನೆ. ನಾವು ಅವರನ್ನು ಸೋಲಿಸಿಯೇ ತೀರುತ್ತೇವೆ’ ಎಂದರು.
‘ಅಲ್ಲಿ ಪ್ರಧಾನಿ ಮೋದಿಯವರು ಶ್ರೀರಾಮ ಅನ್ನುತ್ತಾ ಉಪವಾಸ, ನದಿಸ್ನಾನ, ತಣ್ಣೀರು ಸ್ನಾನ ಇವೆಲ್ಲ ಮಾಡುತ್ತಿದ್ದಾರೆ. ಇಲ್ಲಿ ಇವರಿಗೆ ಸಿದ್ದರಾಮ ಮಾತ್ರ. ಸಿದ್ದರಾಮ ಹೆಸರಿನಲ್ಲಿ ಎನ್‌ಡಿಎ ಸೋಲಿಸಿ 20 ಸೀಟು ಗೆಲ್ಲುತ್ತೇವೆ ಎಂಬ ಅಹಂಕಾರದಿಂದ ಇವೆಲ್ಲ ಮಾಡುತ್ತಿದ್ದಾರೆ. 20 ಸೀಟು ಗೆಲ್ಲುವುದು ಅವರ ಕನಸು ಮಾತ್ರ. ಈ ಬಾರಿ ಮೋದಿಯವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಎಲ್ಲರ ನಿರೀಕ್ಷೆ ಮೀರಿ ಜನರು ಎನ್‌ಡಿ ಮೈತ್ರಿಗೆ ಅಭೂತಪೂರ್ವ ತೀರ್ಪು ಕೊಡುತ್ತಾರೆ’ ಎಂದು ಹೇಳಿದರು.
‘ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಅವರ ಮೇಲಿದ್ದ ಹಿಂದಿನ ಪ್ರಕರಣವನ್ನು ಮತ್ತೆ ತೆರೆದ ಕಾಂಗ್ರೆಸ್‌ನವರು ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆ. ಕುಮಾರಸ್ವಾಮಿ ಜತೆ ಮಂತ್ರಿ ಆಗಿದ್ದವರೊಬ್ಬರು ನಿತ್ಯವೂ ಏನೇನೋ ಮಾತಾಡ್ತಾರೆ. ಟಿಪ್ಪು ವಿಷಯ ಬಿಟ್ಟು ಬೇರೆ ಏನು ಅಂತ ಮಾತನಾಡುತ್ತಾರೆ ಅವರು’ ಎಂದು ಪ್ರಶ್ನಿಸಿದ ಅವರು, ‘ನಾನು ರಾಮನನ್ನು ಪೂಜಿಸುತ್ತೇನೆ. ದರ್ಗಾಕ್ಕೂ ಹೋಗಿದ್ದೇನೆ. ತಿರುಪತಿಗೂ ಹೋಗಿದ್ದೇನೆ. ಬಿಜೆಪಿ ಜತೆ ಹೋದ ಬಳಿಕ ಸೇಡಿನ ರಾಜಕೀಯ ಮಾಡಬೇಡಿ ಎಂದು ಕಾಂಗ್ರೆಸ್‌ಗೆ ಹೇಳುತ್ತೇನೆ. ಎನ್‌ಡಿಎ ಮಿತ್ರ ಪಕ್ಷವಾಗಿ ನಾವು ಕೆಲಸ ಮಾಡುತ್ತಿದ್ದು, ಮಿತ್ರಪಕ್ಷದ ಬಗ್ಗೆ ಮಾತನಾಡುತ್ತೇವೆ’ ಎಂದರು.
ಹಣ ಸಾಗಿಸಿದ್ದಾಗಿ ಆರೋಪ ಮಾಡಿರುವ ದೇವೇಗೌಡರು ಅದನ್ನು ನೋಡಿದ್ದಾರಾ? ಅದರ ಬಗ್ಗೆ ಅವರಿಗೆ ಮಾಹಿತಿ ಇದ್ದರೆ ಬಹಿರಂಗಪಡಿಸಲಿ– ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ
‘ಡಿಸಿಎಂ ಸಾಗಿಸಿದ ಹಣ ಎಷ್ಟು?’
ಉಪಮುಖ್ಯಮಂತ್ರಿಯವರು ಪಂಚರಾಜ್ಯ ಚುನಾವಣೆಯಲ್ಲಿ ಎಲ್ಲೆಲ್ಲಿಗೆ ಹೋಗಿದ್ದಾರೆ? ಎಷ್ಟು ಹಣ ಸಾಗಿಸಿದ್ದಾರೆ ಎಂಬ ಮಾಹಿತಿ ಎಲ್ಲರಿಗೂ ಗೊತ್ತಿದೆ ಎಂದು ದೇವೇಗೌಡ ಹೇಳಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೆಸರು ಉಲ್ಲೇಖಿಸದೇ ಮಾತನಾಡಿದ ಅವರು. ಕರ್ನಾಟಕದ ಸಂಪತ್ತು ಬೆಂಗಳೂರಿನಿಂದ ಎಲ್ಲಿಗೆ ಹೋಗಿದೆ? ಚುನಾವಣಾ ಆಯೋಗ ಎಷ್ಟು ಮೊತ್ತ ವಶಪಡಿಸಿಕೊಂಡಿದೆ ಎಂಬುದು ಜನರಿಗೆ ಗೊತ್ತಿದೆ ಎಂದರು. ನೈಸ್ ಮಾತ್ರವಲ್ಲ; ಬೆಂಗಳೂರಿನ ಎಲ್ಲ ಸಂಸ್ಥೆಗಳು ಹಾಗೂ ಜಲಸಂಪನ್ಮೂಲ ಇಲಾಖೆ ಅವರ ಬಳಿಯೇ ಇದೆ. ಅಲ್ಲೆಲ್ಲ ಏನೇನು ಆಗುತ್ತಿದೆ ಎಂದು ಹೇಳಲು ನಾಚಿಕೆಯಾಗುತ್ತದೆ ಎಂದರು.
ನೈಸ್ ಯೋಜನೆ ವಶಕ್ಕೆ ಪಡೆಯಲು ಆಗ್ರಹ
ನೈಸ್ ಕಂಪನಿಯ ವಶದಲ್ಲಿರುವ 13404 ಎಕರೆ ರೈತರ ಜಮೀನನ್ನು ಸರ್ಕಾರ ವಶಕ್ಕೆ ಪಡೆಯಬೇಕು. ಅದನ್ನು ಮಾಡದೇ ಇದ್ದರೆ ಸಿದ್ದರಾಮಯ್ಯನವರ ರಾಜಕೀಯ ಜೀವನದಲ್ಲಿ ಇದೊಂದು ಕಪ್ಪುಚುಕ್ಕೆಯಾಗಿ ಉಳಿಯಲಿದೆ ಎಂದು ದೇವೇಗೌಡ ಹೇಳಿದರು.
ಅಕ್ಟೋಬರ್‌ನಲ್ಲಿ ಈ ಕುರಿತು ಸಿದ್ದರಾಮಯ್ಯ ಅವರಿಗೆ ಬರೆದ ಪತ್ರ ಪ್ರದರ್ಶಿಸಿದ ಅವರು ಅವರು ಬಡವರ ಪರ ಮಾತನಾಡುತ್ತಾರೆ. ಆ ಯೋಜನೆಯಲ್ಲಿ ಇಷ್ಟೊಂದು ಅಕ್ರಮ ಆಗಿದ್ದರೂ ಬಡವರ ಭೂಮಿ ಲೂಟಿ ಹೊಡೆಯಲಾಗಿದ್ದರೂ ಏನು ಕ್ರಮ ತೆಗೆದುಕೊಂಡಿಲ್ಲ. ಅವರಿಗೆ ಏನು ಕಷ್ಟವಿದೆಯೋ ಎಂದು ವ್ಯಂಗ್ಯವಾಗಿ ಹೇಳಿದರು.
ಈ ಯೋಜನೆಯ ಒಟ್ಟು ಮೌಲ್ಯ ₹7 ಸಾವಿರ ಕೋಟಿ ಎಂದು ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ರಚಿಸಿದ್ದ ಸದನ ಸಮಿತಿಯ ವರದಿಯೇ ಹೇಳಿದೆ. ಯೋಜನೆಯನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಬೇಕು ಎಂದೂ ಸಮಿತಿ ಶಿಫಾರಸು ಮಾಡಿತ್ತು. ಅದನ್ನು ಈಗ ಮಾಡಲಿ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.