ADVERTISEMENT

ಜೆಡಿಎಸ್‌ ಪಟ್ಟು‌: ಕಲಾಪಕ್ಕೆ ಪೆಟ್ಟು

ಬಿಜೆಪಿಯ ರವಿಕುಮಾರ್‌ ಪ‍್ರಸ್ತಾವ: ಧರಣಿ ನಡೆಸಿದ ಪ್ರತಿಪಕ್ಷ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 19:31 IST
Last Updated 19 ಮಾರ್ಚ್ 2021, 19:31 IST
 ವಿಧಾನಪರಿಷತ್‌
ವಿಧಾನಪರಿಷತ್‌   

ಬೆಂಗಳೂರು: ನರ್ಸಿಂಗ್‌ ಮತ್ತು ಅರೆ ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ ಅನುಮತಿ ನೀಡುವಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಕುರಿತು ತನಿಖೆಗೆ ಸದನ ಸಮಿತಿ ರಚಿಸಬೇಕೆಂಬ ಬೇಡಿಕೆ ಮುಂದಿಟ್ಟು ಜೆಡಿಎಸ್‌ ಸದಸ್ಯರು ಶುಕ್ರವಾರವೂ ವಿಧಾನ ಪರಿಷತ್‌ನಲ್ಲಿ ಧರಣಿ ನಡೆಸಿದರು. ಇದರಿಂದಾಗಿ ಇಡೀ ದಿನ ಯಾವುದೇ ಕಲಾಪ ನಡೆಯಲಿಲ್ಲ.

ಬಿಜೆಪಿ ಸದಸ್ಯ ಎನ್.ರವಿಕುಮಾರ್‌ ಗುರುವಾರ ಮಂಡಿಸಿದ ಗಮನ ಸೆಳೆಯುವ ಸೂಚನೆಯ ಮೇಲೆ ಚರ್ಚೆಗೆ ಅವಕಾಶ ಪಡೆದ ಜೆಡಿಎಸ್‌ ಸದಸ್ಯರು, ಸದನ ಸಮಿತಿ ರಚನೆಗೆ ಒತ್ತಾಯಿಸಿ ಸಭಾಪತಿ ಪೀಠದ ಎದುರು ಧರಣಿ ಆರಂಭಿಸಿದ್ದರು. ಶುಕ್ರವಾರವೂ ಸದನದ ಕಲಾಪ ಆರಂಭವಾದಾಗ ಜೆಡಿಎಸ್‌ ಸದಸ್ಯರು ಧರಣಿಯಲ್ಲೇ ಇದ್ದರು.

ಸ್ವಸ್ಥಾನಕ್ಕೆ ಮರಳುವಂತೆ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾಡಿದ ಮನವಿಗಳಿಗೆ ಜೆಡಿಎಸ್‌ ಸದಸ್ಯರು ಸ್ಪಂದಿಸಲಿಲ್ಲ. ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ಮತ್ತು ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್ ಕೂಡ ಜೆಡಿಎಸ್‌ ಬೇಡಿಕೆಯನ್ನು ಬೆಂಬಲಿಸಿದರು. ಹತ್ತು ನಿಮಿಷ ಕಲಾಪ ಮುಂದೂಡಿದ ಸಭಾಪತಿ, ತಮ್ಮ ಕೊಠಡಿಯಲ್ಲಿ ಎಲ್ಲ ಪಕ್ಷಗಳ ನಾಯಕರೊಂದಿಗೆ ಸಂಧಾನ ಸಭೆ ನಡೆಸಿದರು.

ADVERTISEMENT

ಬೇಡಿಕೆ ಒಪ್ಪದ ಸರ್ಕಾರ: ಮತ್ತೆ ಕಲಾಪ ಆರಂಭವಾದಾಗ ಸದನದಲ್ಲಿ ಹಾಜರಿದ್ದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ‘ನರ್ಸಿಂಗ್‌ ಮತ್ತು ಅರೆ ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ನೀಡಿರುವುದರಲ್ಲಿ ಯಾವುದೇ ಅಕ್ರಮವೂ ನಡೆದಿಲ್ಲ. ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್, ಅಕಾಡೆಮಿಕ್‌ ಕೌನ್ಸಿಲ್‌ಗಳ ಶಿಫಾರಸಿನಂತೆ ನಿರ್ಧಾರ ಕೈಗೊಳ್ಳಲಾಗಿದೆ. ಹಿಂದೆ ಆಗಿರುವ ಲೋಪಗಳನ್ನು ಸರಿಪಡಿಸಲು ನಾನು ಪ್ರಯತ್ನಿಸುತ್ತಿದ್ದೇನೆ’ ಎಂದರು.

‘ಸದನ ಸಮಿತಿಯ ತನಿಖೆ ಅಗತ್ಯವಿಲ್ಲ. ಇಲಾಖೆಯ ಹಿರಿಯ ಅಧಿಕಾರಿಗಳು ಅಥವಾ ವಿಷಯ ತಜ್ಞರ ತ್ರಿಸದಸ್ಯ ಸಮಿತಿಯಿಂದ ತನಿಖೆ ನಡೆಸಲು ಸರ್ಕಾರ ಸಿದ್ಧವಾಗಿದೆ’ ಎಂದು ಪ್ರಕಟಿಸಿದರು.

ಹಿಂದೆ ಹಲವು ಬಾರಿ ಸದನ ಸಮಿತಿ ರಚಿಸಿದ್ದನ್ನು ಉಲ್ಲೇಖಿಸಿದ ಜೆಡಿಎಸ್‌ನ ಮರಿತಿಬ್ಬೇಗೌಡ ಮತ್ತು ಕೆ.ಟಿ. ಶ್ರೀಕಂಠೇಗೌಡ, ತಮ್ಮ ಬೇಡಿಕೆ ಒಪ್ಪುವವರೆಗೂ ಧರಣಿ ನಿಲ್ಲಿಸುವುದಿಲ್ಲ ಎಂದರು.

ಮತ ವಿಭಜನೆಯ ಮೂಲಕ ತೀರ್ಮಾನಕ್ಕೆ ಬರುವಂತೆ ವಿರೋಧ ಪಕ್ಷದ ನಾಯಕರು ಸಲಹೆ ನೀಡಿದರು. ಜೆಡಿಎಸ್‌ ಮತ್ತು ಬಿಜೆಪಿ ಸದಸ್ಯರ ವಾಕ್ಸಮರದಿಂದ ಕೋಲಾಹಲದ ವಾತಾವರಣ ಸೃಷ್ಟಿಯಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ನೀಡಿದ ಸಭಾಪತಿ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.

ಭ್ರಷ್ಟಾಚಾರದ ಆರೋಪ– ಪ್ರತ್ಯಾರೋಪ

‘ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ 62 ಸಂಸ್ಥೆಗಳಿಗೆ ಕಾಲೇಜು ಆರಂಭಕ್ಕೆ ಅನುಮತಿ ನೀಡುವಂತೆ ಶಿಫಾರಸು ಮಾಡಿತ್ತು. ವೈದ್ಯಕೀಯ ಶಿಕ್ಷಣ ಇಲಾಖೆ ಹಣ ಕೊಟ್ಟ 47 ಸಂಸ್ಥೆಗಳಿಗೆ ಮಾತ್ರ ಅನುಮತಿ ನೀಡಿದೆ. ಭಾರಿ ಭ್ರಷ್ಟಾಚಾರ ನಡೆದಿದೆ. ಈ ಕುರಿತು ಸದನ ಸಮಿತಿ ತನಿಖೆಗೆ ಹಿಂದೇಟು ಯಾಕೆ’ ಎಂದು ಮರಿತಿಬ್ಬೇಗೌಡ ಆರೋಪಿಸಿದರು.

ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ‘ತನಿಖೆಯ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸುವುದಕ್ಕಾಗಿಯೇ ಸದನ ಸಮಿತಿ ರವಿಸುವಂತೆ ಬೇಡಿಕೆ ಇಟ್ಟಿದ್ದಾರೆ’ ಎಂದು ಪ್ರತ್ಯಾರೋಪ ಮಾಡಿದರು.

ಮರಿತಿಬ್ಬೇಗೌಡರಿಗೆ ಗದರಿದ ಸಭಾಪತಿ

ಮರಿತಿಬ್ಬೇಗೌಡ ಪದೇ ಪದೇ ಮಾತು ಮುಂದುವರಿಸಲು ಯತ್ನಿಸುತ್ತಿದ್ದರು. ತಾವು ಅನುಮತಿ ಕೊಡುವುದಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದಾಗ, ‘ಏಕೆ ಕೊಡುವುದಿಲ್ಲ’ ಎಂದು ಪ್ರಶ್ನಿಸಿದರು.

‘ಅದು ಪೀಠದ ಅಧಿಕಾರ. ಅದನ್ನು ಕೇಳುವ ಹಕ್ಕು ನಿಮಗಿಲ್ಲ’ ಎಂದು ಸಭಾಪತಿ ಗದರಿದರು.

ಸಚಿವ ಸುಧಾಕರ್ ಉತ್ತರ ನೀಡುತ್ತಿದ್ದಾಗ ಕೋಪೋದ್ರಿಕ್ತರಾದ ಮರಿತಿಬ್ಬೇಗೌಡ ಏರು ದನಿಯಲ್ಲಿ ಕೂಗಾಡುತ್ತಲೇ ಇದ್ದರು. ಆಗ ಕಠಿಣ ಮಾತುಗಳಿಂದಲೇ ಗದರಿದ ಹೊರಟ್ಟಿ, ಸುಮ್ಮನಿರುವಂತೆ ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.