ADVERTISEMENT

‘ಕೈ’ ಕೊಡುವವರ ವಿರುದ್ಧ ‘ಅನರ್ಹ’ ಅಸ್ತ್ರ

ಮೈತ್ರಿ ಪಕ್ಷಗಳ ಪ್ರತ್ಯೇಕ ಶಾಸಕಾಂಗ ಪಕ್ಷದ ಸಭೆ ಇಂದು; ನಾಯಕರಿಂದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 19:25 IST
Last Updated 7 ಫೆಬ್ರುವರಿ 2019, 19:25 IST

ಬೆಂಗಳೂರು: ಮೈತ್ರಿ ಪಕ್ಷಗಳ (ಜೆಡಿಎಸ್‌– ಕಾಂಗ್ರೆಸ್‌) ಶಾಸಕಾಂಗ ಪಕ್ಷದ ಪ್ರತ್ಯೇಕ ಸಭೆ ಶುಕ್ರವಾರ ಬಜೆಟ್‌ ಮಂಡನೆಗೂ ಮುನ್ನ ನಡೆಯಲಿದೆ. ಈ ಸಭೆಗೆ ಗೈರಾದವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಎರಡೂ ಪಕ್ಷಗಳು ಸಭಾಧ್ಯಕ್ಷರಿಗೆ ದೂರು ನೀಡುವ ಸಾಧ್ಯತೆ ಇದೆ.

‘ಸಭೆಗೆ ಗೈರಾದರೆ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಸ್ವ ಇಚ್ಛೆಯಿಂದ ಬಿಟ್ಟುಕೊಡಲು ಇಚ್ಛಿಸಿದ್ದೀರಿ ಎಂದು ಪರಿಗಣಿಸಿ, ತಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಸಂವಿಧಾನದ ಅನುಚ್ಛೇದ 10ರ (ಪಕ್ಷಾಂತರ ನಿಷೇಧ ಕಾಯ್ದೆ) ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಜೆಡಿಎಸ್‌ ಮತ್ತು ಕಾಂಗ್ರೆಸ್‌ ತಮ್ಮ ಶಾಸಕರಿಗೆ ನೋಟಿಸ್‌ ನೀಡಿವೆ.

ಅತೃಪ್ತ ನಾಲ್ವರು ಕಾಂಗ್ರೆಸ್‌ ಶಾಸಕರು (ರಮೇಶ ಜಾರಕಿಹೊಳಿ, ಬಿ. ನಾಗೇಂದ್ರ, ಮಹೇಶ್ ಕುಮಟಳ್ಳಿ, ಉಮೇಶ ಜಾಧವ್‌) ಪಕ್ಷದ ನಾಯಕರ ಸಂಪರ್ಕದಲ್ಲಿ ಇಲ್ಲ. ಹೀಗಾಗಿ, ಈ ಶಾಸಕರ ಮನೆ ಬಾಗಿಲಿಗೆ ನೋಟಿಸ್‌ ಅಂಟಿಸಲಾಗಿದೆ. ಇವರು ಸಿಎಲ್‌ಪಿ ಸಭೆಗೆ ಗೈರಾಗುವುದು ಬಹುತೇಕ ಖಚಿತ.

ADVERTISEMENT

ಶಾಸಕ ಆನಂದ್‌ ಸಿಂಗ್‌ ಮೇಲೆ ಹಲ್ಲೆ ನಡೆಸಿದ ಬಳಿಕ ತಲೆಮರೆಸಿಕೊಂಡಿರುವ ಜೆ.ಎನ್. ಗಣೇಶ್‌ ಮನೆ ಬಾಗಿಲಿಗೂ ನೋಟಿಸ್‌ ಅಂಟಿಸಲಾಗಿದೆ. ಬಂಧನ ಭೀತಿ ಎದುರಿಸುತ್ತಿರುವ ಅವರೂ ಹಾಜರಾಗುವ ಸಾಧ್ಯತೆ ಇಲ್ಲ.

ಪಕ್ಷದ ನಾಯಕರ ಸಂಪರ್ಕದಿಂದ ದೂರ ಸರಿದಿರುವ ಬಿ.ಸಿ. ಪಾಟೀಲ ಹಾಜರಾಗುತ್ತಾರೆಯೇ ಎಂಬ ಕುತೂಹಲ ಇದೆ. ಬಿಜೆಪಿ ಜೊತೆ ಅವರೂ ಕೈ ಜೋಡಿಸಿರುವ ಅನುಮಾನಗಳಿವೆ. ಆದರೆ, ಸೂಕ್ತ ಸ್ಥಾನಮಾನಕ್ಕಾಗಿ ಪಕ್ಷದ ಮೇಲೆ ಒತ್ತಡ ಹೇರುವ ತಂತ್ರ ಮಾಡುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳಿವೆ. ಶಾಸಕರಾದ ಎಸ್‌. ರಾಮಪ್ಪ ಮತ್ತು ಡಾ. ಸುಧಾಕರ್ ಸಭೆಗೆ ಹಾಜರಾಗುವ ವಿಶ್ವಾಸವನ್ನು ಕಾಂಗ್ರೆಸ್ ಹೊಂದಿದೆ.

ಈ ಮಧ್ಯೆ, ‘ಅತೃಪ್ತರ ವಿರುದ್ಧ ತರಾತುರಿಯಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳಬೇಡಿ. ಎಚ್ಚರಿಕೆ ನೀಡುವ ಕೆಲಸವನ್ನಷ್ಟೇ ಮಾಡಿ’ ಎಂದು ಕಾಂಗ್ರೆಸ್‌ನ ಕಾನೂನು ಸಲಹೆಗಾರ ಕಪಿಲ್‌ ಸಿಬಲ್‌ ಅವರು ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಸಲಹೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ಜೆಡಿಎಸ್‌ನ ಕೆಲವು ಶಾಸಕರೂ ‘ಆಪರೇಷನ್‌ ಕಮಲ’ಕ್ಕೆ ಬಲಿಯಾಗುವ ಆತಂಕ ಆ ಪಕ್ಷದ ನಾಯಕರಲ್ಲಿದೆ. ಮುಖ್ಯಮಂತ್ರಿ ಜೊತೆ ಮುನಿಸಿಕೊಂಡಿರುವ ಕೆ.ಆರ್‌. ಪೇಟೆ ಶಾಸಕ ನಾರಾಯಣ ಗೌಡ, ಜೆಡಿಎಲ್‌ಪಿ ಸಭೆಗೆ ಗೈರಾಗುವ ಸಂಭವ ಇದೆ. ಮುಂಬೈಯಲ್ಲಿರುವ ನಾರಾಯಣ ಗೌಡ ಅವರು ಬಿಜೆಪಿ ತೆಕ್ಕೆಯಲ್ಲಿರುವ ಬಗ್ಗೆ ದಟ್ಟವಾದ ವದಂತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.