ADVERTISEMENT

ಪಕ್ಷ ಸಂಘಟನೆಗಾಗಿ ಜೆಡಿಎಸ್ ಪಾದಯಾತ್ರೆ

ದೇವರಾಜ ಅರಸು ಜನ್ಮದಿನಾಚರಣೆಯಂದು ಚಾಲನೆ: ದತ್ತ, ಮಧು ಬಂಗಾರಪ್ಪ, ಪ್ರಜ್ವಲ್‌ ರೇವಣ್ಣ, ನಿಖಿಲ್‌ ನೇತೃತ್ವ?

​ಪ್ರಜಾವಾಣಿ ವಾರ್ತೆ
Published 30 ಜೂನ್ 2019, 2:33 IST
Last Updated 30 ಜೂನ್ 2019, 2:33 IST
   

ಬೆಂಗಳೂರು: ಮಧ್ಯಂತರ ಚುನಾವಣೆಗೆ ಸಿದ್ಧರಾಗಬೇಕಾಗುತ್ತದೆ ಎಂಬ ಸುಳಿವು ನೀಡಿದ್ದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಪಕ್ಷ ಸಂಘಟನೆಗಾಗಿ ಪಾದಯಾತ್ರೆ ನಡೆಸುವ ತಯಾರಿ ನಡೆಸಿದ್ದಾರೆ.

ಪಾದಯಾತ್ರೆಗೆ ರೂಪರೇಷೆ ಸಿದ್ಧಪಡಿಸಲು ಪ್ರಮುಖರ ಜತೆ ಶನಿವಾರ ಸಭೆ ನಡೆಸಿದ ಗೌಡರು, ಈ ಕುರಿತು ವಿವರವಾಗಿ ಚರ್ಚಿಸಿದರು.

ಆಂಧ್ರಪ್ರದೇಶದಲ್ಲಿ ನಿರಂತರ ಪಾದಯಾತ್ರೆ ನಡೆಸಿ ತಮ್ಮದೇ ಆದ ವೈಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ತಂದ ಜಗನ್ ಮೋಹನ್ ರೆಡ್ಡಿ ಅವರ ಯಶಸ್ಸಿನ ದಾರಿಯನ್ನು ಅನುಸರಿಸುವ ಬಗ್ಗೆ ಕೂಡ ಪಕ್ಷದಲ್ಲಿ ಚರ್ಚೆ ನಡೆದಿದೆ. ವೈ.ಎಸ್‌.ವಿ. ದತ್ತ, ಸಂಸದ ಪ್ರಜ್ವಲ್ ರೇವಣ್ಣ, ಯುವ ಮುಖಂಡರಾದ ಮಧು ಬಂಗಾರಪ್ಪ, ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಯಾತ್ರೆ ನಡೆಸುವ ಬಗ್ಗೆ ಚರ್ಚೆ ನಡೆಯಿತು ಎಂದುಗೊತ್ತಾಗಿದೆ.

ADVERTISEMENT

ಬಳಿಕ ಮಾತನಾಡಿದ ದೇವೇಗೌಡರು, ‘ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದ್ದು ಅದಕ್ಕೆ ಯಾವುದೇ ರೀತಿಯಲ್ಲಿ ಅಪಾಯ ಆಗದಂತೆ ಪಕ್ಷ ಸಂಘಟಿಸಲು ಮುಂದಾಗುತ್ತೇನೆ. ಒಂದು ತಿಂಗಳ ಒಳಗೆ ಜಿಲ್ಲಾ ಘಟಕ ಸೇರಿದಂತೆ ಎಲ್ಲಾ ಘಟಕಗಳನ್ನು ಮರು ಕಟ್ಟುತ್ತೇನೆ’ ಎಂದು ಹೇಳಿದರು.

‘ಪ್ರಾದೇಶಿಕ ಪಕ್ಷಗಳು ಬಲಗೊಳ್ಳದೇ ಹೋದರೆ ರಾಷ್ಟ್ರೀಯ ಪಕ್ಷಗಳು ನಮ್ಮನ್ನು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ. ನಮ್ಮ ಬಗ್ಗೆ ಉದಾಸೀನ ಧೋರಣೆ ಅನುಸರಿಸುತ್ತೇವೆ. ಈ ನಿಟ್ಟಿನಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಮುಂದಾಗಿದ್ದೇನೆ’ ಎಂದರು.

ಪಕ್ಷದ ಮುಖಂಡ ವೈ.ಎಸ್.ವಿ. ದತ್ತ ಮಾತನಾಡಿ, ‘ಹಿಂದುಳಿದ ವರ್ಗಗಳ ನಾಯಕ ದೇವರಾಜ ಅರಸು ಅವರ ಜನ್ಮ ದಿನವಾದ ಆಗಸ್ಟ್ 20ರಂದು ಪಾದಯಾತ್ರೆ ಆರಂಭವಾಗಲಿದೆ. ಪಕ್ಷದ ಸಚಿವರು, ಶಾಸಕರು, ಮುಖಂಡರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ’ ಎಂದು ಅವರು ಹೇಳಿದರು.

‘ಕಾವೇರಿಯಿಂದ ತುಂಗಭದ್ರೆವ ರೆಗೆ ಒಂದು ಯಾತ್ರೆ, ತುಂಗಭದ್ರೆಯಿಂದ ಕೃಷ್ಣೆಯವರೆಗೆ ಮತ್ತೊಂದು ಹಾಗೂ ಕೃಷ್ಣೆಯಿಂದ ಮಲಪ್ರಭಾವರೆಗೆ ಹೀಗೆ ಮೂರು ಯಾತ್ರೆ ಮಾಡಲು ಚಿಂತನೆ ನಡೆದಿದೆ. ನಂಜನಗೂಡಿನಿಂದ ಹರಿಹರದವರೆಗೆ ಮೊದಲ ಹಂತದ ಯಾತ್ರೆ ನಡೆಯಲಿದೆ. ಅಂದಾಜು 1475 ಕಿ.ಮೀ ದೂರ ಪಾದಯಾತ್ರೆ ನಡೆಸುವ ಬಗ್ಗೆ ಚಿಂತನೆ ನಡೆದಿದೆ’ ಎಂದು ಅವರು ಹೇಳಿದರು.

ಸೋತವರಿಗೆ ನೀರು ಬಿಡುಸಲು ಆಗುತ್ತಾ?: ರೇವಣ್ಣ

ಮೈಸೂರು/ಮಂಡ್ಯ: ‘ಕೆಲವರಿಗೆ ಎಚ್‌.ಡಿ.ದೇವೇಗೌಡ ಕುಟುಂಬದ ಬಗ್ಗೆ ಮಾತನಾಡದಿದ್ದರೆ ನಿದ್ದೆ ಬರಲ್ಲ. ಅದಕ್ಕಾಗಿ, ಎಲ್ಲದಕ್ಕೂ ಅವರ ಕುಟುಂಬವನ್ನು ಎಳೆದು ತರುತ್ತಿದ್ದಾರೆ’ ಎಂದು ಸಚಿವ ಎಚ್‌.ಡಿ.ರೇವಣ್ಣ ಶನಿವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

‘ನಾಲೆಗಳಿಗೆ ನೀರು ಬಿಡಬೇಕು ಎಂದು ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ದೇವೇಗೌಡರಿಗೆ ನೀರು ಬಿಡಿಸೋಕೆ ಆಗುತ್ತಾ? ಅವರು ಪಾಪ ಸೋತು ಮನೆಯಲ್ಲಿ ಕುಳಿತಿದ್ದಾರೆ!‘ ಎಂದು ಟೀಕಾಕಾರರನ್ನು ತಿವಿದರು.

ಕೆಆರ್‌ಎಸ್‌ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಮಂಡ್ಯದಲ್ಲಿ ನಡೆದ ರೈತ ಪ್ರತಿಭಟನೆಯನ್ನು ಪ್ರಸ್ತಾಪಿಸಿದ ಅವರು, ‘ರಾಜಕೀಯ ಮಾಡುವುದಕ್ಕಾಗಿ ರೈತರು ಪ್ರತಿಭಟನೆಗೆ ಕುಳಿತಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಸಮಸ್ಯೆ ಗೊತ್ತಿರುವವರ ಬಳಿಯಾದರೆ ಹೋಗಿ ಮಾತನಾಡಬಹುದು; ಗೊತ್ತಿಲ್ಲದವರ ಬಳಿ ಏನು ಮಾತನಾಡುವುದು’ ಎಂದು ಕುಟುಕಿದರು.

‌ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಜೆಡಿಎಸ್‌ ಶಾಸಕರು ಸ್ಥಳಕ್ಕೆ ಹೋಗದೇ ಇದ್ದುದನ್ನೂ ಸಮರ್ಥಿಸಿಕೊಂಡರು.

15 ದಿನಕ್ಕಷ್ಟೇ ಹೇಮಾವತಿ ನೀರು: ಹೇಮಾವತಿ ಜಲಾಶಯದ ನೀರು ಕುಡಿಯಲು 15 ದಿನಗಳಿಗೆ ಮಾತ್ರ ಸಾಕಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ರೇವಣ್ಣ ಹೇಳಿದರು.

ನಾನು ರೋಡ್‌ ಮಂತ್ರಿ: ‘ನಾನು ರೋಡ್‌ ಮಂತ್ರಿ, ನೀರಿನ ವಿಚಾರ ನನಗೆ ಗೊತ್ತಿಲ್ಲ. ರಾಜ್ಯದಲ್ಲಿ ಮಧ್ಯಂತರ ಚುನಾವಣಾ ವಿಷಯವೂ ನನಗೆ ಗೊತ್ತಿಲ್ಲ. ನಾನು ರಸ್ತೆ ಕೆಲಸದಲ್ಲಿ ತಲ್ಲೀನನಾಗಿದ್ದೇನೆ. ಮೈಸೂರು– ಬೆಂಗಳೂರು ದಶಪಥ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಹೆದ್ದಾರಿಯುದ್ದಕ್ಕೂ ಐದು ಬೈಪಾಸ್‌, ತಾಲ್ಲೂಕು ಕೇಂದ್ರಗಳಲ್ಲಿ ಸರ್ವೀಸ್‌ ರಸ್ತೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ’ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.